ಸರ್ಕಾರದಿಂದ ಶಿಲಾ ಸಮಾಧಿಗಳಿರುವ ಹಿರೇ ಬೆಣಕಲ್ ಅಭಿವೃದ್ಧಿ?

KannadaprabhaNewsNetwork |  
Published : Jun 17, 2025, 02:25 AM ISTUpdated : Jun 17, 2025, 10:20 AM IST
ಹಿರೇಬೆಣಕಲ್ ಮೊರೇರ ತಟ್ಟೆಗಳು ಅಥವಾ ಶಿಲಾಸಮಾಧಿಗಳು. | Kannada Prabha

ಸಾರಾಂಶ

ಹಿರೇಬೆಣಕಲ್ ಮೊರೇರ ತಟ್ಟೆಗಳ (ಶಿಲಾ ಸಮಾಧಿಗಳಿರುವ) ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಸೋಮರಡ್ಡಿ ಅಳವಂಡಿ

  ಕೊಪ್ಪಳ :  ವಿಶ್ವ ಪಾರಂಪರಿಕ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮತ್ತು ‘ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣನ್ಯೂಸ್’ ಆಯ್ಕೆ ಮಾಡಿದ ಕರ್ನಾಟಕದ 7 ಅದ್ಭುತಗಳಲ್ಲೊಂದಾಗಿರುವ ಹಾಗೂ ವಿಶ್ವದ ಪ್ರಾಗೈತಿಕ ಇತಿಹಾಸವನ್ನು ಗಟ್ಟಿಯಾಗಿ ಇಂದಿಗೂ ಹಿಡಿದುಕೊಂಡಿರುವ ಹಿರೇಬೆಣಕಲ್ ಮೊರೇರ ತಟ್ಟೆಗಳ (ಶಿಲಾ ಸಮಾಧಿಗಳಿರುವ) ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಐತಿಹಾಸಿಕ ಪ್ರವಾಸಿತಾಣಗಳ ಅಭಿವೃದ್ಧಿಗೆ ರೂಪಿಸಿರುವ ದತ್ತು ಯೋಜನೆಯಡಿ ಹಿರೇಬೆಣಕಲ್ ಶಿಲಾಸಮಾಧಿಗಳ ಸ್ಥಳವನ್ನು ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸಿದೆ. ಇದಕ್ಕೆ ಪೂರಕವಾಗಿಯೇ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು ಜೂ.17ರಂದು ಹಿರೇಬೆಣಕಲ್‌ನಲ್ಲಿಯೇ ಇಡೀ ದಿನ ಅಭಿವೃದ್ಧಿಯ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಸ್ಥಳೀಯರಿಂದಲೂ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಶಿಲಾ ಸಮಾಧಿಗಳು ರಾಜ್ಯದಲ್ಲಿ ಅಷ್ಟೇ ಅಲ್ಲ, ದೇಶದಲ್ಲಿ ಮತ್ತು ವಿಶ್ವದಲ್ಲಿಯೇ ವಿಶೇಷ ಮಹತ್ವ ಪಡೆದಿವೆ. ಈ ಕಾರಣಕ್ಕಾಗಿಯೇ ಈಗಾಗಲೇ ವಿಶ್ವಪರಂಪರಿಕ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಸ್ಥಳದ ಮಹತ್ವ

ಮೊರೇರ ತಟ್ಟೆಗಳು ಎಂದು ಕರೆಯಲ್ಪಡುವ ಶಿಲಾ ಸಮಾಧಿಗಳು ಭಾರತದ ಕೆಲವೇ ಬೃಹತ್ ಶಿಲಾ ತಾಣಗಳಲ್ಲಿ ಒಂದಾಗಿವೆ. ಕ್ರಿ.ಪೂ. 800ರಿಂದ 200ರಲ್ಲಿ ನಿರ್ಮಾಣವಾಗಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಿರೇಬೆಣಕಲ್ ಮೊರೇರ ತಟ್ಟೆಗಳು ವಿಶ್ವಪಾರಂಪರಿಕ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.

ಎಲ್ಲಿದೆ?

ಗಂಗಾವತಿ ನಗರದಿಂದ 10 ಕಿಲೋ ಮೀಟರ್ ದೂರದಲ್ಲಿ ಮತ್ತು ಜಿಲ್ಲಾ ಕೇಂದ್ರ ಕೊಪ್ಪಳದಿಂದ 50 ಕಿಲೋ ಮೀಟರ್ ದೂರದಲ್ಲಿ ಇರುವ ಹಿರೇಬೆಣಕಲ್ ಗ್ರಾಮದ ಬಳಿಯಿಂದ ಸುಮಾರು 3 ಕಿಲೋ ಮೀಟರ್‌ ಬೆಟ್ಟವನ್ನು ಏರಿದರೆ ಈ ಶಿಲಾಸಮಾಧಿಗಳನ್ನು ನೋಡಬಹುದಾಗಿದೆ. 400ಕ್ಕೂ ಹೆಚ್ಚು ಶಿಲಾ ಗೋರಿಗಳು ಇದ್ದು, ಅನೇಕವು ನಶಿಸಿ ಹೋಗಿ, ಕೆಲವು ಉಳಿದುಕೊಂಡಿವೆ. ಇವುಗಳು ಜಗತ್ತಿನಲ್ಲಿಯೇ ಅತ್ಯಂತ ಪ್ರಾಗೈತಿಹಾಸವನ್ನು ಇಂದಿಗೂ ಸಾರುವ ಮಹತ್ವದ ಸಾಕ್ಷ್ಯಗಳಂತಿವೆ.

ಕರ್ನಾಟಕದ 7 ಅದ್ಭುತಗಳಲ್ಲೊಂದು: 

ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್ ಜಂಟಿಯಾಗಿ ಕರ್ನಾಟಕದ ಏಳು ಅದ್ಭುತಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಮೊರೇರ ತಟ್ಟೆಗಳು ಅಥವಾ ಶಿಲಾ ಸಮಾಧಿಗಳು ಸ್ಥಾನ ಪಡೆದಿರುವುದು ವಿಶೇಷ.

ನಿಧಿಗಳ್ಳರಿಂದ ರಕ್ಷಣೆ,ರಸ್ತೆ ನಿರ್ಮಾಣ ಅವಶ್ಯ

ವಿಶ್ವದಲ್ಲಿಯೇ ಪ್ರಾಗೈತಿಕ  ಹಿರಿಮೆಯನ್ನು ಹಿಡಿದಿಟ್ಟುಕೊಂಡಿರುವ ಶಿಲಾ ಸಮಾಧಿಗಳನ್ನು ಹಾಳಾಗದಂತೆ ಸಂರಕ್ಷಣೆ ಮಾಡಬೇಕಾಗಿದೆ. ಸುತ್ತಲೂ ಬೇಲಿ ಹಾಕಬೇಕಾಗಿದೆ. ಅವುಗಳನ್ನು ನಿರಂತರವಾಗಿ ಹಗಲು, ರಾತ್ರಿ ಕಾಯುವ ಮೂಲಕ ನಿಧಿಗಳ್ಳರಿಂದ ರಕ್ಷಿಸಬೇಕಾಗಿದೆ. ಇಲ್ಲಿಗೆ ಸುಲಭವಾಗಿ ತೆರಳಲು ರಸ್ತೆ ನಿರ್ಮಾಣ, ಅವುಗಳ ಮಹತ್ವ ಸಾರುವ ಫಲಕ ಅಳವಡಿಕೆ ಹಾಗೂ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿವೆ.

ಹಿರೇಬೆಣಕಲ್ ಶಿಲಾಸಮಾಧಿಗಳು ಕೇವಲ ರಾಜ್ಯವಲ್ಲದೆ ದೇಶದಲ್ಲಿಯೇ ವಿಶೇಷವಾಗಿವೆ. ಇವುಗಳ ಅಭಿವೃದ್ಧಿ ಮಾಡುವುದು ಅಗತ್ಯವಿದ್ದು, ನಾಡಿಗೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ.

- ಎಚ್.ಕೆ.ಪಾಟೀಲ್, ಪ್ರವಾಸೋದ್ಯಮ ಸಚಿವ

ಹಿರೇಬೆಣಕಲ್ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ. ಅಲ್ಲಿಗೆ ತೆರಳುವ ಮಾರ್ಗ ಅತಿಕ್ರಮಣವಾಗಿದ್ದು ತೆರವಾಗಬೇಕು. ಯಾತ್ರಿಕರಿಗೆ ವಿಶ್ರಾಂತಿ ಕೊಠಡಿ ನಿರ್ಮಾಣ, ಗುಡ್ಡದ ಮೇಲೆ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು.

- ಶರಣಬಸಪ್ಪ ಕೋಲ್ಕಾರ ಸಂಶೋಧಕರು

PREV
Read more Articles on

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...