ಹುಣಸಗಿಯ ಕಚಕನೂರು ಗ್ರಾಮದ ವಿಜಯಲಕ್ಷ್ಮಿ ಸಾವು ಪ್ರಕರಣ ಪೊಲೀಸ್ ಠಾಣೆಯದುರು ಶವವಿಟ್ಟು ಪ್ರತಿಭಟನೆ ನಡೆಸಿದ ಸಂಬಂಧಿಕರು ಕನ್ನಡಪ್ರಭ ವಾರ್ತೆ ಹುಣಸಗಿ ನೆರೆಯವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳದಿಂದ ಬೇಸತ್ತು, ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪಿಗಳನ್ನು ಬಂಧಿಸುವಂತೆ ಮೃತಳ ಸಂಬಂಧಿಕರು ಒತ್ತಾಯಿಸಿ, ಪೊಲೀಸ್ ಠಾಣೆಯದುರು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಹುಣಸಗಿಯಲ್ಲಿ ನಡೆದಿದೆ. ತಾಲೂಕಿನ ಕಚಕನೂರ ಗ್ರಾಮದ ವಿಜಯಲಕ್ಷ್ಮೀ ಮೃತಳು. ಮನೆಯೆದುರು ನೀರು ಬಿಟ್ಟ ವಿಚಾರಕ್ಕೆ ನೆರೆಯವರ ಮಧ್ಯೆ ಜಗಳ ಆಗಿದೆ. ಅ.21 ರಂದು ಮಹಿಳೆ ವಿಜಯಲಕ್ಷ್ಮೀ ವಿಷ ಸೇವಿಸಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅ.28 ರಂದು ಮೃತಪಟ್ಟಿದ್ದಾಳೆ ಎಂದು ಪತಿ ಸಾಹೇಬಗೌಡ ಸಾಸನೂರ ಹುಣಸಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿತರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಮೃತ ಮಹಿಳೆ ಕುಟುಂಬಸ್ಥರು ಪಟ್ಟಣದ ಪೋಲಿಸ್ ಠಾಣೆಯಲ್ಲಿ ಮೃತ ಮಹಿಳೆ ಶವವಿಟ್ಟು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಡಿವೈಎಸ್ಪಿ ಜಾವೀದ್ ಇನಾಮದಾರ ಭೇಟಿ ನೀಡಿ ಕಾನೂನಿನ ಸೂಕ್ತ ಕ್ರಮದ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು. ಕಚಕನೂರ ಗ್ರಾಮದ ಇಂದ್ರಮ್ಮ ದೊಡ್ಡಮನಿ, ಹಣಮಂತರಾಯ ದೊಡ್ಡಮನಿ, ಪುಷ್ಪಾ ಕುಂಟೋಜಿ, ಶಶಿಕಲಾ ಕಚಕನೂರು ಅವರನ್ನು ಬಂಧಿಸುವಂತೆ ಕುಟುಂಸ್ಥರು ಪಟ್ಟು ಹಿಡಿದಿದ್ದರು. ಕಾನೂನು ಭರವಸೆ ಹಿನ್ನೆಲೆ ಪ್ರತಿಭಟನೆ ಹಿಂಪಡೆದು ಮೃತ ಮಹಿಳೆ ಅಂತ್ಯಕ್ರಿಯೆಗೆ ಕುಟುಂಬಸ್ಥರು ಮುಂದಾದರು. ಈ ಸಂದರ್ಭದಲ್ಲಿ ಹುಣಸಗಿ ಪಿಎಸ್‌ಐ ಚಂದ್ರಶೇಖರ ನಾರಾಯಣಪುರ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು. -- 29ವೈಡಿಆರ್17: ಹುಣಸಗಿ ತಾಲೂಕಿನ ಕಚಕನೂರ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡ ಹಿನ್ನೆಲೆ ಹುಣಸಗಿ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೃತ ಶವವಿಟ್ಟು ಪ್ರತಿಭಟನೆ ನಡೆಸಿದ ಕುಟುಂಬಸ್ಥರು.