ಧಾರವಾಡ ಅಭಿವೃದ್ಧಿ ಪೂರಕ ಆಗಲಿದೆಯೇ ರಾಜ್ಯ ಬಜೆಟ್‌!

KannadaprabhaNewsNetwork | Published : Feb 16, 2024 1:51 AM

ಸಾರಾಂಶ

ಧಾರವಾಡ ನಗರದಲ್ಲಿ ವಿಪರೀತ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ. ಲಾರಿ, ಬಸ್ಸುಗಳು ನಗರದಲ್ಲಿ ಹೋಗಲು ಹರಸಾಹಸ ಪಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ವರ್ತುಲ ರಸ್ತೆಯ ಬೇಡಿಕೆ ಇದ್ದು ಈ ಬಜೆಟ್‌ನಲ್ಲಾದರೂ ವರ್ತುಲ ರಸ್ತೆ ಘೋಷಣೆ ನಿರೀಕ್ಷೆ

ಬಸವರಾಜ ಹಿರೇಮಠ ಧಾರವಾಡ

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಘೋಷಣೆ ಸೇರಿದಂತೆ ಧಾರವಾಡದ ಅಭಿವೃದ್ಧಿ ದೃಷ್ಟಿಯಿಂದ ಫೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ನಲ್ಲಿ ಧಾರವಾಡದ ಜನತೆ ತೀವ್ರ ನಿರೀಕ್ಷೆ ಹೊಂದಿದ್ದಾರೆ.

ಜನಸಂಖ್ಯೆ, ಆದಾಯ ಸಂಗ್ರಹ, ವ್ಯಾಪ್ತಿ ಪ್ರದೇಶ ಸೇರಿದಂತೆ ಪ್ರತ್ಯೇಕ ಪಾಲಿಕೆ ಆಗಲು ಧಾರವಾಡ ಎಲ್ಲ ರೀತಿಯ ಅರ್ಹತೆ ಪಡೆದಿರುವ ಕಾರಣ ಹಲವು ವರ್ಷಗಳಿಂದ ಇದಕ್ಕಾಗಿ ಹೋರಾಟ ನಡೆದಿದೆ. ಇದರ ಫಲವಾಗಿ ಕಳೆದ ಡಿಸೆಂಬರ್‌ ತಿಂಗಳಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯ ಸದನದಲ್ಲಿ ಚರ್ಚೆಗೆ ಬಂದು ಶಾಸಕ ಅರವಿಂದ ಬೆಲ್ಲದ ಅವರ ಪ್ರಶ್ನೆಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಉತ್ತರ ನೀಡಿ, ಧಾರವಾಡ ಜನತೆಯ ಬೇಡಿಕೆಯ ಅನ್ವಯ ಅರ್ಹತೆ ಪರಿಶೀಲಿಸಿ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸಲು ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಧಾರವಾಡದ ದಕ್ಷಿಣ ಭಾಗಕ್ಕೆ ವರ್ತುಲ ರಸ್ತೆಯ ಬೇಡಿಕೆ ಹಲವು ವರ್ಷಗಳಿಂದ ಇದೆ. ಬೆಳಗಾವಿ, ದಾವಣಗೆರೆ ಕಡೆಗಳಿಂದ ಸವದತ್ತಿ ಹಾಗೂ ನವಲಗುಂದ ಕಡೆಗೆ ಹೋಗಲು ಧಾರವಾಡ ನಗರದಲ್ಲಿಯೇ ಹೋಗಬೇಕು. ಧಾರವಾಡ ನಗರದಲ್ಲಿ ವಿಪರೀತ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ. ಲಾರಿ, ಬಸ್ಸುಗಳು ನಗರದಲ್ಲಿ ಹೋಗಲು ಹರಸಾಹಸ ಪಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ವರ್ತುಲ ರಸ್ತೆಯ ಬೇಡಿಕೆ ಇದ್ದು ಈ ಬಜೆಟ್‌ನಲ್ಲಾದರೂ ವರ್ತುಲ ರಸ್ತೆ ಘೋಷಣೆ ನಿರೀಕ್ಷೆ ಹೊಂದಲಾಗಿದೆ.

ನಗರದಲ್ಲಿ ಸುವ್ಯವಸ್ಥಿತ ವ್ಯಾಪಾರಕ್ಕಾಗಿ ಎರಡು ದಶಕಗಳಿಂದ ಸೂಪರ್‌ ಮಾರುಕಟ್ಟೆ ಅಭಿವೃದ್ಧಿ ಹಾಗೂ ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಕಟ್ಟಡ ನಿರ್ಮಾಣದ ಬೇಡಿಕೆ ಇದೆ. ಸೂಪರ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಜಾಗವಿದ್ದು ಮಾರುಕಟ್ಟೆಗೆ ಕಾಯಕಲ್ಪ ಈ ಬಜೆಟ್‌ನಲ್ಲಿ ನೀಡಬೇಕು ಎಂದು ವ್ಯಾಪಾರಸ್ಥ ಉದಯ ಯಂಡಿಗೇರಿ ಆಗ್ರಹವಾಗಿದೆ.

ಹೊಸ ಹಾಸ್ಟೇಲ್‌ಗಳು ಬೇಕು: ಧಾರವಾಡ ವಿದ್ಯಾಕಾಶಿ ಇಲ್ಲಿ ಕರ್ನಾಟಕ ವಿವಿ, ಕೃಷಿ ವಿವಿ, ಕಾನೂನು ವಿವಿ, ಹತ್ತಾರು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಿವೆ. ಸುತ್ತಲಿನ ಜಿಲ್ಲೆಗಳಿಂದ 20 ಸಾವಿರಕ್ಕೂ ಹೆಚ್ಚು ಮಕ್ಕಳು ಶಿಕ್ಷಣಕ್ಕೆ ಧಾರವಾಡಕ್ಕೆ ಬರುತ್ತಾರೆ. ಬೇಸರದ ಸಂಗತಿ ಏನೆಂದರೆ, ಧಾರವಾಡದಲ್ಲಿ ಮಕ್ಕಳಿಗೆ ತಕ್ಕಂತೆ ವಸತಿ ನಿಲಯಗಳ ವ್ಯವಸ್ಥೆ ಇಲ್ಲ. ಹೀಗಾಗಿ ಪ್ರತಿ ವರ್ಷ ವಸತಿ ನಿಲಯಕ್ಕೆ ವಿದ್ಯಾರ್ಥಿಗಳು ತೀವ್ರವಾಗಿ ಪರದಾಡಬೇಕಾಗುತ್ತದೆ. ಜಿಲ್ಲೆಯ ಸುತ್ತಲಿನ ಮಕ್ಕಳಿಗೂ ತೊಂದರೆ, ದೂರದ ಊರಿಂದ ಬರುವ ಮಕ್ಕಳಿಗೆ ವಸತಿ ಸಮಸ್ಯೆ ಉಂಟಾಗಿದ್ದು, ಧಾರವಾಡಕ್ಕೆ ದೊಡ್ಡ ಸಂಖ್ಯೆಯ ಮಕ್ಕಳಿಗೆ ವಸತಿಗಾಗಿ ಕನಿಷ್ಠ ಐದು ಹೊಸ ವಸತಿ ನಿಲಯಗಳನ್ನು ಬಜೆಟ್‌ನಲ್ಲಿ ಘೋಷಣೆಯ ನಿರೀಕ್ಷೆ ಇದೆ.

ಕ್ರೀಡಾಂಗಣ: ಧಾರವಾಡದಲ್ಲಿ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣ ಹೊರತು ಪಡಿಸಿ ಮತ್ತಾವ ಸುಸಜ್ಜಿತ ಕ್ರೀಡಾಂಗಣವಿಲ್ಲ. ಕರ್ನಾಟಕ ವಿವಿ ಆವರಣದಲ್ಲಿ ಅತೀ ದೊಡ್ಡ ಕ್ರೀಡಾಂಗಣವೊಂದು ನನೆಗುದಿಗೆ ಬಿದ್ದಿದ್ದು, ಇತ್ತೀಚೆಗೆ ಸಚಿವ ಸಂತೋಷ ಲಾಡ್‌ ಕ್ರೀಡಾಂಗಣಕ್ಕೆ ಭೇಟಿ ನೀಡಿ ಅದನ್ನು ನವೀಕರಿಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಿದ್ದಾರೆ. ಹೀಗಾಗಿ ಬಜೆಟ್‌ನಲ್ಲಿ ಈ ಕ್ರೀಡಾಂಗಣಕ್ಕೆ ಅನುದಾನ ಒದಗಿಸಿದರೆ ಧಾರವಾಡದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣದ ಭಾಗ್ಯ ದೊರೆಯಲಿದೆ. ಇದರೊಂದಿಗೆ ಕೆಲಗೇರಿ, ಸಾಧನಕೇರಿ ಕೆರೆಗಳನ್ನು ಉಣಕಲ್‌ ಕೆರೆ ಮಾದರಿಯಲ್ಲಿ ಅಭಿವೃದ್ಧಿಗೊಳಿಸಬೇಕಿದೆ.

ಕೈಗಾರಿಕೆಗೆ ಏನು ಬೇಕು: ಧಾರವಾಡ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 5000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬಹುದಾದ ಎಫ್‌ಎಂಸಿಜಿ ಕ್ಲಸ್ಟರ್ ಅಭಿವೃದ್ಧಿ, ಬೇಲೂರು ಇಂಡಸ್ಟ್ರಿಯಲ್ ಎಸ್ಟೇಟ್ ಟ್ರಕ್ ಟರ್ಮಿನಸ್ ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕು. ವಿದ್ಯುಚ್ಛಕ್ತಿ ಶುಲ್ಕಗಳು ತುಂಬಾ ಹೆಚ್ಚಿದ್ದು, ಕಡಿಮೆಯಾಗಬೇಕು ಎಂದು ಉದ್ಯಮಿಗಳು ನಿರೀಕ್ಷೆ ಇಟ್ಟಿದ್ದಾರೆ. ಮಾಲಿನ್ಯ ನಿಯಂತ್ರಣ ಶುಲ್ಕ ತುಂಬಾ ಹೆಚ್ಚಿದ್ದು, ಅದನ್ನು ಕಡಿಮೆ ಮಾಡಬೇಕು. ಹುಬ್ಬಳ್ಳಿಯಲ್ಲಿ ವಾಲ್ವ್ ಕ್ಲಸ್ಟರ್ ಆರಂಭಿಸಲು ಭೂಮಿ ಒದಗಿಸಬೇಕು. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಉತ್ಪನ್ನಗಳಿಗೆ ರಫ್ತು ಪ್ರಚಾರ. ಹುಬ್ಬಳ್ಳಿ ಧಾರವಾಡ (ಟೈರ್ 2) ನಗರದ ಸ್ಟಾರ್ಟಸ್ ವಿಶೇಷ ಪ್ರೋತ್ಸಾಹಧನ ಪಡೆಯಬೇಕು. ಹುಬ್ಬಳ್ಳಿ-ಧಾರವಾಡ ನಡುವಿನ ವಸ್ತುಪ್ರದರ್ಶನ ಕೇಂದ್ರ ನವೀಕರಿಸಬೇಕು ಮತ್ತು ಪ್ರದರ್ಶನ ನಡೆಸಲು ಕೈಗಾರಿಕಾ ಸಂಘಗಳಿಗೆ ನೀಡಬೇಕು. ಎಲ್ಲ ಕೈಗಾರಿಕೋದ್ಯಮಿಗಳಿಗೆ ಮತ್ತು ಉದ್ಯೋಗಿಗಳಿಗೆ ವಸತಿ ಲೇಔಟ್ ಕಾಯ್ದಿರಿಸಿದ ಭೂಮಿಯನ್ನು ಮಂಜೂರು ಮಾಡಬೇಕು ಎಂದು ಹುಬ್ಬಳ್ಳಿ-ಧಾರವಾಡದ ಲಘು ಉದ್ಯೋಗ ಭಾರತಿ ಅಧ್ಯಕ್ಷ ಎಸ್.ಸಿ. ಪಾಟೀಲ ಆಗ್ರಹಿಸಿದ್ದಾರೆ.

Share this article