.ಭ್ರೂಣಲಿಂಗ ಪತ್ತೆ ಪ್ರಕರಣದಲ್ಲಿ ಓರ್ವ ಮಹಿಳೆ ಬಂಧನ

KannadaprabhaNewsNetwork |  
Published : Aug 06, 2026, 02:00 AM IST
ಡಾ.ಜಿ.ಸಿ.ಬೆಟ್ಟಸ್ವಾಮಿ | Kannada Prabha

ಸಾರಾಂಶ

ಜು.೨೯ರಂದು ಮಧ್ಯಾಹ್ನ ೧೨.೧೫ಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ ಅವರಿಗೆ ಅನಾಮಿಕ ವ್ಯಕ್ತಿಯೊಬ್ಬರು ಕರೆ ಮಾಡಿ ಮಹಿಳೆಯೊಬ್ಬರು ಈಗಾಗಲೇ ಹೆಣ್ಣು ಮಕ್ಕಳನ್ನು ಹೊಂದಿರುವ ಗರ್ಭಿಣಿಯರನ್ನು ಬೇರೆಡೆ ಕರೆದುಕೊಂಡು ಹೋಗಿ ಸ್ಕ್ಯಾನಿಂಗ್ ಮಾಡಿಸಿ ಲಿಂಗ ಪತ್ತೆಹಚ್ಚಿ ಹೆಣ್ಣು ಮಗುವಾಗಿದ್ದರೆ ಗರ್ಭಪಾತ ಮಾಡಿಸುತ್ತಿದ್ದಾರೆಂದು ಹೇಳಿ ಆಕೆಯ ಫೋನ್ ನಂಬರ್‌ನ್ನು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಏಜೆಂಟ್‌ಗಳ ಮೂಲಕ ಗರ್ಭಿಣಿಯರನ್ನು ಕರೆತಂದು ಗರ್ಭಪಾತ ಮಾಡಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾದ ಡಿ-ಕಾಯ್ ಆಪರೇಷನ್‌ನಲ್ಲಿ ಮಹಿಳೆಯೊಬ್ಬರು ಸಿಕ್ಕಿಬಿದ್ದು, ಚಿಂತಾಮಣಿ ಮೂಲದ ವೈದ್ಯ ಸೇರಿದಂತೆ ಮೂವರ ವಿರುದ್ಧ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಳವಳ್ಳಿ ತಾಲೂಕು ಕಿರುಗಾವಲು ಗ್ರಾಮದ ಜಯಲಕ್ಷ್ಮೀ (೫೪) ಬಂಧನಕ್ಕೊಳಗಾದ ಮಹಿಳೆ. ಚಿಂತಾಮಣಿಯ ಸುಮಾ ನರ್ಸಿಂಗ್ ಹೋಂ ವೈದ್ಯ ಡಾ.ಎಂ.ವಿ.ಮುನಿವೆಂಕಟರೆಡ್ಡಿ, ಸಹಾಯಕಿ ನೇತ್ರ ವಿರುದ್ಧ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?:

ಜು.೨೯ರಂದು ಮಧ್ಯಾಹ್ನ ೧೨.೧೫ಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ ಅವರಿಗೆ ಅನಾಮಿಕ ವ್ಯಕ್ತಿಯೊಬ್ಬರು ಕರೆ ಮಾಡಿ ಮಹಿಳೆಯೊಬ್ಬರು ಈಗಾಗಲೇ ಹೆಣ್ಣು ಮಕ್ಕಳನ್ನು ಹೊಂದಿರುವ ಗರ್ಭಿಣಿಯರನ್ನು ಬೇರೆಡೆ ಕರೆದುಕೊಂಡು ಹೋಗಿ ಸ್ಕ್ಯಾನಿಂಗ್ ಮಾಡಿಸಿ ಲಿಂಗ ಪತ್ತೆಹಚ್ಚಿ ಹೆಣ್ಣು ಮಗುವಾಗಿದ್ದರೆ ಗರ್ಭಪಾತ ಮಾಡಿಸುತ್ತಿದ್ದಾರೆಂದು ಹೇಳಿ ಆಕೆಯ ಫೋನ್ ನಂಬರ್‌ನ್ನು ನೀಡಿದ್ದಾರೆ.

ತಕ್ಷಣವೇ ಡೆಕಾಯ್ ಆಪರೇಷನ್‌ಗೆ ಸಿದ್ಧಪಡಿಸಿದ ಡಿಎಚ್‌ಒ ಡಾ.ಜಿ.ಸಿ.ಬೆಟ್ಟಸ್ವಾಮಿ ಒಬ್ಬ ಗರ್ಭಿಣಿ ಮಹಿಳೆಯನ್ನು ಸಮಾಲೋಚನೆ ಮೂಲಕ ಮನವೊಲಿಸಿ ಕಾರ್ಯಾಚರಣೆಗೆ ಸಿದ್ಧಪಡಿಸಿದರು. ಅನಾಮಧೇಯ ನೀಡಿದ ಮಹಿಳೆಯ ಮೊಬೈಲ್‌ ನಂಬರ್ ಕಿರುಗಾವಲು ಗ್ರಾಮದ ಜಯಲಕ್ಷ್ಮೀ ಅವರದ್ದಾಗಿತ್ತು. ಗರ್ಭಿಣಿ ಮಹಿಳೆಯಿಂದ ಜಯಲಕ್ಷ್ಮೀಯನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಬರುವಂತೆ ತಿಳಿಸಿದಳು. ಅದರಂತೆ ಮಾರುತಿ ಸುಜುಕಿ ವಾಹನ (ಕೆ.ಎ.೪೪ ಎಂ.೩೭೬೪)ದಲ್ಲಿ ಅಲ್ಲಿಗೆ ಹೋಗಿ ಕರೆ ಮಾಡಿದಾಗ ಜಯಲಕ್ಷ್ಮೀ ಬಂದು ಗರ್ಭಿಣಿ ಇದ್ದ ವಾಹನದಲ್ಲೇ ಕುಳಿತು ಚಿಂತಾಮಣಿ ಕಡೆಗೆ ಹೋಗುವಂತೆ ತಿಳಿಸಿದಳು.

ಚಿಂತಾಮಣಿಗೆ ಬಂದ ವೇಳೆ ಕೆ.ಆರ್.ಬಡಾವಣೆಯಲ್ಲಿ ವಾಹನವನ್ನು ನಿಲ್ಲಿಸಿ ಎಲ್ಲರನ್ನೂ ಕೆಳಗಿಳಿಸಿ ಮೊದಲೇ ಅಲ್ಲಿ ಕಾಯುತ್ತಿದ್ದ ಮತ್ತೋರ್ವ ಗರ್ಭಿಣಿ ಮಹಿಳೆಯನ್ನು ಸುಮಾ ನರ್ಸಿಂಗ್ ಹೋಂಗೆ ಕರೆದುಕೊಂಡು ಹೋದರು. ಈ ಡೆಕಾಯ್ ಆಪರೇಷನ್‌ನ ಸುಳಿವು ತಿಳಿದ ನರ್ಸಿಂಗ್‌ ಹೋಂನವರು ತಪಾಸಣೆಗೆ ಬಂದ ಗರ್ಭಿಣಿಯರನ್ನು ವಾಪಸ್ ಕಳುಹಿಸಿದ್ದರು.

ನಂತರದಲ್ಲಿ ಜಯಲಕ್ಷ್ಮೀಯನ್ನು ವಶಕ್ಕೆ ಪಡೆದ ವಿಚಾರಣೆಗೊಳಪಡಿಸಿದಾಗ ಗರ್ಭಿಣಿ ಮಹಿಳೆಯನ್ನು ಸ್ಕ್ಯಾನಿಂಗ್ ಮಾಡಿಕೊಡಲು ಕರೆದುಕೊಂಡು ಹೋಗುವುದಾಗಿ ಒಪ್ಪಿಕೊಂಡು ₹೩೫ ಸಾವಿರ ತೆಗೆದುಕೊಂಡು ಬರಲು ತಿಳಿಸಿದ್ದಾಗಿ ಒಪ್ಪಿಕೊಂಡಳು. ಜೊತೆಗೆ ಸುಮಾ ನರ್ಸಿಂಗ್ ಹೋಂ ವೈದ್ಯರಾದ ಡಾ.ಎಂ.ವಿ.ಮುನಿವೆಂಕಟರೆಡ್ಡಿ ಹಾಗೂ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುವ ನೇತ್ರಾ ಅವರು ಗರ್ಭಿಣಿಯರ ಜೊತೆ ಫೋನ್ ಮುಖಾಂತರ ನಿರಂತರ ಸಂಪರ್ಕದಲ್ಲಿರುವುದು ಕಂಡುಬಂದಿದೆ.

ಅಲ್ಲದೇ, ಏಜೆಂಟ್ ಜಯಲಕ್ಷ್ಮೀ ಬ್ಯಾಗ್‌ನಲ್ಲಿ ಎಂಟಿಪಿಗಾಗಿ ನೀಡುವ ಮಾತ್ರೆಗಳು ಪತ್ತೆಯಾಗಿವೆ. ಮಹಿಳೆಯರಿಗೆ ಭ್ರೂಣಲಿಂಗ ಪತ್ತೆ ಹಾಗೂ ಭ್ರೂಣವು ಹೆಣ್ಣು ಎಂದು ಗುರುತಿಸಿದ್ದಲ್ಲಿ ಗರ್ಭಪಾತದ ಮೂಲಕ ಭ್ರೂಣಹತ್ಯೆ ಮಾಡಿಸಿ ಹಣ ಪಡೆದಿರುವ ಕಾರ್ಯದಲ್ಲಿ ಜಯಲಕ್ಷ್ಮೀ ಸೇರಿದಂತೆ ಸುಮಾ ನರ್ಸಿಂಗ್ ಹೋಂ ವೈದ್ಯ ಡಾ.ಎಂ.ವಿ.ಮುನಿವೆಂಕಟರೆಡ್ಡಿ ಹಾಗೂ ನೇತ್ರಾ ತೊಡಗಿರುವುದು ಹಾಗೂ ಬೇರೆ ಗರ್ಭಿಣಿ ಮಹಿಳೆಯರ ಗರ್ಭದ ಭ್ರೂಣಲಿಂಗ ಪತ್ತೆ ಮಾಡಿ ಗರ್ಭಪಾತ ಮಾಡಿಸಿರುವ ಸಾಧ್ಯತೆಗಳಿರುವುದು ಈ ಕಾರ್ಯಾಚರಣೆಯಿಂದ ತಿಳಿದುಬಂದಿರುವುದಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಚಂದ್ರಶೇಖರ ರೆಡ್ಡಿ ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಚಿಂತಾಮಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪುಟ್ಟಸಿದ್ದಮ್ಮ, ಬಿಎಚ್‌ಇಒ ಮಂಗಳ, ಫಾರ್ಮಾಸಿ ಅಧಿಕಾರಿ ನಿಶ್ಚಿತಾ, ಹಿರಿಯ ಪುರುಷ ಆರೋಗ್ಯ ನಿರೀಕ್ಷಣಾಧಿಕಾರಿ ಕೇಶವ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮೀಕ್ಷೆ ನಂತರ ಬೆಳೆಹಾನಿ ಪರಿಹಾರ ಮೊತ್ತ ನಿರ್ಧಾರ: ಸಚಿವ ಲಾಡ್‌
ಬರ ನಿರ್ವಹಣೆಗೆ ಸಿದ್ಧರಾಗಿ: ಸಚಿವ ಸಂತೋಷ ಲಾಡ್‌