ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ : ಸಿಬಿಐ ಸಂಕಷ್ಟದಿಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದ್ಯ ನಿರಾಳ

KannadaprabhaNewsNetwork |  
Published : Aug 30, 2024, 01:05 AM ISTUpdated : Aug 30, 2024, 06:19 AM IST
ಡಿ.ಕೆ.ಶಿವಕುಮಾರ್‌ | Kannada Prabha

ಸಾರಾಂಶ

ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ತನಿಖೆ ನಡೆಸಲು ಕೇಂದ್ರ ತನಿಖಾ ಸಂಸ್ಥೆಗೆ (ಸಿಬಿಐ) ಈ ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ನೀಡಿದ್ದ ಅನುಮತಿಯನ್ನು ಹಿಂಪಡೆದ ಕಾಂಗ್ರೆಸ್ ಸರ್ಕಾರದ ಆದೇಶ ರದ್ದು ಕೋರಿ   ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ಹೈಕೋರ್ಟ್‌ ಆದೇಶಿಸಿದೆ.

 ಬೆಂಗಳೂರು : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ತನಿಖೆ ನಡೆಸಲು ಕೇಂದ್ರ ತನಿಖಾ ಸಂಸ್ಥೆಗೆ (ಸಿಬಿಐ) ಈ ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ನೀಡಿದ್ದ ಅನುಮತಿಯನ್ನು ಹಿಂಪಡೆದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಆದೇಶ ರದ್ದು ಕೋರಿ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ಹೈಕೋರ್ಟ್‌ ಆದೇಶಿಸಿದೆ.

ಅಲ್ಲದೆ, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರವು ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದೆ. ಈ ಪ್ರಕರಣದ ಕಾನೂನಿಗೆ ಸಂಬಂಧಿಸಿದ ವಿಚಾರಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಒಳಪಟ್ಟಿವೆ. ಹಾಗಾಗಿ, ಪ್ರಕರಣವನ್ನು ಸುಪ್ರೀಂಕೋರ್ಟ್ ನಿರ್ಧರಿಸುವುದು ಸೂಕ್ತವಾಗಿದೆ. ಹೀಗಾಗಿ, ಅರ್ಜಿಗಳು ವಿಚಾರಣೆಗೆ ಅನರ್ಹವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಮತ್ತು ನ್ಯಾಯಮೂರ್ತಿ ಉಮೇಶ್‌ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರರು ಸುಪ್ರೀಂಕೋರ್ಟ್‌ನಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಆ.12ರಂದು ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ಬುಧವಾರ ವಿಭಾಗೀಯ ಪೀಠ ಪ್ರಕಟಿಸಿದೆ. ಇದರಿಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಿರಾಳರಾಗಿದ್ದಾರೆ. ಪ್ರಕರಣದ ತನಿಖೆಗೆ ಅನುಮತಿ ನೀಡುವಂತೆ ಪ್ರಬಲವಾಗಿ ವಾದ ಮಂಡಿಸಿದ್ದ ಸಿಬಿಐಗೆ ತಾತ್ಕಾಲಿಕ ಹಿನ್ನಡೆಯಾದಂತಾಗಿದೆ.

ಆದೇಶದಲ್ಲಿ ಏನಿದೆ?:

ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿರುವ ಸಿಬಿಐ ಮತ್ತು ರಾಜ್ಯ ಸರ್ಕಾರ ನಡುವೆ ಸಂಘರ್ಷವಿದೆ. ಕೇಂದ್ರ ಸರ್ಕಾರ ಅಧೀನದಲ್ಲಿ ಸಿಬಿಐ ಕಾರ್ಯನಿರ್ವಹಿಸಲಿದೆ. ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ, ಹಣ ಅಕ್ರಮ ವರ್ಗಾವಣೆ ಕಾಯ್ದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಂವಿಧಾನಿಕ ಅಧಿಕಾರದ ಕಾನೂನಿಗೆ ಸಂಬಂಧಿಸಿದ ವಿಚಾರವನ್ನು ಅರ್ಜಿಯಲ್ಲಿ ಎತ್ತಲಾಗಿದೆ. ಕೇಂದ್ರ ಸರ್ಕಾರವು ಎಲ್ಲಿಯವರೆಗೆ ರಾಜ್ಯವೊಂದರಲ್ಲಿ ಸಿಬಿಐ ಅನ್ನು ಕಾರ್ಯನಿರ್ವಹಣೆಗೆ ಬಿಡಬಹುದು, ಎಲ್ಲಿಯವರೆಗೆ ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ವಿಸ್ತರಿಸಬಹುದು, ಇಂತಹ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಅಧಿಕಾರಗಳೇನು ಎಂಬ ವಿಚಾರಗಳು ಸಂವಿಧಾನದ ಪರಿಚ್ಛೇದ 131ರ ಅಡಿಯಲ್ಲಿ ಬರಲಿದೆ. ಈ ಪರಿಚ್ಛೇದ ಪ್ರಕಾರ ಪ್ರಕರಣವನ್ನು ಸುಪ್ರೀಂಕೋರ್ಟ್ ತನ್ನ ವ್ಯಾಪ್ತಿಯಲ್ಲಿ ನಿರ್ಧರಿಸುವುದು ಸೂಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿಗಳು ಹೈಕೋರ್ಟ್‌ ವಿಚಾರಣೆಗೆ ಅನರ್ಹವಾಗಿವೆ. ಇದರಿಂದ ಅರ್ಜಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಆದೇಶದಲ್ಲಿ ಪೀಠ ವಿವರಿಸಿದೆ.

ಪ್ರಕರಣವೇನು?:

ಆದಾಯ ಮೀರಿ ಆಸ್ತಿಗಳಿಕೆ ಆರೋಪ ಸಂಬಂಧ ಸಿಬಿಐ ತನಿಖೆಗೆ ಅನುಮತಿ ನೀಡಿ ಬಿಜೆಪಿ ಸರ್ಕಾರ 2022ರ ಸೆ.25ರಂದು ಆದೇಶಿಸಿತ್ತು. ಆ ಆದೇಶ ರದ್ದು ಕೋರಿ ಶಿವಕುಮಾರ್‌ ಸಲ್ಲಿಸಿದ್ದ ತಕರಾರು ಅರ್ಜಿಯನ್ನು 2023ರ ಏ.20ರಂದು ಹೈಕೋರ್ಟ್‌ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಈ ತೀರ್ಪು ಪ್ರಶ್ನಿಸಿ ಶಿವಕುಮಾರ್‌ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶ ಮತ್ತು ಸಿಬಿಐ ತನಿಖೆಗೆ ತಡೆ ನೀಡಿತ್ತು.

ಈ ಮಧ್ಯೆ, ವಿಧಾನಸಭೆ ಚುನಾವಣೆಯ ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರವು ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆಗೆ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿಯನ್ನು ಹಿಂಪಡೆಯಿತು. ಆ ಕುರಿತು 2023ರ ನ.28ರಂದು ಆದೇಶಿಸಿತ್ತು. ಜೊತೆಗೆ, ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸಿತ್ತು. ಅದನ್ನು ಪ್ರಶ್ನಿಸಿ ಸಿಬಿಐ ಮತ್ತು ಯತ್ನಾಳ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕುರಿತ ವಿಚಾರಣೆಯನ್ನು ಆ.12ರಂದು ಪೂರ್ಣಗೊಳಿಸಿದ್ದ ನ್ಯಾ.ಸೋಮಶೇಖರ್‌ ಅವರ ನೇತೃತ್ವದ ವಿಭಾಗೀಯ ಪೀಠವು ತೀರ್ಪು ಕಾಯ್ದಿರಿಸಿತ್ತು. ಅರ್ಜಿಗಳನ್ನು ವಜಾಗೊಳಿಸಿ ವಿಭಾಗೀಯ ಪೀಠ ಬುಧವಾರ (ಆ.29) ತೀರ್ಪು ನೀಡಿದೆ.

ಅರ್ಜಿದಾರರ ವಾದ:

ಅರ್ಜಿ ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ್ದ ಪಿ.ಪ್ರಸನ್ನಕುಮಾರ್, ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದು ರಾಜ್ಯ ಸರ್ಕಾರ ಆದೇಶ ಮಾಡಲಾಗದು. ರಾಜ್ಯ ಸರ್ಕಾರ ಅನುಮತಿ ಹಿಂಪಡೆದರೂ ಸಿಬಿಐ ಎಫ್ಐಆರ್ ಬಾಕಿ ಉಳಿಯಲಿದೆ. ಒಂದೊಮ್ಮೆ ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇದೆ ಎಂದು ಘೋಷಿಸಿದರೆ ಈಗಾಗಲೇ ದಾಖಲಿಸಲಾಗಿರುವ ಎಫ್ಐಆರ್‌ಗೆ ಅಡ್ಡಿಯಾಗುವುದಿಲ್ಲ. ಅದರಂತೆ ತನಿಖೆ ಮುದುವರಿಸಬಹುದಾಗಿದೆ. ಬಹುತೇಕ ತನಿಖೆ ಪೂರ್ಣಗೊಂಡಿದೆ. ಪ್ರಕರಣದ ಕುರಿತು ಮುಂದಿನ ಕ್ರಮ ಜರುಗಿಸಲು ಅನುಮತಿ ನೀಡಿ, ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಕೋರಿದರು.

ಯತ್ನಾಳ್ ಪರ ವಕೀಲ ವೆಂಕಟೇಶ್ ದಳವಾಯಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅಪರಾಧದ ತನಿಖೆ ನಡೆಸಲು ಸಿಬಿಐ ಸಂಪೂರ್ಣ ಸ್ವತಂತ್ರವಾಗಿರುತ್ತದೆ. ಒಮ್ಮೆ ಸಿಬಿಐ ಪ್ರಕರಣ ದಾಖಲಿಸಿದ ನಂತರ ಅದು ತಾರ್ಕಿಕ ಅಂತ್ಯ ಕಾಣಬೇಕು. ಸಿಬಿಐ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ವಜಾ ಮಾಡಬೇಕು. ಇದರಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.

ಸರ್ಕಾರದ ವಾದ:

ರಾಜ್ಯ ಸರ್ಕಾರ ಮತ್ತು ಡಿ.ಕೆ.ಶಿವಕುಮಾರ್‌ ಪರ ವಕೀಲರು, ಸಿಬಿಐ ಕೇಂದ್ರ ಸರ್ಕಾರದ ಒಂದು ಘಟಕ. ಅದು ಸ್ವತಂತ್ರ ಸಂಸ್ಥೆಯಲ್ಲ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಡಿ ಬರುವ ಸಿಬಿಐಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತದೆ. ರಾಜಕೀಯ ದುರುದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರ ಮೌಖಿಕ ನಿರ್ದೇಶನದ ಮೂಲಕ ಸಿಬಿಐ ತನಿಖೆಗೆ ಅನುಮತಿಸಿತ್ತು. ಸಿಬಿಐ ತನಿಖೆಗೆ ಒಪ್ಪಿಗೆ ನೀಡಿರುವುದೇ ಕಾನೂನುಬಾಹಿರವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸರ್ಕಾರವು ಕಾನೂನನ್ನು ಈ ರೀತಿ ದುರ್ಬಳಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಕೋರಿದ್ದರು.

--

ನ್ಯಾಯ, ರಕ್ಷಣೆ ಸಿಕ್ಕಿದೆ

ನಾನು ಸಾಯುವವರೆಗೂ ನನ್ನ ವಿರುದ್ಧ ಪಿತೂರಿ ನಡೆಯುತ್ತಲೇ ಇರುತ್ತದೆ. ಅದರ ವಿರುದ್ಧ ನನ್ನ ಹೋರಾಟವೂ ಇರಲಿದೆ. ಆದರೀಗ ಹೈಕೋರ್ಟ್‌ನಲ್ಲಿ ನನಗೆ ನ್ಯಾಯ ಮತ್ತು ರಕ್ಷಣೆ ಸಿಕ್ಕಿದೆ. ಹೈಕೋರ್ಟ್‌ ತೀರ್ಪು ಸರ್ಕಾರ ಹಾಗೂ ರಾಜ್ಯದ ಜನರಿಗೆ ಸಿಕ್ಕ ಗೆಲುವು.

- ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

--

ಸುಪ್ರೀಂಗೆ ಹೋಗುವೆ

ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು. ಭ್ರಷ್ಟಾಚಾರದ ವಿರುದ್ಧ ನಮ್ಮ ಸಮರ ಇಲ್ಲಿಗೆ ನಿಲ್ಲುವುದಿಲ್ಲ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ.

- ಬಸನಗೌಡ ಪಾಟೀಲ್‌ ಯತ್ನಾಳ್‌, ಬಿಜೆಪಿ ಶಾಸಕ

ಕೋರ್ಟ್‌ ಹೇಳಿದ್ದೇನು?

- ಡಿ.ಕೆ.ಶಿವಕುಮಾರ್‌ ವಿರುದ್ಧ ರಾಜ್ಯ ಸರ್ಕಾರವು ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂದಕ್ಕೆ ಪಡೆದಿದೆ

- ಪ್ರಕರಣದ ಕಾನೂನಿಗೆ ಸಂಬಂಧಿಸಿದ ವಿಚಾರಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಒಳಪಟ್ಟಿವೆ

- ಹಾಗಾಗಿ, ಪ್ರಕರಣವನ್ನು ಸುಪ್ರೀಂಕೋರ್ಟ್ ನಿರ್ಧರಿಸುವುದು ಸೂಕ್ತ. ಆದಕಾರಣ ಅರ್ಜಿಗಳು ವಿಚಾರಣೆಗೆ ಅನರ್ಹ

- ಅರ್ಜಿದಾರರು ಸುಪ್ರೀಂಕೋರ್ಟ್‌ನಲ್ಲಿ ಪರಿಹಾರ ಕಂಡುಕೊಳ್ಳಬಹುದು: ಹೈಕೋರ್ಟ್‌ ವಿಭಾಗೀಯ ಪೀಠ ಆದೇಶ

ಏನಿದು ಪ್ರಕರಣ?

- ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿ ಬಿಜೆಪಿ ಸರ್ಕಾರ 2022ರ ಸೆ.25ರಂದು ಆದೇಶಿಸಿತ್ತು

- ಇದರ ವಿರುದ್ಧ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಏಕಸದಸ್ಯ ಪೀಠ 2023ರಲ್ಲಿ ವಜಾಗೊಳಿಸಿತ್ತು

- ಡಿಕೆಶಿ ವಿಭಾಗೀಯ ಪೀಠದ ಮೊರೆ ಹೋಗಿದ್ದರು. ಏಕಸದಸ್ಯ ಪೀಠದ ಆದೇಶ, ಸಿಬಿಐ ತನಿಖೆಗೆ ತಡೆ ಸಿಕ್ಕಿತ್ತು

- ಈ ನಡುವೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಅನುಮತಿ ಹಿಂಪಡೆದಿತ್ತು- ಇದರ ವಿರುದ್ಧ ಸಿಬಿಐ ಅಧಿಕಾರಿಗಳು, ಯತ್ನಾಳ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಈಗ ತೀರ್ಪು ಬಂದಿದೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿನ ಅಂಕು-ಡೊಂಕು ತಿದ್ದಲು ಶಿಕ್ಷಣವಂತರಾಗಿ
ಕುವೆಂಪು ಕರ್ನಾಟಕದ ಅಮೂಲ್ಯ ಆಸ್ತಿ