ಕೃಷಿ ತಿದ್ದುಪಡಿ ಕಾಯ್ದೆಗಳ ಹಿಂಪಡೆದು ಮಾತು ಉಳಿಸಿಕೊಳ್ಳಿ

KannadaprabhaNewsNetwork | Published : Jul 1, 2025 12:47 AM

ಹಸಿಹಸಿ ಸುಳ್ಳುಗಳನ್ನು ಹೇಳುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರಿಗೆ ಮಾರಕವಾಗಿದೆ. ರಾಜ್ಯದ ಕಾಯ್ದೆಗಳು ರೈತರಿಗೆ ವಿರುದ್ಧವಾಗಿವೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಕಿಡಿಕಾರಿದ್ದಾರೆ.

- ಸಿಎಂ ಸಿದ್ದರಾಮಯ್ಯಗೆ ಕೋಡಿಹಳ್ಳಿ ರೈತನಾಯಕ ಚಂದ್ರಶೇಖರ್‌ ತಾಕೀತು ।

- ಹಸಿ ಸುಳ್ಳಿನ ಸರ್ಕಾರ ಹೆಚ್ಚು ದಿನ ಇರದು ಎಂದು ಟೀಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಸಿಹಸಿ ಸುಳ್ಳುಗಳನ್ನು ಹೇಳುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರಿಗೆ ಮಾರಕವಾಗಿದೆ. ರಾಜ್ಯದ ಕಾಯ್ದೆಗಳು ರೈತರಿಗೆ ವಿರುದ್ಧವಾಗಿವೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಕಿಡಿಕಾರಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ರೈತರ ಪರವಾಗಿದ್ದ ಭೂ ಸ್ವಾಧೀನ ಕಾಯ್ದೆಯನ್ನು ರೈತರಿಗೆ ವಿರುದ್ಧವಾಗಿ ತಿದ್ದುಪಡಿ ಮಾಡಿ, ಜಾರಿಗೆ ತಂದರು. ಆಗ ಡಿಸಿಎಂ ಆಗಿದ್ದ ಸಿದ್ದರಾಮಯ್ಯ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಇರುವುದಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ನೋಡೋಣ ಎಂಬುದಾಗಿ ನನಗೆ ಹೇಳಿದ್ದನ್ನು ಮರೆತಿದ್ದಾರಾ? ಮಾರಕ ಕೃಷಿ ತಿದ್ದುಪಡಿ ಕಾಯ್ದೆಗಳ ಕೈಬಿಡುವ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ಮಾತು ಉಳಿಸಿಕೊಳ್ಳಲಿ ಎಂದರು.

ಆವರ್ತ ನಿಧಿ ಸೃಜಿಸಿ:

ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷ ಕಳೆದರೂ ಇದುವರೆಗೂ ಸಿಎಂ ಸಿದ್ದರಾಮಯ್ಯ ರೈತವಿರೋಧಿ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಲಿಲ್ಲ. ಈ ಸರ್ಕಾರವು ಕೇವಲ ದಂಧೆಯಲ್ಲಿ ಮುಳುಗಿದೆ. ರೈತರು ಸಂಕಷ್ಟದಲ್ಲಿದ್ದಾಗ ನೆರವಿಗೆ ಬಾರದ ಕಾಂಗ್ರೆಸ್ ಸರ್ಕಾರ ದೆಹಲಿ ಸರ್ಕಾರದತ್ತ ಬೊಟ್ಟು ಮಾಡುತ್ತದೆ. ಅದರ ಬದಲಿಗೆ ರೈತರಿಗೆ ಅನುಕೂಲ ಆಗುವಂತೆ ಆವರ್ತ ನಿಧಿ ಸೃಜನೆ ಮಾಡಿ, ರೈತರಿಗೆ ಸಂಕಷ್ಟದ ವೇಳೆ ಉಪಯೋಗ ಆಗುವಂತೆ ಮಾಡಲಿ ಎಂದು ಆಗ್ರಹಿಸಿದರು.

ನೆರೆಯ ಪಾಕಿಸ್ತಾನದ ಜೊತೆ ಯುದ್ಧ ಆರಂಭವಾದಾಗ ಭಾರತ ಟೊಮ್ಯಾಟೋ ರಫ್ತು ನಿಷೇಧಿಸಿತು. ಈಗ ರೈತರು ನಷ್ಟ ಅನುಭವಿಸಿ, ಟೊಮ್ಯಾಟೋ ಹಣ್ಣುಗಳನ್ನು ರಸ್ತೆಗೆ ಚೆಲ್ಲಿ ಪ್ರತಿಭಟಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ರೈತರ ನೆರವಿಗೆ ಧಾವಿಸಬೇಕು. ರಾಜ್ಯ ಸರ್ಕಾರವೂ ಸಹಕಾರ ನೀಡಬೇಕು. ಟೈನ್ ದಾರ ಆಮದು ಆಗದ್ದರಿಂದ ಅದರ ಬೆಲೆ ದುಪ್ಪಟ್ಟಾಗಿದೆ. ಈ ಬಗ್ಗೆಯೂ ಕೇಂದ್ರ, ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಲಿ ಎಂದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೆಚ್ಚು ದಿನಗಳ ಕಾಲ ಅಧಿಕಾರದಲ್ಲಿ ಇರಲಾರದು ಎಂದು ಭವಿಷ್ಯ ನುಡಿದರು.

ರೈತರ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ, ರೈತರಿಗೆ ಅನುಕೂಲ ಆಗುವಂತೆ ಅನೇಕ ನಿರ್ಣಯಗಳನ್ನು ಕೈಗೊಂಡು, ಕೇಂದ್ರ, ರಾಜ್ಯ ಸರ್ಕಾರಗಳು ಅವುಗಳನ್ನು ಬಗೆಹರಿಸಲು ನಿರ್ಣಯ ಕೈಗೊಳ್ಳಬೇಕು. ರೈತರ ವಿಚಾರದಲ್ಲಿ ಸರ್ಕಾರ ಉದಾಸೀನ ಮಾಡಬಾರದು ಎಂದರು.

ಸಂಘದ ಮುಖಂಡರಾದ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಮಂಜುನಾಥ ಗೌಡ ಸೊರಬ, ಭಕ್ತರಹಳ್ಳಿ ಭೈರೇಗೌಡ, ಚಂದ್ರಶೇಖರ ಜಮಖಂಡಿ, ವೀರಭದ್ರ ಸ್ವಾಮಿ, ಮಲ್ಲನಗೌಡ ಪಾಟೀಲ ಕಲ್ಬುರ್ಗಿ, ಮಹಾದೇವಿ ಬೇನಾಳ ಮಠ, ರಾಮೇಗೌಡ ಕೋಲಾರ, ವೀರನಗೌಡ ಪಾಟೀಲ ಇತರರು ಇದ್ದರು.

- - -

(ಕೋಟ್‌) ಲಕ್ಕವಳ್ಳಿಯ ಭದ್ರಾ ಜಲಾಶಯ ಬಲದಂಡೆ ನಾಲೆಯನ್ನು ಸೀಳಿ, ನೀರು ಪೂರೈಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕಾಲಮಿತಿ ನೀಡಲಾಗುವುದು. ಈ ಬಗ್ಗೆ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಸಂಘದ ರಾಜ್ಯಮಟ್ಟದ ಸಭೆ ಕರೆಯಲಾಗಿದೆ. ಭದ್ರಾ ಅಚ್ಚುಕಟ್ಟು ರೈತರ ವಿಚಾರ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಿದ್ದೇವೆ.

- ಕೋಡಿಹಳ್ಳಿ ಚಂದ್ರಶೇಖರ, ರಾಜ್ಯಾಧ್ಯಕ್ಷ, ರೈತ ಸಂಘ

- - -

-30ಕೆಡಿವಿಜಿ1, 2:

ದಾವಣಗೆರೆಯಲ್ಲಿ ಸೋಮವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.