- ಹರಪನಹಳ್ಳಿ ತಾಲೂಕು ತೆಲಗಿ ಗ್ರಾಮದಲ್ಲಿ ಹೋಬಳಿಮಟ್ಟದ ಸಭೆ, ಮತಯಾಚನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಮಳೆ ಬಂದರೆ ಕೆರೆಗಳು ತುಂಬುತ್ತವೆ ಎನ್ನುವ ಬಿಜೆಪಿ ಸಂಸದರು ಬೇಕೆ ಅಥವಾ ನದಿಗಳಿಂದ ಕೆರೆಗಳನ್ನು ತುಂಬಿಸುವ ಕಾಂಗ್ರೆಸ್ ಸಂಸದರು ಬೇಕೆ ಎಂಬುದನ್ನು ಕ್ಷೇತ್ರದ ಜನರು ಅರ್ಥ ಮಾಡಿಕೊಳ್ಳಬೇಕು. ಆಮೇಲೆ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಮತ ನೀಡುವ ಮೂಲಕ ಭಾರಿ ಅಂತರದಿಂದ ಪ್ರಥಮ ಮಹಿಳಾ ಸಂಸದೆಯಾಗಿ ಆಯ್ಕೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮನವಿ ಮಾಡಿದರು.ಹರಪನಹಳ್ಳಿ ತಾಲೂಕು ತೆಲಗಿ ಗ್ರಾಮದಲ್ಲಿ ಗುರುವಾರ ತಾಲೂಕು ಹೋಬಳಿಮಟ್ಟದ ಕಾರ್ಯಕರ್ತರ ಸಭೆ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 2018ರಲ್ಲಿ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ತರಳಬಾಳು ಶ್ರೀಗಳ ಬಳಿ 57 ಕೆರೆ ತುಂಬಿಸಲು ₹670 ಕೋಟಿ ಅನುದಾನದ ಬಗ್ಗೆ ಚರ್ಚಿಸಿ, ಕಾಮಗಾರಿ ಕೈಗೊಂಡಿದ್ದೆವು. ಈ ಯೋಜನೆ ಪೂರ್ಣಗೊಂಡರೆ ಅನುಕೂಲ ಎಂದರು.
ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಪ್ರತಿ ಕ್ಷೇತ್ರಕ್ಕೂ ₹300 ಕೋಟಿ ಅನುದಾನ ನೀಡಿದ್ದರು. ಆದರೆ, ನಮ್ಮ ದಾವಣಗೆರೆ ಸಂಸದರಾದರು ಕೊಂಡಜ್ಜಿ ಕೆರೆ ಎಲ್ಲಿದೆ ಎಂದು ಪ್ರಶ್ನಿಸುತ್ತಾರೆ. ಮಳೆ ಬಂದರೆ ಕೆರೆ ತುಂಬುತ್ತದೆನ್ನುತ್ತಾರೆ. ಕೊಂಡಜ್ಜಿ ಕೆರೆ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರವಿದ್ದಾಗ ₹130 ಕೋಟಿ ಅನುದಾನ ತಂದಿದ್ದೆವು. ಎಲ್ಲಿ ಈ ಕಾಮಗಾರಿ ಕೈಗೊಂಡರೆ ಕಾಂಗ್ರೆಸ್ಸಿಗೆ ಹೆಸರು ಬರುತ್ತದೋ ಎಂಬ ಕಾರಣಕ್ಕೆ ಕೆರೆ ಅಭಿವೃದ್ಧಿಯನ್ನೇ ತಡೆಹಿಡಿದರು ಎಂದು ಸಂಸದ ಸಿದ್ದೇಶ್ವರ ವಿರುದ್ಧ ಆಕ್ರೋಶ ಹೊರಹಾಕಿದರು.ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಮಾತನಾಡಿ, ದೇಶಕ್ಕೆ ತ್ಯಾಗ ಮಾಡಿದ ಪಕ್ಷವೆಂದರೆ ಕಾಂಗ್ರೆಸ್. ತೆಲಗಿಯ ನಾಲ್ಕು ನಾಯಕರು ಮಾತು ಹೇಳಿದರೆ ಸಾಕು ಕಾಂಗ್ರೆಸ್ಸಿಗೆ ಓಟು ಬೀಳುತ್ತವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಕೊಟ್ಟ ಪಂಚ ಗ್ಯಾರೆಂಟಿ ಜನೋಪಯಾಗಿ ಇವೆ. ಲೋಕಸಭಾ ಚುನಾವಣೆಯಲ್ಲಿ ಕೊಟ್ಟ ಕೊಡುಗೆಯ ಋಣ ತೀರಿಸುವ ಜವಾಬ್ದಾರಿ ಮತದಾರರ ಮೇಲಿದೆ. ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಮತ ನೀಡಿ, ದಾಖಲೆ ಅಂತರದಿಂದ ಗೆಲ್ಲಿಸೋಣ ಎಂದರು.
ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಹರಪನಹಳ್ಳಿಯಲ್ಲಿ ಓರ್ವ ಮಹಿಳೆಯನ್ನು ಆಯ್ಕೆ ಮಾಡಿದಂತೆ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಗೆಲ್ಲಿಸಿ, ಇತಿಹಾಸ ಸೃಷ್ಟಿಸಿ, ಹರಪನಹಳ್ಳಿ ಕ್ಷೇತ್ರಕ್ಕೆ ಹೆಚ್ಚು ಅನುದಾನ ತರಲು ಸಹಕರಿಸಿ. ರಾಹುಲ್ ಗಾಂಧಿ 24 ಗ್ಯಾರೆಂಟಿ ಭರವಸೆ ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮಹಾಲಕ್ಷ್ಮಿ ಯೋಜನೆ ಮಹಿಳೆಯರಿಗೆ ಉಪಯುಕ್ತವಾಗಿದೆ. ವರ್ಷಕ್ಕೆ ₹1.24 ಲಕ್ಷ ಮಹಿಳೆಯರ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದರು.ಮಾಜಿ ಶಾಸಕ ಸಿರಾಜ್‌ಶೇಕ್, ಮುಖಂಡ ಎನ್.ಕೊಟ್ರೇಶ ಅರಸೀಕೆರೆ, ವೀಣಾ ಮಹಾಂತೇಶ್, ಕೆಪಿಸಿಸಿ ಸದಸ್ಯರು ಚಂದ್ರಶೇಖರ್ ಭಟ್, ಪುರಸಭೆ ಅಧ್ಯಕ್ಷ ರಾಜಶೇಖರ್, ಎಚ್.ಬಿ. ಪರುಶುರಾಮಪ್ಪ, ಡಾ.ಮಲ್ಲಿಕಪ್ಪ, ಹಿರಿಯ ವಕೀಲ ಪ್ರಕಾಶ ಪಾಟೀಲ್ ಇತರರು ಇದ್ದರು.
- - - ಟಾಪ್ ಕೋಟ್ಅನ್ನದ ಜತೆ ಸೂರು, ಆರೋಗ್ಯ, ವಿದ್ಯಾಭ್ಯಾಸ ನೀಡಬೇಕೆಂಬುದು ಕಾಂಗ್ರೆಸ್ ಗುರಿ. ದಾವಣಗೆರೆಯ ಆಶ್ರಯ ಮನೆಗಳು ಜನರಿಗೆ ಆಸರೆಯಾಗಿವೆ. ನಮ್ಮದು ಅದಾನಿ, ಅಂಬಾನಿಗೆ ಬೆಂಬಲಿಸುವ ಪಕ್ಷವಲ್ಲ. ಬಡವರ ನಿರ್ಗತಿಕರು, ದೀನ ದಲಿತರು, ರೈತರು, ಎಲ್ಲ ವರ್ಗಗಳಿಗೂ ಮೂಲ ಸೌಲಭ್ಯ ಒದಗಿಸುವ ಪಕ್ಷ
- ಎಸ್.ಎಸ್.ಮಲ್ಲಿಕಾರ್ಜುನ. ಜಿಲ್ಲಾ ಉಸ್ತುವಾರಿ ಸಚಿವ- - - -25ಕೆಡಿವಿಜಿ9, 10:
ಹರಪನಹಳ್ಳಿ ತಾಲೂಕಿನ ತೆಲಗಿಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ದಾವಣಗೆರೆ ಕ್ಷೇತ್ರದ ಅಭ್ಯರ್ಥಿ ಡಾ.ಪ್ರಭಾ ಪರ ಮತಯಾಚಿಸಿದರು.