ಚೆನ್ನಕೇಶವ ದೇವರ ನೂತನ ಮಹಾದ್ವಾರ ಲೋಕಾರ್ಪಣೆ ಕಾರ್ಯಕ್ರಮ
ತಾಲೂಕಿನ ಕಾನಗೋಡ ಶ್ರೀ ಚೆನ್ನಕೇಶವ ದೇವರ ನೂತನ ಮಹಾದ್ವಾರ ಲೋಕಾರ್ಪಣೆ ಕಾರ್ಯಕ್ರಮ ಸಿದ್ದಾಪುರದ ಶ್ರೀ ಮನ್ನೆಲೆಮಾವಿನಮಠದ ಮಾಧವಾನಂದ ಭಾರತೀ ಮಹಾಸ್ವಾಮಿಗಳಿಂದ ಬುಧವಾರ ನಡೆಯಿತು.ನಂತರ ದೇವಾಲಯದ ಆವಾರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದ ಶ್ರೀಗಳು, ಈ ಮಹಾದ್ವಾರ ದೇವಾಲಯಕ್ಕೆ ದ್ವಾರ ಮಾತ್ರವಲ್ಲ, ಮನುಷ್ಯನ ಜೀವನದ ಉನ್ನತಿಗೆ, ಶ್ರದ್ದಾಭಕ್ತಿಗೂ ಕಾರಣವಾಗುತ್ತದೆ. ಈ ಮಹಾದ್ವಾರ ದರ್ಶನ ಮಾಡಿದರೆ ಪಾಪಕ್ಷಯವಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಮಹಾದ್ವಾರ ಎನ್ನುವುದು ದೇವರ ಪಾದ, ಅದು ಎಲ್ಲಿಂದ ಪ್ರಾರಂಭವಾಗುತ್ತದೆಯೋ ಅಲ್ಲಿಂದ ದೇವರು ಮಲಗಿದ್ದಾನೆ ಎನ್ನುವುದು ಶಾಸ್ತ್ರದಲ್ಲಿದೆ. ದ್ವಾರದ ಒಳಗೆ ಪ್ರವೇಶಿಸಿದಾಗ ಸತ್ ಚಿಂತನೆ, ಸದಾಚಾರದ ಚಿಂತನೆ, ಬೇರೆಯವರಿಗೆ ಒಳಿತು ಬಯಸಬೇಕು. ದೇವರಲ್ಲಿ ಆಸ್ತಿ, ಅಂತಸ್ತು ಕೇಳುವ ಬದಲು ಆರೋಗ್ಯ ಭಾಗ್ಯ ನೀಡು ಎಂದು ಬೇಡಬೇಕು. ಕಷ್ಟಬಂದಾಗ ಮಾತ್ರ ದೇವರ ನನೆಯುವುದಲ್ಲ. ಕಷ್ಟ ಪರಿಹರಿಸು ಎಂದು ಹರಕೆ ತಿರಸುವುದು ದೇವರಿಗೆ ಲಂಚ ನೀಡಿದಂತೆ. ಅದರ ಬದಲು ಪ್ರತಿನಿತ್ಯ ದೇವರ ಭಜನೆ ಮಾಡಿದರೆ ದೇವರ ಅನುಗ್ರಹ ಲಭಿಸುತ್ತದೆ. ನಾವು ಇಂದು ದೇವಾಲಯಕ್ಕೆ ಭೇಟಿ ನೀಡಲು ಸಮಯ ನೀಡುತ್ತಿಲ್ಲ. ದೇವಾಲಯ ಎಂದರೆ ಸಮುದ್ರವಿದ್ದಂತೆ ಮನೆ ಎಂದರೆ ಬಾವಿ ಇದ್ದಂತೆ. ದೇವಾಲಯದಲ್ಲಿ ಹೋಮ, ಹವನಾದಿ, ಅಭಿಷೇಕಗಳು ನಡೆಯುವುದರಿಂದ ದೇವರ ಸಾನಿಧ್ಯ, ಶಕ್ತಿ ಸಂಚಯ ಹೆಚ್ಚಿರುತ್ತದೆ. ಅದಕ್ಕಾಗಿ ದೇವಾಲಯಗಳಿಗೆ ಹೆಚ್ಚೆಚ್ಚು ಭೇಟಿ ನೀಡಿ. ಶ್ರದ್ಧಾಭಕ್ತಿ ಇದ್ದಾಗ ಮಾತ್ರ ದೇವರ ಅನುಗ್ರಹ ದೊರೆಯುತ್ತದೆ. ಮಹಾದ್ವಾರ ನಿರ್ಮಾಣ ಕಾರ್ಯದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಶ್ರಮಿಸಿದವರಿಗೆ ಪುಣ್ಯಸಂಚಯವಾಗುತ್ತದೆ ಎಂದು ನುಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಜಿ.ಜಿ. ಸಭಾಹಿತ ಮಾತನಾಡಿ, ಪ್ರತಿಯೊಂದು ದೇವಾಲಯದಲ್ಲಿ ಆಚಾರ, ವಿಚಾರ ಪದ್ದತಿಯಾಗಿರಬೇಕು. ದೇವಾಲಯಗಳು ಸಂಸ್ಕಾರ ಬೆಳೆಸುವ ಶ್ರದ್ಧಾಕೇಂದ್ರಗಳಾಗಬೇಕು. ಈ ದಿಸೆಯಲ್ಲಿ ದೇವಾಲಯಗಳು ಶ್ರಮಿಸಬೇಕು ಎಂದರು.
ಶ್ರೀಕ್ಷೇತ್ರದ ವೇ.ಜಯರಾಮ ಅಡಿಗಳರವರನ್ನು ಸನ್ಮಾನಿಸಲಾಯಿತು. ವಿದ್ವಾನ್ ಗಜಾನನ ಭಟ್ ಸಭಾಪೂಜೆ ನೆರವೇರಿಸಿದರು. ಗಣೇಶ ಹೆಗಡೆ ದಂಪತಿಗಳು ಶ್ರೀಗಳಿಗೆ ಫಲಸಮರ್ಪಣೆ ನೀಡಿದರು. ಐಸಿರಿ,ಶ್ರಾವಣಿ ಪ್ರಾರ್ಥಿಸಿದರು. ಗಣೇಶ ಹೆಗಡೆ ಸ್ವಾಗತಿಸಿದರು. ಶಿವಾನಂದ ಹೆಗಡೆ ನಿರೂಪಿಸಿದರು. ಗೋಪಾಲ ಹೆಗಡೆ ವಂದಿಸಿದರು. ಗೇರುಸೊಪ್ಪ ಶ್ರೀ ಸೀಮಾ ಮುಖ್ಯಪ್ರಾಣ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.ನಂತರ ದೇವಾಲಯದಲ್ಲಿ ಮಹಾಮಂಗಳಾರತಿ, ಸಭಾಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು. ರಾತ್ರಿ ಭೀಷ್ಮ ವಿಜಯ-ಕೃಷ್ಣಾರ್ಜುನ ಕಾಳಗ ಯಕ್ಷಗಾನ ನಡೆಯಿತು.