ಶೇಷಮೂರ್ತಿ ಅವಧಾನಿ
ನಾರಾಯಣಪುರ ಜಲಾಶಯದಿಂದ 1 ಟಿಎಂಸಿ ಕೃಷ್ಣಾ ನೀರನ್ನು ಹರಿಸಿದರೂ ಕೂಡಾ ಭೀಮಾ ನದಿ ತೀರದಲ್ಲಿರುವ ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಮಣ್ಣೂರು, ಶೇಷಗಿರಿವಾಡಿ, ಕುಡಿಗನೂರ್, ಶಿವೂರ್, ಉಡಚಾಣ, ಉಡಚಾಣ ಹಟ್ಟಿ ಹಾಗೂ ವಿಜಯಪುರ ಜಿಲ್ಲೆ ಇಂಡಿಯ ಸಾಲೂಟಗಿ, ಬೇನೂರ, ಚಿಕ್ಕಮಣ್ಣೂರ, ಭೂಯ್ಯಾರ, ರೊಡಗಿ, ಖ್ಯಾಡಗಿ, ನಾಗರಳ್ಳಿ ಸೇರಿದಂತೆ 12 ಊರುಗಳ ಭೀಮೆಯ ಒಡಲು ಹನಿ ನೀರೂ ಕಾಣದೆ ಬಣಗುಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಭೀಮಾ ತೀರದ ಈ ಹನ್ನೆರಡು ಗ್ರಾಮಗಳಿಗೆ ಇತ್ತ ಮಹಾರಾಷ್ಟ್ರದ ಉಜನಿ ನೀರೂ ಹರಿಯಲಿಲ್ಲ, ಅತ್ತ ನಾರಾಯಣಪುರದ ಕೃಷ್ಣೆಯ ನೀರೂ ಲಭ್ಯವಾಗದೆ ಪಕ್ಕದಲ್ಲೇ ನದಿ ಇದ್ದರೂ ಕೂಡಾ ಅಕ್ಷರಶಃ ಶಾಪಗ್ರಸ್ತ ಗ್ರಾಮಗಳಾಗಿ ಕಂಗಾಲಾಗಿವೆ.ಬತ್ತಿದ ಭಈಮೆಗೆ 5 ಟಿಎಂಸಿ ನೀರು ಹರಿಸಿ ಎಂದು ರಾಜ್ಯದ ಸಿಎಂ ಸಿದ್ದರಾಮಯ್ಯ ಪತ್ರ ಬರೆದರು ಬದಿಗಿಟ್ಟ ಮಹಾರಾಷ್ಟ್ರ ಕಳೆದ ಮಾರ್ಚ್ 3 ನೇ ವಾರ ಸೊಲ್ಲಾಪುರ, ಅಕ್ಕಲಕೋಟೆ ಗಡಿಯಲ್ಲಿರುವ ತನ್ನ ಗ್ರಾಮಗಳ ನೀರಿನ ಹಾಹಾಕಾರ ನೀಗಿಸಲುನಿತ್ಯ 6 ಸಾವಿರ ಕ್ಯೂಸೆಕ್ ನೀರು 12 ದಿನ ಹರಿಬಿಟ್ಟಾಗಲೂ ಮೇಲೆ ನಮೂದಿಸಿದ 12 ಊರುಗಳಿಗೆ ಆ ನೀರು ಹರಿದು ಬರಲಿಲ್ಲ!
ಮಹಾರಾಷ್ಟ್ರದವರು ಉಜನಿ ಜಲಾಶಯದಿಂದ ನೀರು ಹರಿಸಿ ಅದು ಅಕ್ಕಲಕೋಟೆ ತಾಲೂಕಿನ ಹಿಳ್ಳಿ ಬಾಂದಾರು ತಲುಪುತ್ತಿದ್ದಂತೆಯೇ ನೀರು ಹರಿಸೋದನ್ನೇ ನಿಲ್ಲಿಸಿಬ್ಬಿಟ್ಟಿದ್ದರಿಂದ ಭೀಮೆಗೆ ಉಜನಿ ನೀರು ಬರಲಿಲ್ಲ.
ನೀರು ಹರಿಸಲು ಹಳೆ ಮಾರ್ಗ ಬಳಕೆ, ಸ್ಥಳೀಯ ಜ್ಞಾನದ ಕೊರತೆಯೇ 12 ಹಳ್ಳಿ ಗೋಳಿಗೆ ಕಾರಣ!
ಹೋರಾಟಗಾರರ ಬೇಡಿಕೆಯಂತೆ ತಕ್ಷಣವೇ ಮಹಾರಾಷ್ಟ್ರದ ಉಜನಿಯಿಂದ ನೀರು ಹರಿದು ಬಾರದೆ ಹೋದರೂ ಪಕ್ಕದ ನಾರಾಯಣಪುರದಿಂದಲಾದರೂ 1 ಟಿಎಂಸಿ ನೀರು ಅಫಜಲ್ಪುರದಲ್ಲಿ ಪ್ರವಹಿಸುವ ಭೀಮೆಗೆ ಹರಿಸೋಣವೆಂದು ಕಲಬುರಗಿ ಪ್ರಾ. ಆಯುಕ್ತ ಕೃಷ್ಣ ಬಾಜಪೇಯಿ ಮಾ.27ರಂದೇ ಆದೇಶ ಹೊರಡಿಸಿ, 1 ಟಿಎ₹ಸಿ ನೀರು ಜಲಾಶಯದಿಂದ ಕೆಬಿಜೆಎನ್‌ಎಲ್ ಕಾಲುವೆ ನಂಬರ್ 84 ಬಳಗಾನೂರ, ನಂ-11 ಕುಳಕಮಡಿ, ಎಸ್ಕೇಪ್ ಗೇಟ್ 50 ಅಥವಾ ಇಂಡಿ ಶಾಖಾ ಕಾಲುವೆಯಿಂದ 13, 14ನೇ ವಿತರಣೆ ಕಾಲುವೆಯಿಂದ ಸದರಿ ನೀರನ್ನು ಭೀಮಾ ನದಿಗೆ ಹರಿಸುವಂತೆ ಸೂಚಿಸಿದ್ದರು. ಹೀಗೆ ಸೂಚಿತ ಮಾರ್ಗದಲ್ಲಿ ನೀರು ಹರಿದಿದ್ದರಿಂದಲೇ 12 ಗ್ರಾಮಗಳ ಭೀಮಾ ತೀರ ನೀರಿಲ್ಲದೆ ಬಣಗುಟ್ಟಲು ಕಾರಣವಾಗಿದೆ.
ಮೇಲೆ ತಿಳಿಸಿದಂತೆ ಈ ಮಾರ್ಗದಲ್ಲಿ ಭೀಮೆಗೆ ನೀರು ಹರಿಸಲು ಅವಕಾಶವಿದ್ದರೂ ಕೂಡಾ ಪ್ರಾ. ಆಯುಕ್ತರು, ಜಿಲ್ಲಾಧಿಕಾರಿಗಳು, ಕೆಬಿಜೆಎನ್‌ಎಲ್ ಅದ್ಯಾಕೆ ಈ ಮಾರ್ಗವನ್ನೇ ಅನುಸರಿಸುತೋ? ಈ ಹೊಸ ದಾರಿಯಿಂದ ನೀರು ಹರಿದಿದ್ದರೆ 18 ರಿಂದ 20 ಕಿಮೀ ಭೀಮಾ ನದಿ ತೀರಕ್ಕೂ ನೀರು ಲಭ್ಯವಾಗುತ್ತಿತ್ತು. ಸುಲಭದ ಈ ದಾರಿ ಜಿಲ್ಲಾಡಳಿತ ಬದಿಗೊತ್ತಿದ್ದರಿಂದಲೇ 12 ಗ್ರಾಮಗಳಲ್ಲಿ ನೀರಿನ ಹಾಹಾಕಾರ ಮುಗಿಲು ಮುಟ್ಟಿದೆ.
ಇತ್ತ ಉಜನಿ ನೀರು, ಅತ್ತ ಕೃಷ್ಣಾ ನೀರು ಎರಡೂ ದೊರಕದೆ ಕಂಗಾಲಾಗಿರುವ ನದಿ ತೀರದ ಜನತೆ ಹೌಹಾರಿದ್ದಾರೆ. ಇದು ಸರಿಯಾದ ಕ್ರಮವಲ್ಲ, ನದಿ ಬತ್ತಿ ಬರಿದಾಗಿ 3 ತಿಂಗಳಾಗಿತ್ತು. ಈಗ ಕೃಷ್ಣಾನದಿ ನೀರು ಹರಿಸಿದ್ದು ಸಂತಸ ತಂದಿತ್ತು. ಆದರೆ ಬೇವನೂರ್, ಹಿಂಗಣಿ ಬಾಂದಾರು ಮೂಲಕ ನೀರು ಹರಿಸದೆ ಬೇರೆ ದಾರಿ ಬಳಸಿದ್ದೇ ನಾವು ನೀರಿಲ್ಲದೆ ಪರದಾಡುವಂತಾಗಿದೆ. ಪ್ರಾ. ಆಯುಕ್ತರು ತಮ್ಮ ಮಾ. 27 ರ ಆದೇಶ ಮಾರ್ಪಾಟು ಮಾಡಿ ಮರು ಆದೇಶ ಮಾಡಲಿ, ನಮ್ಮೂರುಗಳಿಗೂ ನೀರು ಹರಿದು ಬರುವಂತೆ ತುರ್ತು ಕ್ರಮಕ್ಕೆ ಮುಂದಾಗಲಿ ಎಂದು ಆಗ್ರಹಿಸುತ್ತಿದ್ದಾರೆ.ನಮ್ಮೂರು ಮಣ್ಣೂರು ಮೇಲೆಯೇ ಮಹಾರಾಷ್ಟ್ರದ ಗಡಿ ಇದೆ, ಅಲ್ಲಿರೋ ಅಕ್ಕಲಕೋಟೆ ತಾಲೂಕಿನ ಹಿಳ್ಳಿ ಬಾಂದಾರುವರೆಗೂ ಭರಪೂರ್ ಉಜನಿ ನೀರು ನಿಂತಿದೆ. ಕೆಳಗಡೆ ಉಡಚಾಣದ ಮಿರಗಿಯಿಂದ ಕೃಷ್ಣೆಯ ನೀರು ಭೀಮೆಯಲ್ಲಿ ಹರಿಯುತ್ತಿದೆ. ಆದರೆ ಇವೆರಡರ ನಡುವಿರುವ ಮಣ್ಣೂರು, ಶೇಷಗಿರಿ ಸೇರಿದಂತಿರುವ 12 ಊರುಗಳಲ್ಲಿ ನೀರಿಲ್ಲದೆ ಹಾಹಾಕಾರ ಶುರುವಾಗಿದೆ. ಬೇವನೂರು ಕಾಲುವೆ ಮೂಲಕ ಹಿಂಗಣಿ ಬಾಂದಾರಿನಿಂದ ನೀರು ಹರಿದಿದ್ದರೆ ಎಲ್ಲರಿಗೂ ಅನುಕೂಲವಗುತ್ತಿತ್ತು. ಜಿಲ್ಲಾಡಳಿತ ಯಾಕೆ ಹೀಗೆ ಮಾಡಿದೆಯೋ? ಅದಾಗಲೇ ಉಜನಿ ನೀರು ಗಡಿಯವರೆಗೂ ಇರೋದರಿಂದ ಹೆಚ್ಚಿನ ಪ್ರಮಾಣದ ನೀರು ಸಹ ವ್ಯರ್ಥವಾಗೋದಿಲ್ಲ. ಈಗಲಾದರೂ ಈ ದಾರಿಯಲ್ಲಿ ನೀರು ಹರಿಸಿ ನಮ್ಮ ಗೋಳಿಗೂ ಪರಿಹಾರ ಕೊಡಲಿ.