ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕಳೆದ ಗುರುವಾರ ರಾತ್ರಿ ಗಡಿ ಭಾಗದಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಹಲವು ರೈತರ ವೀಳ್ಯೆದೆಲೆ ತೋಟಗಳು ಸಂಪೂರ್ಣವಾಗಿ ನೆಲಕಚ್ಚಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಅಲ್ಲದೆಇತರೆ ಕಡೆ ಮರಗಳು ಉರುಳಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಗುರುವಾರ ರಾತ್ರಿ ಗಡಿ ಭಾಗದವಾದ ದೋಣಿಮಡಗು ಪಂಚಾಯತಿಯ ಸುತ್ತಮುತ್ತ ಬಾರಿ ಗಾಳಿ ಮಳೆ ಸುರಿದಿದ್ದರಿಂದ ಹಾಗೂ ಈ ಭಾಗದ ಬಹುತೇಕ ರೈತರು ವೀಳ್ಯದೆಲೆ ತೋಟಗಳನ್ನು ನೆಚ್ಚಿಕೊಂಡು ಜೀವನ ನಡೆಸುತ್ತಿದ್ದು, ಈಗ ವೀಳ್ಯೆದೆಲೆ ಬೇಡಿಕೆಯೂ ಇದೆ.ನೆಲಕ್ಕೆ ಬಾಗಿದ ವೀಳ್ಯದೆಲೆ ಬಳ್ಳಿ
ಆದರೆ ಗುರುವಾರ ರಾತ್ರಿ ಗಾಳಿ ಮಳೆಗೆ ಪೊಲೇನಹಳ್ಳಿ ಗ್ರಾಮದ ಗೋವಿಂದಪ್ಪ, ವೆಂಕಟೇಶಪ್ಪ, ನಾರಾಯಣಪ್ಪ, ಮೋಟಪ್ಪ ಸೇರಿದಂತೆ ಹತ್ತಕ್ಕೂ ಹೆಚ್ಚಿನ ರೈತರ ವೀಳ್ಯದೆಲೆ ತೋಟಗಳು ಸಂಪೂರ್ಣವಾಗಿ ಗಾಳಿಗೆ ನೆಲಕ್ಕೆ ಬಾಗಿದೆ. ಶುಕ್ರವಾರ ಬೆಳಗ್ಗೆ ತೋಟಗಳಿಗೆ ಹೋಗಿ ನೋಡಿದರೆ ತೋಟ ನೆಲಕ್ಕೆ ಬಾಗಿದ್ದನ್ನು ಕಂಡು ಆತಂಕಗೊಂಡಿದ್ದಾರೆ.ಸಾಲ ಮಾಡಿ ವೀಳ್ಯೆದೆಲೆ ತೋಟ ಮಾಡಿದ್ದೇವೆ. ಎಲೆಗಳನ್ನು ಕಟಾವು ಮಾಡಿ ಮಾರುಕಟ್ಟೆಗೆ ಹಾಕಬೇಕು ಎನ್ನುವಷ್ಟರಲ್ಲಿ ಗಾಳಿ ಮಳೆಗೆ ತೋಟಗಳು ಆಹುತಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಹಲವು ಮನೆಗಳ ಮೇಲೆ ಹಾಕಿದ್ದ ಸಿಮೆಂಟ್ ಶೀಟ್‍ಗಳು ಸಹ ಗಾಳಿಗೆ ಹಾರಿ ಹೋಗಿವೆ.ಗಾಳಿಗೆ ಉದುರಿದ ಮಾವು
ಅಲ್ಲಲ್ಲಿ ರಸ್ತೆಗಳ ಬದಿಗಳಲ್ಲಿದ್ದ ಮರಗಳು ರಸ್ತೆಗಳ ಮೇಲೆ ಬಿದ್ದಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಭಾಗದಲ್ಲಿ ಗುರುವಾರ ರಾತ್ರಿ ವಿದ್ಯುತ್ ಸಂಪರ್ಕವಿಲ್ಲದೆ ರಾತ್ರಿ ಇಡೀ ಕತ್ತಲಲ್ಲೆ ಇರಬೇಕಾಯಿತು. ಮತ್ತೊಂದೆಡೆ ಮಾವಿನ ಕಾಯಿಗಳು ಸಹ ಗಾಳಿಗೆ ನೆಲಕ್ಕೆ ಬಿದ್ದು ಮಾವು ಬೆಳೆಗಾರರಿಗೂ ನಷ್ಟ ಉಂಟಾಗಿದೆ.ಇಷ್ಟಾದರೂ ಸಹ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಸಮಸ್ಯೆಗಳನ್ನು ಆಲಿಸಿಲ್ಲವೆಂಬುದು ರೈತರು ದೂರಿದ್ದಾರೆ.