ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಕೆಎಂಸಿ ವತಿಯಿಂದ ಸಾರ್ವಜನಿಕರಲ್ಲ ಜಾಗೃತಿ ಮೂಡಿಸಲು ಮಲ್ಪೆಯಲ್ಲಿರುವ ಗಾಂಧಿ ಸ್ಮಾರಕವನ್ನು ನೀಲಿ ದೀಪಗಳಿಂದ ಬೆಳಗಲಾಯಿತು
ಕನ್ನಡಪ್ರಭ ವಾರ್ತೆ ಮಣಿಪಾಲಮಧುಮೇಹ ಕಾಯಿಲೆ ತಡೆಗಟ್ಟುವ ಹಾಗೂ ಅದನ್ನು ನಿರ್ವಹಿಸುವ ಅಗತ್ಯ ಕ್ರಮಗಳ ಬಗ್ಗೆ ಜಾಗೃತಿಗಾಗಿ ವಿಶ್ವದಾದ್ಯಂತ ನ. 14 ರಂದು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಅದರಂತೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಎಂಡೋಕ್ರಿನೊಲೊಜಿ (ಅಂತಃಸ್ರಾವಶಾಸ್ತ್ರ) ವಿಭಾಗದಿಂದ ವಿಶ್ವ ಮಧುಮೇಹ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನ. 14 ರಂದು ರಾತ್ರಿ ಮಲ್ಪೆ ಬೀಚ್ ನಲ್ಲಿರುವ ಗಾಂಧಿ ಸ್ಮಾರಕವನ್ನು ನೀಲಿ ದೀಪಗಳಿಂದ ಬೆಳಗಲಾಯಿತು.
ಎಂಡೋಕ್ರೈನಾಲಜಿ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ.ಸಹನಾ ಶೆಟ್ಟಿ ಮಾತನಾಡಿ, ಭಾರತದಲ್ಲಿ ಪ್ರತಿ 11 ಜನರಲ್ಲಿ ಒಬ್ಬರು ಟೈಪ್ 2 ಡಯಾಬಿಟಿಸ್ ನಿಂದ ಬಳಲುತ್ತಿದ್ದು, ಈ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಧುಮೇಹವು ಹೃದ್ರೋಗ, ಮೂತ್ರಪಿಂಡದ ಸಮಸ್ಯೆಗಳು, ವಯಸ್ಕರಲ್ಲಿ ಕಣ್ಣಿನ ಸಮಸ್ಯೆಗಳು, ನರಗಳ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ಈ ಡಯಾಬಿಟಿಸ್ ನ್ನು ಆರೋಗ್ಯಕರ ಆಹಾರ ಪದ್ಧತಿ ಮೂಲಕ ಮತ್ತು ಚಿಕ್ಕ ವಯಸ್ಸಿನಿಂದಲೇ ನಿತ್ಯ ವ್ಯಾಯಾಮದ ಮೂಲಕ ತಡೆಗಟ್ಟಬಹುದು. ವೈದ್ಯರು ಸೂಚಿಸಿದ ಸೂಕ್ತವಾದ ಔಷಧಿಗಳನ್ನು ತೆಗೆದುಕೊಳ್ಳುವುದು ಮತ್ತು ನಿಯಮಿತವಾಗಿ ತಪಾಸಣೆ ಅತ್ಯಗತ್ಯ ಎಂದರು.
ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಮಾತನಾಡಿ, ಮಧುಮೇಹ ಇರುವವರು ಮುಖ್ಯವಾಗಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಾಳುಗಳು, ರಾಗಿ, ಬೀಜಗಳು, ತೆಳ್ಳಗಿನ ಮಾಂಸ ಮತ್ತು ಕಡಿಮೆ ಕೊಬ್ಬಿನ ಆಹಾರ ಒಳಗೊಂಡಂತೆ, ಆರೋಗ್ಯಕರ ಪೋಷಕಾಂಶಯುಕ್ತ ಆಹಾರ ತಿನ್ನುವ ಮೂಲಕ ಇದರಿಂದಾಗುವ ತೊಂದರೆಗಳನ್ನು ತಡೆಯಬಹುದು ಮತ್ತು ಗ್ಲುಕೋಸ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದರು.ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.