ಹೊನ್ನಾವರ: ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾವರ ಘಟಕದ ವತಿಯಿಂದ ಸರ್ಕಾರದ ಆದೇಶದಂತೆ ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಮತ್ತು ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯುವಂತೆ ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕರ್ನಾಟಕದಲ್ಲಿ ಕನ್ನಡ ಕಡ್ಡಾಯವಾಗಿದ್ದು ಎಲ್ಲ ಅಂಗಡಿ ಮುಂಗಟ್ಟು, ವಾಣಿಜ್ಯ ಮಳಿಗೆ ಮುಂತಾದ ಕಟ್ಟಡಗಳಲ್ಲಿ ಶೇ. 60ರಷ್ಟು ಕನ್ನಡದಲ್ಲಿರುವ ನಾಮಫಲಕ ಅಳವಡಿಸಬೇಕು. ಕನ್ನಡದ ವಿಚಾರವಾಗಿ ಅಧಿಕಾರಿಗಳು ನಿರ್ಲಕ್ಷ ತೋರಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.
ಕನ್ನಡದ ಪರವಾಗಿ ನಿರಂತರ ಹೋರಾಟ ಮಾಡುತ್ತಿರುವ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳಿಂದ ದಿನ ನಿತ್ಯ ಕೋರ್ಟ್, ಕಚೇರಿ ಅಲೆಯುತ್ತಿದ್ದಾರೆ. ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಕ್ಕಾಗಿ ಶ್ರಮಿಸುತ್ತಿರುವ ಹೋರಾಟಗಾರರ ಮೇಲಿನ ಕೇಸ್ ಹಿಂಪಡೆಯಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕನ್ನಡಮಯಗೊಳ್ಳದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಎಲ್ಲ ಕನ್ನಡದ ಅಭಿಮಾನಿಗಳು ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ತಹಸೀಲ್ದಾರ್ ರವಿರಾಜ ದೀಕ್ಷಿತ್ ಮನವಿ ಸ್ವೀಕರಿಸಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ, ಉತ್ತರ ಕನ್ನಡ ಎನ್ನುವ ಹೆಸರಿನಲ್ಲಿಯೇ ಕನ್ನಡ ಎನ್ನುವ ಪದ ಇರುವ ಜಿಲ್ಲೆಯಲ್ಲಿ ಕನ್ನಡ ಮಾಯವಾಗುತ್ತಿದೆ. ಹಾಗಾಗಿ ಹೋರಾಟ ಅನಿವಾರ್ಯವಾಗಿದೆ.
ಕನ್ನಡಪರ ಹೋರಾಟಗಾರರು ಯಾರು ವೈಯಕ್ತಿಕ ಹಿತಾಶಕ್ತಿಗಾಗಿ ಹೋರಾಟ ಮಾಡಿಲ್ಲ. ಅವರದು ಕನ್ನಡಪರ ಹೋರಾಟವಾಗಿರುತ್ತದೆ. ಹೀಗಾಗಿ ಅಂತಹ ಹೋರಾಟಗಾಗರ ಮೇಲೆ ಹಾಕಲಾದ ಕೇಸ್ ವಾಪಾಸ್ ಪಡೆಯಬೇಕೆಂದರು.
ಕರವೇ ವಿದ್ಯಾರ್ಥಿ ಘಟಕದ ಅಧ್ಯಕ್ಷ ನಿಖಿಲ್ ನಾಯ್ಕ, ಸಚಿನ್ ನಾಯ್ಕ, ಸಂದೇಶ ಮೇಸ್ತ, ಎಸ್.ಡಿ. ಹೆಗಡೆ, ತುಕಾರಾಂ ನಾಯ್ಕ, ಅಣ್ಣಪ್ಪ ನಾಯ್ಕ, ಅಣ್ಣಪ್ಪ ಗೌಡ, ರಾಜೇಶ ನಾಯ್ಕ, ಕರವೇ ಜಿಲ್ಲಾ ಸಾಮಾಜಿಕ ಜಾಲತಾಣದ ಶ್ರೀಕಾಂತ ಪಟಗಾರ, ಶಂಕರಗೌಡ ಗುಣವಂತೆ, ಪ್ರವೀಣ ನಾಯ್ಕ, ಗಣೇಶ ಗೌಡ, ಮಹಿಳಾ ಮುಖಂಡರಾದ ಜ್ಯೋತಿ ಮಡಿವಾಳ, ಚಂದ್ರಕಲಾ ಪಟಗಾರ, ನಾಗವೇಣಿ ನಾಯ್ಕ ಹಾಜರಿದ್ದರು.