ಕನ್ನಡಪ್ರಭ ವಾರ್ತೆ ಮಾಗಡಿ
ನಾಗಮಂಗಲ ಗಲಭೆ ಕಾಂಗ್ರೆಸ್ ಪ್ರಾಯೋಜಿತ ಎಂಬ ಕುಮಾರಸ್ವಾಮಿ ಆರೋಪ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಯವರ ಮಾತಿಗು ಕೃತಿಗು ಹೋಲಿಕೆ ಆಗುವುದಿಲ್ಲ. ಅವರು ಮಾತನಾಡುವುದು ಕೂಡ ಹಾಗೆಯೇ ಎಂದು ಕಿಡಿಕಾರಿದರು.
ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಗಲಭೆ ಮಾಡಿದ್ದಾರೆ ಎಂದಿರುವ ಕುಮಾರಸ್ವಾಮಿ ಅವರ ಮನಸ್ಥಿತಿ ಎಂತಹದ್ದು ಎಂಬುದು ಅವರ ಮಾತುಗಳಲ್ಲೇ ಗೊತ್ತಾಗುತ್ತದೆ. ನಾಗಮಂಗಲದಲ್ಲಿ ನಡೆದಿರುವ ಸಣ್ಣ ಗಲಾಟೆ. ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುತ್ತಿದೆ. ಯಾವುದೇ ಒಂದು ಧರ್ಮವನ್ನು ಓಲೈಕೆ ಮಾಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿಲ್ಲ. ಧರ್ಮದ ವಿಚಾರದಲ್ಲಿ ಯಾರೇ ತೊಂದರೆ ಕೊಟ್ಟರೂ ಸಹಿಸಲ್ಲ. ಅವರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದರು.ಕಾಂಗ್ರೆಸ್ ಒಂದು ಕೋಮಿನ ಓಲೈಕೆ ಮಾಡುತ್ತಿದೆ ಎನ್ನುವ ಕುಮಾರಸ್ವಾಮಿ ಅವರನ್ನೇ ಈ ಪ್ರಕರಣದ ತನಿಖಾಧಿಕಾರಿಗಳನ್ನಾಗಿ ಮಾಡುವಂತೆ ನಾನು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ. ಅವರನ್ನೇ ತನಿಖಾಧಿಯಾರಿಯನ್ನಾಗಿ ಮಾಡಿದರೆ, ಅವರ ತನಿಖೆಯಿಂದಲೇ ಎಲ್ಲಾ ಹೊರಗಡೆ ಬರಲಿ ಎಂದು ತಿರುಗೇಟು ನೀಡಿದರು.
ಗಲಭೆ ಪ್ರಕರಣಕ್ಕೆ ರಾಜಕೀಯ ತಿರುವು ಕೊಡುತ್ತಿರುವುದು ನಾವಲ್ಲ. ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ಪ್ರಕರಣವನ್ನು ರಾಜಕೀಯವಾಗಿ ವಿಶ್ಲೇಷಿಸುತ್ತಿದ್ದಾರೆ. ಪ್ರಕರಣದ ತಪ್ಪಿತಸ್ಥರು ಯಾರೇ ಆದರೂ ಶಿಕ್ಷೆಯಾಗಲಿ ಎಂದರು.