ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟ ವೃದ್ಧೆಯ ಪ್ರಕರಣಕ್ಕೆ ಸಂಬಂಧಿಸಿದಂತೆ 110 ಬೀದಿ ನಾಯಿ ಹಿಡಿದು ಪರಿಶೀಲಿಸಿದರೂ ದಾಳಿ ಮಾಡಿದ ನಿರ್ದಿಷ್ಟ ನಾಯಿ ಈ ವೆರೆಗೂ ಪತ್ತೆಯಾಗಿಲ್ಲ.ಆಗಸ್ಟ್ ಕೊನೆಯ ವಾರ ನಗರದ ಜಾಲಹಳ್ಳಿಯ ಏರ್‌ಫೋರ್ಸ್ ಕ್ಯಾಂಪಸ್‌ನ ಮೈದಾನದಲ್ಲಿ ವಾಕಿಂಗ್ ಮಾಡುವ ವೇಳೆ ರಾಜ್ ದುಲಾರಿ ಸಿನ್ಹಾ (76) ಎಂಬ ವೃದ್ಧೆಯ ಮೇಲೆ ಸುಮಾರು 8 ರಿಂದ 10 ಬೀದಿ ನಾಯಿಗಳು ಹಿಂಡು ದಾಳಿ ನಡೆಸಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಮೃತಪಟ್ಟಿದ್ದರು.
ಈ ಸಂಬಂಧ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೇ ವೇಳೆ ಬಿಬಿಎಂಪಿಯ ಪಶುಪಾಲನೆ ವಿಭಾಗ ದಾಳಿ ನಡೆಸಲಾದ ಬೀದಿ ನಾಯಿಗಳನ್ನು ಪತ್ತೆ ಹಚ್ಚಲು ಈವರೆಗೆ ಒಟ್ಟು110 ಬೀದಿ ನಾಯಿಗಳು ಹಿಡಿದು ನಿಗಾ ಘಟಕದಲ್ಲಿ ಇರಿಸಿತ್ತು.ವೃದ್ಧೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ನಾಯಿ ದಾಳಿಯಿಂದ ಮೃತಪಟ್ಟಿದ್ದಾರೆ ಎಂದಷ್ಟೇ ಉಲ್ಲೇಖಿಸಲಾಗಿದೆ. ಯಾವ ನಾಯಿ ಎಂಬುದನ್ನು ಪತ್ತೆ ಮಾಡಿಲ್ಲ. ಇನ್ನು ಘಟನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಾಕ್ಷಿಗಳೂ ಸಹ ದಾಳಿ ನಡೆಸಿದ ನಾಯಿಗಳನ್ನು ಗುರುತಿಸಲು ವಿಫಲಗೊಂಡಿದ್ದಾರೆ. ಹೀಗಾಗಿ, ಆ ಪ್ರದೇಶದಲ್ಲಿ ಹಿಡಿದು ತಂದ ಎಲ್ಲ ಬೀದಿ ನಾಯಿಗಳನ್ನು ತಲಾ 10 ದಿನ ನಿಗಾ ಘಟಕದಲ್ಲಿ ಉಳಿಸಿ ರೇಬಿಸಿ ಲಸಿಕೆ, ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿ ತದನಂತರ ಆ ನಾಯಿಗಳ ಸ್ವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಬಿಡಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಾಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
ಬೀದಿ ನಾಯಿಗಳ ವರ್ತನೆ ಬಗ್ಗೆ ಜಾಗೃತಿ ಅಭಿಯಾನಇತ್ತೀಚೆಗೆ ನಗದಲ್ಲಿ ದಿನಗಳಲ್ಲಿ ಬೀದಿ ನಾಯಿಗಳ ದಾಳಿ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯ ಪಶುಪಾಲನೆ ವಿಭಾಗ ಬೀದಿ ನಾಯಿಗಳ ವರ್ತನೆ ಹಾಗೂ ನಗರ ಪ್ರಾಣಿ ಮತ್ತು ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಈ ತಿಂಗಳ ಮೂರನೇ ವಾರ ವಿಶೇಷ ಅಭಿಯಾನ ನಡೆಸಲು ತೀರ್ಮಾನಿಸಿದೆ. ನಗರದ ಮಾಲ್, ರೈಲ್ವೆ ಮತ್ತು ಬಸ್ ನಿಲ್ದಾಣ, ಶಾಲಾ-ಕಾಲೇಜು, ಮಾರುಕಟ್ಟೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಪಶುಪಾಲನೆ ವಿಭಾಗ ವಲಯ ಸಹಾಯಕ ನಿರ್ದೇಶಕರು ನೇತೃತ್ವದಲ್ಲಿ ಆಯಾ ವಲಯದ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ವಿಚಾರ ಸಂಕಿರಣ, ಬೀದಿ ನಾಟಕ, ಕಾರ್ಯಾಗಾರ ಸೇರಿದಂತೆ ವಿವಿಧ ಮಾದರಿಯಲ್ಲಿ ಜಾಗೃತಿ ಮೂಡಲಾಗುತ್ತದೆ. ಬೀದಿ ನಾಯಿಗಳ ವರ್ತನೆ ಯಾವ ವೇಳೆ ಯಾವ ರೀತಿ ಇರಲಿದೆ. ಏನೆಲ್ಲಾ ಕ್ರಮಗಳಿಂದ ಬೀದಿ ನಾಯಿಗಳ ದಾಳಿ ಕಡಿಮೆ ಮಾಡಬಹುದು ಎಂಬ ಕುರಿತು ಮಾಹಿತಿ ನೀಡಲಾಗುತ್ತಿದೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಡೆಂಘೀ ವಾರಿಯಸ್ ಮಾದರಿಯಲ್ಲಿ ಸ್ಪರ್ಧೆ ಆಯೋಜಿಸಿ ಬೀದಿ ನಾಯಿಗಳ ವರ್ತನೆ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಸುರಾಳ್ಕರ್ ವಿಕಾಸ್ ಕಿಶೋರ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಡೆಂಘೀ ವಾರಿಯಸ್ ಜಾಗೃತಿಗೆ 12 ಪ್ರಶಸ್ತಿಕಳೆದ ಜುಲೈನಲ್ಲಿ ನಗರದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಳಗೊಂಡಾಗ, ಸಾಮಾಜಿಕ ಜಾಲತಾಣದಲ್ಲಿ ಡೆಂಘೀ ಕುರಿತ ಜಾಗೃತಿ ಮೂಡಿಸಲು ಡೆಂಘೀ ವಾರಿಯರ್ಸ್ ಎಂಬ ಅಭಿಯಾನವನ್ನು ಬಿಬಿಎಂಪಿ ಆರಂಭಿಸಿತ್ತು. ಸುಮಾರು 250 ಮಂದಿ ಡೆಂಘೀ ಕುರಿತ ಜಾಗೃತಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಜಾಗೃತಿ ರೀಲ್ಸ್ ಗಳನ್ನು 35 ಲಕ್ಷಕ್ಕಿಂತ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಅತಿ ಹೆಚ್ಚು ಲೈಕ್ ಪಡೆದ ಮೊದಲ 10 ಮಂದಿಗೆ ಉಡುಗೊರೆ ನೀಡಲಾಗುತ್ತಿದೆ. ಈ ಅಭಿಯಾನದಲ್ಲಿ ಹೆಚ್ಚು ಮಕ್ಕಳು ಭಾಗಿಯಾದ ಶಾಲೆಗೆ ಹಾಗೂ ತರಗತಿಗೆ ಪ್ರತ್ಯೇಕವಾಗಿ ಎರಡು ಪಶಸ್ತಿ ನೀಡಲಾಗುತ್ತಿದೆ. ಸೆ.17 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸುರಾಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.