ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ 8 ತಾಸು ಗುಣಮಟ್ಟದ ವಿದ್ಯುತ್ ಪೂರೈಸಲು ಆಗ್ರಹ
ಗ್ರಾಮೀಣ ಪ್ರದೇಶಗಳ ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ 8 ತಾಸು ಗುಣಮಟ್ಟದ ವಿದ್ಯುತ್ ಪೂರೈಸಿ, ಒಣಗುತ್ತಿರುವ ರೈತರ ಬೆಳೆಗಳನ್ನು ರಕ್ಷಿಸಬೇಕು. ವಿದ್ಯುತ್ ಸಮಸ್ಯೆಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರ ಬೆಳೆ ಸಮೀಕ್ಷೆ ನಡೆಸಲು ವಿಶೇಷ ಬೆಸ್ಕಾಂ ಅಧಿಕಾರಿಗಳ ತಂಡ ರಚಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಕಾಮಸಮುದ್ರ ಬೆಸ್ಕಾಂ ಕಚೇರಿ ಮುಂದೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ವಿದ್ಯುತ್ ಪೂರೈಸದೆ ಲೋಡ್‌ಶೆಡ್ಡಿಂಗ್ ಹೆಸರಿನಲ್ಲಿ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ಬೆಳೆದಿರುವ ಬೆಳೆಗಳು ಒಣಗುತ್ತಿವೆ. ಕೂಡಲೇ ಸಮಸ್ಯೆ ಬಗೆಹರಿಸಿ ರೈತರ ಬೆಳೆ ರಕ್ಷಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಕದರಿನತ್ತ ಅಷ್ಟೋಜಿರಾವ್ ಮಾತನಾಡಿ, ರೈತರ ಅನ್ನದಿಂದ ಬದುಕುತ್ತಿರುವ ಶ್ರೀಮಂತರು, ಕಾರ್ಖಾನೆಗಳು ಹಾಗೂ ರಾಜಕೀಯ ಕಾರ್ಯಕ್ರಮಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ ಅನ್ನದಾತನ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ನೀಡದಿರುವುದು ದುರದೃಷ್ಟಕರ. ಕನಿಷ್ಠ 20 ನಿಮಿಷವೂ ನಿರಂತರ ಗುಣಮಟ್ಟದ ವಿದ್ಯುತ್ ನೀಡದೆ ರೈತರ ಬೆಳೆಗಳನ್ನು ನಾಶಪಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಗಿರೀಶ್, ಲಕ್ಷ್ಮಣ್, ಸಂತೋಷ್, ಗೋವಿಂದಪ್ಪ, ಮುನಿರಾಜು, ವಿಶ್ವ, ಕಿರಣ್, ರಮೇಶ್ ರೆಡ್ಡಿ, ವೆಂಕಟೇಶ್, ಕೃಷ್ಣಪ್ಪ, ನಾಗರೆಡ್ಡಿ, ಆನಂದರಾವ್, ಚಂದ್ರಪ್ಪ, ನಾರಾಯಣಸ್ವಾಮಿ, ರವೀಂದ್ರ, ವೆಂಕಟೇಶ್ ರೆಡ್ಡಿ, ಬಾಬುರಾವ್, ಗುಳಪ್ಪ, ಗೋವಿಂದಪ್ಪ, ವೆಂಕಟ, ಚಲಪತಿ ಇದ್ದರು.