ಮನುಷ್ಯ ಎಷ್ಟೇ ಶ್ರೀಮಂತರಾದರು ಶಾಂತಿ ನೆಮ್ಮದಿ ಇಲ್ಲದಿದ್ದರೆ ಬದುಕು ಶೂನ್ಯ ಎಂದು ಬೆಟ್ಟದಹಳ್ಳಿ ಗವಿಮಠ ಶ್ರೀ ಚಂದ್ರಶೇಖರ ಸ್ವಾಮಿಗಳು ತಿಳಿಸಿದರು.
ಕನ್ನಡಪ್ರಭವಾರ್ತೆ ಗುಬ್ಬಿ
ಮನುಷ್ಯ ಎಷ್ಟೇ ಶ್ರೀಮಂತರಾದರು ಶಾಂತಿ ನೆಮ್ಮದಿ ಇಲ್ಲದಿದ್ದರೆ ಬದುಕು ಶೂನ್ಯ ಎಂದು ಬೆಟ್ಟದಹಳ್ಳಿ ಗವಿಮಠ ಶ್ರೀ ಚಂದ್ರಶೇಖರ ಸ್ವಾಮಿಗಳು ತಿಳಿಸಿದರು. ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿಗಳ ಸಂಸ್ಮರಣೋತ್ಸವ ಹಾಗೂ ರಾಜ್ಯಮಟ್ಟದ ಭಜನಾ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತು ಎಷ್ಟೇ ಶ್ರೀಮಂತಿಕೆಯಿಂದ ಕೂಡಿದ್ದರೇನು ಕೇವಲ ಹಣ ಸಂಪಾದನೆ ಮಾಡಿದರೆ ಸಾಲದು. ಮಾನಸಿಕ ನೆಮ್ಮದಿ ಬೇಕು. ಇದಕ್ಕೆ ಮೂಲ ಭಜನೆ , ಸಂಗೀತ ಮುಖ್ಯ ಎಂದರು. ಗವಿಮಠ ಬೆಟ್ಟದಹಳ್ಳಿಯಲ್ಲಿ ಸುಮಾರು 40 ವರ್ಷಗಳಿಂದ ಭಜನಾ ಮೇಳವನ್ನು ಮಾಡಿಕೊಂಡು ಬಂದಿರುತ್ತೇವೆ. ಸಾವಿರಾರು ಭಕ್ತರು ಭಾಗವಹಿಸುತ್ತಿದ್ದು ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಮನದಾಸೆಯಂತೆ ಅಂದಿನಿಂದ ಇಂದಿನವರೆಗೂ ಶ್ರೀಮಠದಲ್ಲಿ ಭಜನೆ ಬಸವಾದಿ ತತ್ವ ಚಿಂತನೆ ಮುಂತಾದ ಕಾರ್ಯಕ್ರಮಗಳಿಂದ ಭಕ್ತರ ಸಂಖ್ಯೆ ಶಾಂತಿ ನೆಮ್ಮದಿ ಹುಡುಕುವ ನಿಟ್ಟಿನಲ್ಲಿ ಶ್ರೀ ಗವಿಮಠದ ಕಡೆ ಹೆಜ್ಜೆ ಹಾಕುತ್ತಿರುವುದು ತೃಪ್ತಿ ತಂದಿದೆ ಎಂದು ತಿಳಿಸಿದರು.ಮಾನವ ಸಂಪನ್ಮೂಲ ಅಭಿವೃದ್ದಿ ಸಲಹೆಗಾರ ಡಾ.ಕುಮಾರಸ್ವಾಮಿ ಮಾತನಾಡಿ, ನಾನು ಕೂಡ ಶಿವಕುಮಾರಸ್ವಾಮಿಗಳ ಆರ್ಶಿವಾದದಿಂದ ದೊಡ್ಡ ಮಟ್ಟಕ್ಕೆ ಬೆಳೆದಿದ್ದೇನೆ. ಶ್ರೀಮಠದಲ್ಲಿ ವಿದ್ಯಾಭ್ಯಾಸ ಮಾಡಿ ನಾನು ಕೂಡ ಸಮಾಜ ಸೇವೆ ಮಾಡುತ್ತಿದ್ದೇನೆ. ನಾನು ಬರೆದಿರುವ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಗ್ರಂಥ ಲೋಕಾರ್ಪಣೆ ಮಾಡಿದ್ದೇನೆ. ಎಲ್ಲರೂ ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನ ಸಂಪಾದನೆ ಮಾಡಬೇಕು ಎಂದರು. ಶೀಡ್ಲೆಕೋಣ ಮಠದ ಶ್ರೀ ಸಂಜಯಕುಮಾರ ಸ್ವಾಮೀಜಿ ಮಾತನಾಡಿ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯನಿಗೆ ಮನಶಾಂತಿ ಇಲ್ಲವಾಗಿದೆ. ಹಿಂದಿನ ಕಾಲದಲ್ಲಿ ಸಂಜೆ ವೇಳೆ ಮನೆಮನೆಯಲ್ಲೂ ಭಜನೆ ನಡೆಯುತ್ತಿತ್ತು. ಇಂದು ಭಜನೆ ಮಾಯವಾಗಿ ಟಿವಿ ಬೇತಾಳ ಕಾಡುತ್ತಿದೆ. ಮೊಬೈಲ್ ಗಳು ಪುಸ್ತಕ ಓದುವ ಅಬಿರುಚಿಯನ್ನು ಕೊಲ್ಲುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಗೊಲ್ಲಹಳ್ಳಿ ಮಠದ ಶ್ರೀ ವಿಭಾವ ವಿದ್ಯಾಶಂಕರದೇಶೀಕದ್ರ ಸ್ವಾಮಿಗಳು , ಮಾಗಡಿ ತಾಲೂಕಿನ ರುದ್ರಮುನೇಶ್ವರ ಮಠದ ಶ್ರೀ ಚಂದ್ರಶೇಖರಸ್ವಾಮಿಗಳು, ಮಾಡಾಳು ಮಠದ ರುದ್ರಮುನಿಸ್ವಾಮಿಗಳು , ಬಸವಕಲ್ಯಾಣ ಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ತಾಲೂಕು ಶರಣ ಪರಿಷತ್ ಅಧ್ಯಕ್ಷರಾದ ಪಾಲನೇತ್ರಪ್ಪ, ಕಾರ್ಯದರ್ಶಿ ನಿರಂಜನಮೂರ್ತಿ , ಮುಖಂಡರಾದ ಸಿದ್ದರಾಮಣ್ಣ , ಬಸವರಾಜು , ನಿರಂಜನಮೂರ್ತಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.