ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಬುಧವಾರ ದಲಿತ ಮಹಿಳೆ ಬೇಬಿ ಎಂಬವರು ನಾಯಿಗೆ ಆಹಾರ ಹಾಕಿದರು ಎಂಬ ಕಾರಣಕ್ಕೆ ಚಂದ್ರಕಾಂತ್ ಭಟ್ ಎನ್ನುವವರು ಮಾರಾಣಾಂತಿಕ ಹಲ್ಲೆ ನಡೆಸಿದ್ದನ್ನು ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದೆ.ಬೇಬಿ ಅವರು ಪ್ರತಿದಿನ ಬೀದಿ ನಾಯಿಗಳಿಗೆ ಅನ್ನಹಾಕಿ ಪ್ರೀತಿ ತೋರಿಸುತ್ತಿದ್ದರು. ಇದನ್ನು ಆಕ್ಷೇಪಿಸಿ ಚಂದ್ರಕಾಂತ ಭಟ್ ಎನ್ನುವವರು ರೀಪಿನಿಂದ ತಲೆಗೆ ಹೊಡೆದು ತೀವ್ರತರ ಗಾಯ ಮಾಡಿದ್ದು, ಬೇಬಿ ಅವರು ಅಜ್ಜರಕಾಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ನೇತೃತ್ವದಲ್ಲಿ ನಿಯೋಗವು ಆಸ್ಪತ್ರೆಗೆ ಭೇಟಿ ನೀಡಿ, ಸಂತ್ರಸ್ತೆ ಬೇಬಿ ಅವರಿಂದ ಮಾಹಿತಿ ಪಡೆಯಿತು.ಇತ್ತೀಚೆಗೆ ಉಡುಪಿಯ ಪೊಲೀಸ್ ವ್ಯವಸ್ಥೆ ತೀರಾ ಹದಗೆಟ್ಟಿದ್ದು, ದಲಿತರಿಗೆ ರಕ್ಷಣೆಯೇ ಇಲ್ಲವಾಗಿದೆ. ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗೆ ಯಾವ ಕಾರಣಕ್ಕೂ ಜಾಮೀನು ಸಿಗಬಾರದು, ಸರಿಯಾದ ಶಿಕ್ಷೆ ಆಗಬೇಕೆಂದು ದ.ಸಂ.ಸ. ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದೆ.ಕೊಲೆಗೆ ಪ್ರಯತ್ನಿಸಿದ ಆರೋಪಿಗೆ ಸಣ್ಣಪುಟ್ಟ ಕೇಸುಗಳನ್ನು ಹಾಕಿ ಆತನಿಗೆ ಜಾಮೀನು ಸಿಗುವಂತೆ ಪ್ರಯತ್ನಿಸಿದರೆ ದ.ಸಂ.ಸ. ದೊಡ್ಡ ಪ್ರತಿಭಟನೆಗೆ ಕರೆಕೊಡಬೇಕಾಗಬಹುದು ಎಂದು ದ.ಸಂ.ಸ. ಎಚ್ಚರಿಕೆ ನೀಡಿದೆ.ನಿಯೋಗದಲ್ಲಿ ದಸಂಸ ಪದಾಧಿಕಾರಿಗಳಾದ ಮಂಜುನಾಥ ಗಿಳಿಯಾರು, ಶ್ಯಾಮರಾಜ್ ಬಿರ್ತಿ, ವಾಸುದೇವ ಮುದೂರು, ಭಾಸ್ಕರ್ ಮಾಸ್ತರ್, ಪರಮೇಶ್ವರ ಉಪ್ಪೂರು, ಶ್ಯಾಮಸುಂದರ್ ತೆಕ್ಕಟ್ಟೆ, ಶ್ರಿಪತಿ ಕುಂಜಿಬೆಟ್ಟು, ಶ್ರೀಧರ್, ರಾಜು ಬೆಟ್ಟಿನಮನೆ, ಮಂಜುನಾಥ್ ಬಾಳ್ಕದ್ರು, ಉಡುಪಿ ನಗರ ಸಭಾ ಸದಸ್ಯ ರಾಜು ಮುಂತಾದವರಿದ್ದರು.