ಚಾಲಕರಿಗೆ ಮಾರಕವಾಗಿರುವ ಕಾಯ್ದೆ ವಾಪಸ್ ಪಡೆಯಿರಿ

KannadaprabhaNewsNetwork | Published : Jan 18, 2024 2:02 AM

ಸಾರಾಂಶ

ಮೊದಲು ಅಪಫಾತ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ದೊಷಾರೋಪಣೆ ಪಟ್ಟಿ ಸಲ್ಲಿಸಿ ತಪ್ಪಿತಸ್ಥನೆಂದು ಸಾಭೀತಾದಾಗ ಮಾತ್ರ ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ ಹೊಸ ನ್ಯಾಯ ಸಮಿತಿಯಲ್ಲಿ ಇದಕ್ಕೆ ಅವಕಾಶವೇ ಇಲ್ಲದಂತಾಗಿದೆ.

ಲಾರಿ ಮಾಲೀಕರು,ಚಾಲಕರ ಮುಷ್ಕರ । ಹಿಟ್ ಆಂಡ್ ರನ್ ಕಾಯ್ದೆ ವಾಪಸ್ ಪಡೆಯುವಂತೆ ಒತ್ತಾಯ

ಕನ್ನಡಪ್ರಭ ವಾರ್ತೆ ಮಾಲೂರು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಿಟ್ ಅಂಡ್ ರನ್ ಕಾಯ್ದೆ ಸಾರಿಗೆ ಕ್ಷೇತ್ರಕ್ಕೆ ಮಾರಕವಾಗಿದ್ದು, ಈ ಕೂಡಲೇ ವಾಪಸ್ ಪಡೆಯಬೇಕೆಂದು ಅಗ್ರಹಿಸಿ ಲಾರಿ ಮಾಲೀಕರ ಸಂಘದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು

ಹಿಟ್ ಆಂಡ್ ರನ್ ಕಾಯ್ದೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರಕ್ಕಾಗಿ ಫೆಡರೇಷನ್ ಆಫ್ ಲಾರಿ ಮಾಲೀಕರ ಸಂಘದ ಕರೆಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದ ಲಾರಿ ಮಾಲೀಕರು, ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಡಾ.ರಾಜ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಮಾಲೂರು ತಾಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎ.ಎನ್.ಮುನಿರಾಜು ಮಾತನಾಡಿ, ಕೇಂದ್ರ ಸರ್ಕಾರ ತಂದಿರುವ ವಾಹನ ಕಾಯ್ದೆಗಳಲ್ಲಿ ಹಿಟ್ ಆಂಡ್ ರನ್ ಗೆ ಸಂಬಂಧಿಸಿದ ಕಾಯ್ದೆ ಲಾರಿ ಚಾಲಕರಿಗೆ ಮಾರಕವಾಗಿದೆ. ಅಪಘಾತವಾದ ಸಂದರ್ಭದಲ್ಲಿ ಜನರು ಹಲ್ಲೆ ಮಾಡುವ ಭಯದಿಂದ ಚಾಲಕನು ಪರಾರಿಯಾದರೆ ಅತನಿಗೆ ಏಳು ವರ್ಷ ಶಿಕ್ಷೆ ಹಾಗೂ ೧೦ ಲಕ್ಷ ರು. ದಂಡ ವಿಧಿಸಲು ಹೊಸದಾಗಿ ಭಾರತೀಯ ನ್ಯಾಯ ಸಂಹಿತೆಯಲ್ಲಿ ಅವಕಾಶ ನೀಡಲಾಗಿದೆ, ಇದು ಅತ್ಯಂತ ಅವೈಜ್ಞಾನಿಕವಾಗಿದೆ. ಮೊದಲು ಅಪಫಾತ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ದೊಷಾರೋಪಣೆ ಪಟ್ಟಿ ಸಲ್ಲಿಸಿ ತಪ್ಪಿತಸ್ಥನೆಂದು ಸಾಭೀತಾದಾಗ ಮಾತ್ರ ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ ಹೊಸ ನ್ಯಾಯ ಸಮಿತಿಯಲ್ಲಿ ಇದಕ್ಕೆ ಅವಕಾಶವೇ ಇಲ್ಲದಂತಾಗಿದೆ ಎಂದರು.

ಈ ಕಾಯ್ದೆ ಬಾರಿ ವಾಹನಗಳಿಗೆ ಸಂಬಂಧಿಸಿರುವುದು ಮಾತ್ರವಲ್ಲ. ಲಘು ವಾಹನಗಳೂ ಈ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತವೆ, ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಕಾಯ್ದೆ ಜಾರಿಗೆ ತಂದು ಎರಡು ವರ್ಷವಿದ್ದ ಶಿಕ್ಷೆಯನ್ನು ಏಳು ವರ್ಷಕ್ಕೆ ಹೆಚ್ಚಿಸಲಾಗಿದೆ. ಇದನ್ನು ಖಂಡಿಸಿ ಕೇಂದ್ರ ಸರ್ಕಾರ ಹೊಸ ಕಾಯ್ದೆಯನ್ನು ವಾಪಸ್ಸು ಪಡೆಯುವಂತೆ ಅಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಕಾಯ್ದೆ ಹಿಂತೆಗೆದುಕೊಳ್ಳುವವರೆಗೂ ಅನಿರ್ಧಿಷ್ಟಾವಧಿ ಹೋರಾಟ ಮುಂದುವರೆಯಲಿದೆ ಎಂದರು.

ಮಾಲೂರು ತಾಲೂಕು ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಕಾರ‍್ಯದರ್ಶಿ ಎನ್.ರಾಮಕೃಷ್ಣಪ್ಪ ,ಗೌರವಾಧ್ಯಕ್ಷ ಕೃಷ್ಣಪ್ಪ ,ಉಪಾಧ್ಯಕ್ಷ ಪಾಪರೆಡ್ಡಿ, ನಿರ್ದೇಶಕರಾದ ಬಸವರಾಜು, ನಾಗರಾಜ ರೆಡ್ಡಿ, ನಾರಾಯಣಸ್ವಾಮಿ, ಶ್ರಿ ರಾಮ್, ಶಬ್ಬೀರ್, ಶಂಕರಪ್ಪ, ರಾಮಚಂದ್ರರಾವ್, ಗೌರವಾಧ್ಯಕ್ಷ ದೇವರಾಜ್, ನಾರಾಯಣಪ್ಪ, ಡಿ.ಕೃಷ್ಣಪ್ಪ, ವೆಂಕಟರಮಣಪ್ಪ, ಜಗದೀಶ್, ಅಕಾಶ್ ಇನ್ನಿತರರಿದ್ದರು.

Share this article