ಕನ್ನಡಪ್ರಭ ವಾರ್ತೆ ಗೋಕರ್ಣ
ಓಂ ಬೀಚ್ ಮುಖ್ಯ ರಸ್ತೆಯಿಂದ ಗೋಗರ್ಭ ಹಾಗೂ ಅಲ್ಲಿಂದ ರಾಮಮಂದಿರದ ಮೇಲ್ಭಾಗದ ಪರ್ವತದ ಮೂಲಕ ಮಹಾಗಣಪತಿ ಮಂದಿರಕ್ಕೆ ಸಾಗುವ ಜಿಲ್ಲಾ ರಸ್ತೆ ಈ ಹಿಂದೆ ನಿರ್ಮಿಸಿದ್ದರೂ ಈಗ ಸಂಪೂರ್ಣ ಹೊಂಡ ಬಿದ್ದಿದೆ. ಹಲವು ವರ್ಷಗಳಿಂದ ರಿಪೇರಿ ಮಾಡುವಂತೆ ಮನವಿ ಮಾಡಿದರೂ ದುರಸ್ತಿ ಮಾಡದೆ ಹಾಗೆ ಬಿಡಲಾಗಿದೆ. ಪತ್ರಿಕಾ ವರದಿ, ಜನರ ಮನವಿಯ ಪರಿಣಾಮ ಮೂರು ಕಿಮೀ ಹೆಚ್ಚು ದೂರದ ಮಾರ್ಗದಲ್ಲಿ ಅಂತೂ ಎಂಟುನೂರು ಮೀಟರ್ ಸಿಮೆಂಟ್ ರಸ್ತೆ ಮಾಡಲಾಗಿದೆ. ಉಳಿದ ಭಾಗ ಹಾಗೆ ಉಳಿದಿದ್ದು, ರಸ್ತೆ ಸಂಪೂರ್ಣ ಕಿತ್ತು ಬಿದ್ದಿದೆ. ಈ ಭಾಗದಲ್ಲಿ ಹೊಟೇಲ್ ರೆಸಾರ್ಟ್‌ಗಳು ಸಾಕಷ್ಟು ಇದ್ದು, ಇಲ್ಲಿಗೆ ಬರುವ ಪ್ರವಾಸಿಗರು ಹರಸಾಹಸ ಮಾಡುತ್ತಾ ಬರುತ್ತಿದ್ದು, ರಸ್ತೆ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಆದರೆ ಪ್ರಸ್ತುತ ಉಪಮುಖ್ಯಮಂತ್ರಿಗಳು ಹೆಲಿಕಾಪ್ಟರ್‌ನಲ್ಲಿ ಬಂದ ಬಳಿಕ ಇದೇ ಮಾರ್ಗದಲ್ಲಿ ತೆರಳಿ ಮುಂದಿನ ಪ್ರಯಾಣ ಮಾಡಬೇಕಾಗಿದ್ದು, ಈ ಕಾರಣಕ್ಕಾದರೂ ರಸ್ತೆ ತಾತ್ಕಾಲಿಕ ರಿಪೇರಿಯಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.ಡಿಸಿಎಂ ಸ್ವಾಗತಕ್ಕೆ ಸಜ್ಜು:ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನ ಸ್ವಾಗತಿಸಲು ಗೋಕರ್ಣ ಸಜ್ಜುಗೊಂಡಿದೆ.ಬೆಳಗಾವಿಯಿಂದ ಹೆಲಿಕಾಪ್ಟರ್ ಮೂಲಕ ಬೆಳಗ್ಗೆ ೯.೧೫ಕ್ಕೆ ಬಂದು ಇಲ್ಲಿನ ಗೋಗರ್ಭದ ಬಳಿಯ ಮೈದಾನದಲ್ಲಿನ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದಾರೆ. ನಂತರ ರಸ್ತೆಯ ಮೂಲಕ ಮಾದನಗೇರಿ ಆಂದ್ಲೆಯಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಳಿಕ ಗೋಕರ್ಣಕ್ಕೆ ಬರಲಿದ್ದು, ನಂತರ ಇಲ್ಲಿನ ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಎನ್ನಲಾಗಿದೆ.