ಆಹಾರ ಕೊರತೆಯಾಗುತ್ತದೆಯೇ? ಸ್ಟಾಕ್‌ ಮಾಡಿಟ್ಟುಕೊಳ್ಳಬೇಕಾ?

KannadaprabhaNewsNetwork | Published : May 11, 2025 1:24 AM
Follow Us

ಸಾರಾಂಶ

ಯುದ್ಧ ಘೋಷಣೆಯಾಗದಿದ್ದರೂ ಯುದ್ಧದ ಭೀತಿಯಂತೂ ಇದ್ದೇ ಇದೆ. ಜತೆಗೆ ಪ್ರತಿನಿತ್ಯ, ಪ್ರತಿಕ್ಷಣ ಬಿತ್ತರವಾಗುತ್ತಿರುವ ಸುದ್ದಿಗಳು ಜನರಲ್ಲಿ ಆತಂಕವನ್ನುಂಟು ಮಾಡಿದೆ. ಯುದ್ಧವಾಗುತ್ತಿದೆ. ಈಗೇನೋ ಓಕೆ, ಮುಂದೆ ತಿನ್ನೋಕೆ, ಕುಡಿಯೋಕೆ ಸಿಗಲ್ಲ. ಈಗಲೇ ಸ್ಟಾಕ್‌ ಮಾಡಿಟ್ಟುಕೊಳ್ಳಬೇಕು ಎಂಬ ಗುಲ್ಲು ಹಬ್ಬುತ್ತಿದೆ. ಈ ಕಾರಣದಿಂದ ಜನರಲ್ಲಿ ಕಳವಳ, ತಳಮಳ ಶುರುವಾಗುತ್ತಿದೆ.

ಶಿವಾನಂದ ಗೊಂಬಿ ಹುಬ್ಬಳ್ಳಿ

"ಭಾರತ- ಪಾಕ್‌ ನಡುವಿನ ಯುದ್ಧದಿಂದ ರೇಷನ್‌ ಸಮಸ್ಯೆ ಆಗುತ್ತಾ? ಈಗಲೇ ನಾವು ಸ್ಟಾಕ್‌ ಮಾಡಿಟ್ಟುಕೊಳ್ಳಬೇಕಾ? "

ಇಂಥ ಪ್ರಶ್ನೆಗಳೀಗ ಸಾರ್ವಜನಿಕರಲ್ಲಿ ಕಾಡುತ್ತಿದೆ. ಹಾಗೆ ನೋಡಿದರೆ ಭಾರತ್‌- ಪಾಕಿಸ್ತಾನ ಮಧ್ಯೆ ಯುದ್ಧವೇನೂ ಘೋಷಣೆಯೂ ಆಗಿಲ್ಲ. ಯುದ್ಧ ನಡೆಯುತ್ತಲೂ ಇಲ್ಲ. ನಮ್ಮ ದೇಶದ ಅಮಾಯಕ ನಾಗರಿಕರ ಮೇಲೆ ನಡೆದ ದಾಳಿಗೆ ಪ್ರತಿಕಾರವಾಗಿ "ಆಪರೇಷನ್‌ ಸಿಂದೂರ " ನಡೆಸಿ ಉಗ್ರರ ನೆಲೆಗಳನ್ನು ನಮ್ಮ ಸೈನ್ಯ ಧ್ವಂಸ ಮಾಡಿದೆ. ತದನಂತರ ಪಾಕ್‌ ಸೈನ್ಯ ನಡೆಸುತ್ತಿರುವ ದಾಳಿಗೆ ಪ್ರತ್ಯುತ್ತರವನ್ನಷ್ಟೇ ನಮ್ಮ ಸೈನಿಕರು ಕೊಡುತ್ತಿದ್ದಾರೆ.

ಯುದ್ಧ ಘೋಷಣೆಯಾಗದಿದ್ದರೂ ಯುದ್ಧದ ಭೀತಿಯಂತೂ ಇದ್ದೇ ಇದೆ. ಜತೆಗೆ ಪ್ರತಿನಿತ್ಯ, ಪ್ರತಿಕ್ಷಣ ಬಿತ್ತರವಾಗುತ್ತಿರುವ ಸುದ್ದಿಗಳು ಜನರಲ್ಲಿ ಆತಂಕವನ್ನುಂಟು ಮಾಡಿದೆ. ಯುದ್ಧವಾಗುತ್ತಿದೆ. ಈಗೇನೋ ಓಕೆ, ಮುಂದೆ ತಿನ್ನೋಕೆ, ಕುಡಿಯೋಕೆ ಸಿಗಲ್ಲ. ಈಗಲೇ ಸ್ಟಾಕ್‌ ಮಾಡಿಟ್ಟುಕೊಳ್ಳಬೇಕು ಎಂಬ ಗುಲ್ಲು ಹಬ್ಬುತ್ತಿದೆ. ಈ ಕಾರಣದಿಂದ ಜನರಲ್ಲಿ ಕಳವಳ, ತಳಮಳ ಶುರುವಾಗುತ್ತಿದೆ. ತಮಗೆ ಪರಿಚಯ ಇದ್ದಂತಹ ಪತ್ರಕರ್ತರನ್ನೋ, ಅಧಿಕಾರಿ ವರ್ಗವನ್ನೋ, ವರ್ತಕರನ್ನೋ ಕೇಳುತ್ತಿದ್ದಾರೆ. ಅಲ್ಲದೇ, ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿರುವ ತಮ್ಮ ನೆಂಟರಿಷ್ಟರೊಂದಿಗೆ ಈ ಸಂಬಂಧ ಚರ್ಚೆ ಕೂಡ ಮಾಡುತ್ತಿದ್ದು, ಅಲ್ಲಿನ ಪರಿಸ್ಥಿತಿ ಕೇಳುತ್ತಿದ್ದಾರೆ. "ಸಾರ್‌ ಮುಂದೆ ರೇಷನ್‌ ಸಿಗಂಗಿಲ್ಲ ಏನ್ರಿ.. ಈಗ ಸ್ಟಾಕ್‌ ಮಾಡಿಕೋಬೇಕ್‌ ಏನ್ರಿ.. " ಎಂದೆಲ್ಲ ಪ್ರಶ್ನೆಗಳನ್ನೆಲ್ಲ ಕೇಳುತ್ತಿದ್ದಾರೆ.

ಎರಡನೆಯ ಮಹಾಯುದ್ಧದ ನೆನಪು:

ಇದಕ್ಕೆ ಇನ್ನು ಒಂದು ಹೆಜ್ಜೆ ಮುಂದೆ 1965ರಲ್ಲಿ ನಡೆದಿದ್ದ ಭಾರತ - ಪಾಕ್‌ ಯುದ್ಧಕ್ಕೆ ಮಕ್ಕಳಾಗಿ ಸಾಕ್ಷಿಯಾಗಿರುವವರಲ್ಲಿ ಈಗ ವೃದ್ಧರಾಗಿದ್ದಾರೆ. ಅವರು ಅಂದಿನ ತಮ್ಮ ನೆನಪುಗಳನ್ನು ಮಾಡಿಕೊಂಡು ಹೇಳುವುದು ನಾಗರಿಕರಲ್ಲಿ ಮತ್ತಷ್ಟು ಆತಂಕವನ್ನುಂಟು ಮಾಡಿದೆ.

ಸಚಿವರ ಸ್ಪಷ್ಟನೆ: ಈ ವದಂತಿ, ಸಾರ್ವಜನಿಕರ ಆತಂಕದ ಹಿನ್ನೆಲೆಯಲ್ಲೇ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರೂ ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ಸಾರ್ವಜನಿಕರು ಆತಂಕಕ್ಕೊಳಬಾರದು ಎಂದು ಸ್ಪಷ್ಟನೆ ನೀಡಿದ್ದಾರೆ.

ಸಚಿವರು ಹೇಳುವಂತೆ ದೇಶದಲ್ಲಿ ದವಸ ಧಾನ್ಯಗಳ ದಾಸ್ತಾನು ಸಾಕಷ್ಟಿದೆ. ಅಕ್ಕಿ ದಾಸ್ತಾನು 356.42 ಲಕ್ಷ ಮೆಟ್ರಿಕ್‌ ಟನ್‌ ಇದೆ. ಹಾಗೆ ನೋಡಿದರೆ 135 ಲಕ್ಷ ಮೆಟ್ರಿಕ್‌ ಟನ್‌ ಬಫರ್‌ ಮಾನದಂಡಕ್ಕೆ ವಿರುದ್ಧವಾಗಿ ದುಪ್ಪಟ್ಟು ದಾಸ್ತಾನು ಹೊಂದಿದೆ. ಇನ್ನು ಗೋಧಿ ಕೂಡ 383.32 ಲಕ್ಷ ಮೆ.ಟನ್‌, ಖಾದ್ಯ ತೈಲ 17 ಲಕ್ಷ ಮೆಟ್ರಿಕ್‌ ಟನ್‌ ಇದೆ. 257 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆಯನ್ನು ಈಗಾಗಲೇ ಉತ್ಪಾದಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸುತ್ತಾರೆ. ಆದರೂ ಸಾರ್ವಜನಿಕರಲ್ಲಿನ ಗೊಂದಲ ಮಾತ್ರ ನಿವಾರಣೆಯಾಗುತ್ತಲೇ ಇಲ್ಲ.

ಪ್ರತಿನಿತ್ಯ ತಮ್ಮ ಸಂಬಂಧಿಕರೋ, ದವಸ ಧಾನ್ಯ ಮಾರಾಟ ಮಾಡುವ ವರ್ತಕರನ್ನೋ, ಸ್ನೇಹಿತರನ್ನೋ ಕೇಳುವುದು ಮಾತ್ರ ತಪ್ಪುತ್ತಿಲ್ಲ.

ಏನೇ ಆದರೂ ಭಾರತ- ಪಾಕ್‌ ನಡುವಿನ ಉದ್ವಿಗ್ನತೆ ಸದ್ಯಕ್ಕೆ ಅಷ್ಟೇನೋ ಸಮಸ್ಯೆ ಮಾಡದಿದ್ದರೂ ಇದು ಹೀಗೆ ಮುಂದುವರಿದರೆ ಯುದ್ಧವಾಗಿ ಪರಿವರ್ತನೆಯಾದರೆ ಜನರು ಪಡುವಂತಹ ಆತಂಕ ಎದುರಾದರೂ ಅಚ್ಚರಿ ಪಡಬೇಕಿಲ್ಲ ಎಂಬುದು ಮಾತ್ರ ಪ್ರಜ್ಞಾವಂತರ ಅಂಬೋಣ. ಸ್ವಾತಂತ್ರ್ಯ ಸಿಕ್ಕಾಗಿನಿಂದ ಈವರೆಗೂ ಐದಾರು ಬಾರಿ ದಾಳಿ ನಡೆಸಿ ಸೋತು ಸುಣ್ಣವಾದರೂ ಇನ್ನೂ ಬುದ್ಧಿ ಕಲಿಯದ ಪಾಕಿಸ್ತಾನ, ಇನ್ನಾದರೂ ಸುಧಾರಿಸಿಕೊಂಡು ತೆಪ್ಪಗಾಗಬೇಕು. ಯುದ್ಧ ಆಗಬಾರದು ಎಂಬ ಪ್ರಾರ್ಥನೆ ಮಾತ್ರ ಪ್ರಜ್ಞಾವಂತರದ್ದು.

ದೇಶದಲ್ಲಿ ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ದುಪ್ಪಟ್ಟು ದಾಸ್ತಾನಿದೆ. ಎಲ್ಲೂ ಕೂಡಾ ಕೊರತೆಯಿಲ್ಲ, ಜನಸಾಮಾನ್ಯರು, ವರ್ತಕರು ಯಾರೂ ಈ ಬಗ್ಗೆ ಚಿಂತಿತರಾಗಬೇಕಿಲ್ಲ.

ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದ್ದಾರೆ.

ಹಿಂದೆ ಯುದ್ಧವಾದಾಗ ಆಹಾರದ ಕೊರತೆಯಾಗಿತ್ತು ಅಂತೆ. ಭಾರತ- ಪಾಕಿಸ್ತಾನ ನಡುವೆ ಯುದ್ಧ ನಡೆಯುತ್ತಿದೆಯೆಲ್ಲ ಈಗಲೂ ಅದೇ ರೀತಿ ಆಹಾರದ ಸಮಸ್ಯೆಯಾಗುತ್ತದೆಯೇ? ಈಗಲೇ ಸ್ಟಾಕ್‌ ಮಾಡಿಟ್ಟುಕೊಳ್ಳಬೇಕಾ? ಎಂದು ಗೃಹಿಣಿ ಪ್ರೀತಿ ವರ್ಮಾ ಅಳಲು ಆತಂಕ ವ್ಯಕ್ತಪಡಿಸಿದರು.

ಭಾರತ- ಪಾಕಿಸ್ತಾನದ ನಡುವೆ ಯುದ್ಧದ ಭೀತಿಯ ಇರುವ ಕಾರಣ ಆಹಾರದ ಕೊರತೆಯಾಗುತ್ತದೆಯೇ? ಎಂದು ಒಂದೆರಡು ದಿನದಿಂದ ಕೆಲವರು ಕೇಳುತ್ತಿದ್ದಾರೆ. ಹಾಗೇನೂ ಕೊರತೆಯಾಗಲ್ಲ ಎಂದು ಹೇಳುತ್ತಿದ್ದೇವೆ ಎಂಜು ದವಸ, ಧಾನ್ಯ ವರ್ತಕ ಅಬ್ದುಲ್‌ ರಜಾಕ್‌ ಹೇಳಿದರು.