ಹುಬ್ಬಳ್ಳಿ: ಮನುಷ್ಯನ ಅಂತಕಃರಣವು ತಿಳಿಯಾಗಬೇಕು. ಆಗಲೇ ವಿವೇಕವು ಉದಯಿಸಿ, ಭಗವದ್ ಕೃಪೆಗೆ ಅರ್ಹತೆ, ಯೋಗ್ಯತೆ ಲಭಿಸುವುದು ಎಂದು ಮಹಾಲಿಂಗಪುರ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಹೇಳಿದರು.
ವಿವೇಕ ಉದಯವಾದರೆ ವೈರಾಗ್ಯದತ್ತ ಭಕ್ತನ ಮನಸ್ಸು ತಿರುಗುವುದು, ಆಗ ಪ್ರಪಂಚದ ಜಂಜಡಗಳನ್ನು ತ್ಯಜಿಸಿ, ಭಗವಂತನ ನಾಮಸ್ಮಣೆ ಮಾಡುತ್ತ ಮುಕ್ತಿಯನ್ನು ಪಡೆಯಬಹುದು ಎಂದರು.
ಬಳ್ಳೂರ ಸಿದ್ಧಾರೂಢಮಠದ ವಿದ್ಯಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಗುರುವಿನ, ಭಗವಂತನ ಅನುಗ್ರಹ ಪಡೆಯಲು ಮೊದಲು ಭಕ್ತ ಅದಕ್ಕೆ ಯೋಗ್ಯನಾಗಿರಬೇಕು. ಅರ್ಹತೆ ಪಡೆದುಕೊಳ್ಳಬೇಕು. ಆಡಂಬರಕ್ಕೆ ಭಗವಂತ ಒಲಿಯಲಾರ ಎಂದರು.ಸಭೆಗೆ ಸರ್ವರನ್ನೂ ಸ್ವಾಗತಿಸಿದ ಧರ್ಮದರ್ಶಿ ಶಿವಾನಂದ ಪೂಜೇರಿ, ಭಕ್ತನು ತಾನು ತನ್ನದು ಎಂಬ ಮಮಕಾರವನ್ನು ಬಿಡಬೇಕು. ಪ್ರತಿಷ್ಠೆ ಅಹಂಕಾರಗಳನ್ನು ತ್ಯಜಿಸಿದಾಗಲೇ ಸಿದ್ಧಾರೂಢರು ಕೃಪೆ ತೋರುವರು ಎಂದರು.
ಶಾಸ್ತ್ರೀಯ ಗಾಯನಕ್ಕೆ ಮಾರುಹೋದ ಸಭಿಕರು:
ಗೋಪಾಕೃಷ್ಣ ಭಾಗವತ ರಾಗ ಬಾಗೇಶ್ರೀಯಲ್ಲಿ ಕಾನ ಕೌನ ಕರತ ತೋರಿ ಬಿನತಿ ಬಂದಿಶ್ ಹಾಡಿ ಖ್ಯಾಲ ಗಾಯಕಿಯ ಚೆಲುವನ್ನು ಬಿಡಿಸಿಟ್ಟಿರು. ಕುಮಾರ ಮರಡೂರ ಅದನ್ನೇ ಮುಂದುವರೆಸಿ ರಾಗ ಶಂಕರಾದಲ್ಲಿ ಶಿವಶಂಕರ ಮಹಾದೇವ ಗೀತೆ ಹಾಡಿ ತಾನ್‌ಗಳಿಂದ ಮನಸೂರೆಗೊಂಡರು. ಚಿತ್ರಲೇಖಾ ಮಂಜುನಾಥ ನಾಯ್ಕ ಕೊಳಲು ವಾದನದಲ್ಲಿ ರಾಗ ಜೋಗ ನುಡಿಸಿ ಮಧ್ಯರಾತ್ರಿಯ ಮೌನದಲ್ಲಿ ಭಕ್ತರ ಮನಸ್ಸಿಗೆ ಶಾಂತಿ ಮತ್ತು ಸಮಾಧಾನಗಳನ್ನು ತುಂಬಿದರು. ಶುಭಾಂಗಿ ಜಾಧವ, ವಿಕಾಸ ವಸಿಷ್ಠ, ಸಪ್ತಸ್ವರ ಹಾಗೂ ಶೃತಿ ಚಾಟ್ನಿ ಭಕ್ತಿಗೀತೆ ಹಾಡಿದರು.