ಪತಿ ವಿರುದ್ಧವೇ 9 ಕೇಸ್‌ ದಾಖಲಿಸಿದ ಮಹಿಳೆ!

KannadaprabhaNewsNetwork |  
Published : Jul 16, 2026, 02:15 AM IST
ಹೈಕೋರ್ಟ್ | Kannada Prabha

ಸಾರಾಂಶ

ಇಂಗ್ಲೆಂಡ್‌ನಿಂದ ಬಹಳ ಸಮಯದ ನಂತರ ಮನೆಗೆ ಬಂದ ಪತಿಯ ವಿರುದ್ಧ ಅತಿಕ್ರಮ ಪ್ರವೇಶ ಆರೋಪದ ಮೇಲೆ ಪತ್ನಿ ದಾಖಲಿಸಿದ ಪ್ರಕರಣಕ್ಕೆ (9ನೇ ಪ್ರಕರಣ) ಸಂಬಂಧಿಸಿದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇಂಗ್ಲೆಂಡ್‌ನಿಂದ ಬಹಳ ಸಮಯದ ನಂತರ ಮನೆಗೆ ಬಂದ ಪತಿಯ ವಿರುದ್ಧ ಅತಿಕ್ರಮ ಪ್ರವೇಶ ಆರೋಪದ ಮೇಲೆ ಪತ್ನಿ ದಾಖಲಿಸಿದ ಪ್ರಕರಣಕ್ಕೆ (9ನೇ ಪ್ರಕರಣ) ಸಂಬಂಧಿಸಿದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಮನೆಯ ಅತಿಕ್ರಮ ಪ್ರವೇಶ ಆರೋಪದ ಮೇಲೆ ತಮ್ಮ ವಿರುದ್ಧ ಪತ್ನಿ ಸುಮಿತ್ರಾ ಸೇಪುರಿ ಅವರು ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಕುಂದಲಹಳ್ಳಿ ನಿವಾಸಿ ಎ.ಎಲ್. ಸತ್ಯನಾರಾಯಣ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಮಧ್ಯಂತರ ಆದೇಶ ಮಾಡಿದೆ.

ಪ್ರಕರಣದಲ್ಲಿ ಅರ್ಜಿದಾರರು ಎರಡನೇ ಪ್ರತಿವಾದಿ‌ ಮಹಿಳೆಯ ಪತಿಯಾಗಿದ್ದಾರೆ. ಪತಿ ತುಂಬಾ ಸಮಯದ ನಂತರ ಇಂಗ್ಲೆಂಡ್‌ನಿಂದ ಮರಳಿದ್ದಾರೆ.‌ ಅದಕ್ಕೂ ಮುಂಚೆ ಪತ್ನಿಯು ಪತಿಯ ವಿರುದ್ಧ ಎಂಟು ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಗೊತ್ತಿರುವ ಪ್ರತಿಯೊಂದು ಕಾನೂನಿನ‌ ಎಲ್ಲ ನಿಬಂಧನೆಗಳನ್ನು ಬಳಸಿ ಕೇಸು ಹಾಕಲಾಗಿದೆ. ಮನೆಯನ್ನು ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ‌ ಈ ಒಂಬತ್ತನೇ ಕೇಸ್ ದಾಖಲಿಸಲಾಗಿದೆ.

ಪತಿಯ ಹೆಸರಿನಲ್ಲಿಯೇ ಮನೆ ಇದೆ ಎಂದು ಆತನ ಪರ ವಕೀಲರು ವಾದಿಸಿದ್ದಾರೆ.‌ ಪತ್ನಿ ಮತ್ತು ಪತಿಯ ಜಂಟಿ ಹೆಸರಿನಲ್ಲಿದೆ ಎಂದು ಪತ್ನಿ ಪರ ವಕೀಲರು ಹೇಳುತ್ತಿದ್ದಾರೆ. ಆದಾಗ್ಯೂ ಮನೆಯ ಮೇಲೆ‌ ಪತಿಗೆ ಹಕ್ಕು ಇದ್ದೇ ಇರುತ್ತದೆ. ತನ್ನ ಮನೆಯೊಳಗೆ ತಾನು ಹೋದ ಕಾರಣಕ್ಕೆ ಪತಿಯ ಮೇಲೆ ಅತಿಕ್ರಮ ಪ್ರವೇಶ ಕೇಸ್ ಹಾಕಲಾಗದು. ಆದ್ದರಿಂದ‌ ಅರ್ಜಿದಾರ‌ ಪತಿಯ ಮೇಲೆ‌ ಪತ್ನಿ ದಾಖಲಿಸಿರುವ ಅತಿಕ್ರಮ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಅರ್ಜಿ ವಿಲೇವಾರಿಯಾಗುವವರೆಗೆ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ‌‌.

ಬದುಕು ಜಟಕಾಬಂಡಿ..:

ಅರ್ಜಿದಾರರ ಪರ ವಕೀಲರು ಹಾಜರಾಗಿ, ಅರ್ಜಿದಾರರು ಸ್ವಯಾರ್ಜಿತವಾಗಿ ಸಂಪಾದಿಸಿದ ಮನೆಗೆ ಹೋದರೆ, ಅತಿಕ್ರಮ ಪ್ರವೇಶ ಆರೋಪದ ಮೇಲೆ ಹೆಂಡತಿ ಆತನ ಮೇಲೆ‌ ದೂರು ದಾಖಲಿಸಿದ್ದಾರೆ. ಅರ್ಜಿದಾರರ ಹೆಸರಿನಲ್ಲಿರುವ ಮನೆಯ ಸೇಲ್ ಡೀಡ್ ಸಹ ನ್ಯಾಯಾಲಯಕ್ಕೆ‌ ಸಲ್ಲಿಸಲಾಗಿದೆ. ಪತ್ನಿ ಅರ್ಜಿದಾರರನ ಮೇಲೆ 10 ಕೇಸ್ ಹಾಕಿದ್ದಾರೆ‌. ಐಪಿಸಿ ಸೆಕ್ಷನ್ 498A ಆರೋಪದ ಮೇಲಿನ ಎಫ್ಐಆರ್ ಇಟ್ಟುಕೊಂಡು ಹೋಗಿ ಎಲ್ಲಾ ಕಡೆ ಆಕ್ಷೇಪ ಮಾಡುತ್ತಾರೆ. ಅರ್ಜಿದಾರ ಪತಿ‌ ಕೌಟುಂಬಿಕ ಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್‌, ಸೆಷನ್ಸ್ ಕೋರ್ಟ್‌ ಮತ್ತು ಹೈಕೋರ್ಟ್‌ಗೆ ತಲಾ ಎರಡು ದಿನ ಹೋಗಬೇಕಾಗುತ್ತಿದೆ. ಪತ್ನಿ ಕಾನೂನು ದುರುಪಯೋಗ ಮಾಡುತ್ತಾ ಗಂಡನಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ಅವರನ್ನು ನೀವೇ ಕಾಪಾಡಬೇಕು. ಅರ್ಜಿದಾರರ ಪರಿಸ್ಥಿತಿಯು ‘ಬದುಕು ಜಟಕಾಬಂಡಿ; ವಿಧಿಯದರ ಸಾಹೇಬ’ ಎಂಬಂತಾಗಿದೆ ಎಂದು ನ್ಯಾಯಪೀಠದ ಮುಂದೆ ಅಳಲು ತೋಡಿಕೊಂಡರು.

25 ವರ್ಷ ಕಷ್ಟ ಪಟ್ಟು ಓದಿ, ಕೆಲಸ ಮಾಡಿ ಎರಡು ಕೋಟಿ ರು‌. ಕೊಟ್ಟು ಮೂರು ಬಿಎಚ್‌ಕೆ ಮನೆಯನ್ನು ತೆಗೆದುಕೊಂಡಿದ್ದಾರೆ. ಮದುವೆಯಾಗಿ 16 ವರ್ಷ ಆಗಿದೆ. 14 ವರ್ಷದ ಮಗನಿದ್ದಾನೆ.‌ ಅರ್ಜಿದಾರನಿಗೆ ತನ್ನ ಮಗನನ್ನು ನೋಡಲು ಆಗುತ್ತಿಲ್ಲ. ಪತಿಯ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹೈಕೋರ್ಟೇ ರದ್ದುಪಡಿಸಬೇಕು.‌ ಏಕೆಂದರೆ ಪ್ರಕರಣದಲ್ಲಿ ಅಪರಾಧದ ಅಂಶಗಳೇ ಇಲ್ಲ ಎಂದು ಅರ್ಜಿದಾರ ಪರ ವಕೀಲರು ಮನವಿ ಮಾಡಿದರು.

ಪತ್ನಿ ಪರ ವಕೀಲರು, 2021ರಲ್ಲಿ ಇಂಗ್ಲೆಂಡ್‌ಗೆ ತೆರಳಲು ಪತಿ ಮತ್ತು ಪತ್ನಿ ಪರಸ್ಪರ ಒಪ್ಪಂದ‌ ಮೇರೆಗೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಗಂಡನಿಗೆ ವಿಚ್ಛೇದನ ನೀಡಿ ಇಂಗ್ಲೆಂಡಿಗೆ ಹೋಗಬೇಕು ಎಂಬ ಬಯಕೆ. ಅದಕ್ಕಾಗಿ ಪತಿಯು ಪತ್ನಿ ವಿರುದ್ಧ ವಂಚನೆ ಕೇಸು ದಾಖಲಿಸಿದ್ದರು‌. ಈಗ ಪತಿಯು ಪತ್ನಿಯ ಮನೆಗೆ ಪೆನ್ ಕ್ಯಾಮರಾದೊಂದಿಗೆ ಮನೆಗೆ ಬಂದಿದ್ದಾರೆ‌ ಎಂದು ತಿಳಿಸಿದರು.

ಅರ್ಜಿದಾರ ಪರ ವಕೀಲರು, ಸ್ವಾಮಿ ಅದು ಅರ್ಜಿದಾರರ ಮನೆ. ಅವರಿಗೆ ಸೇರಿದ ವಸ್ತುಗಳನ್ನು ತರಲು ಮನೆಗೆ ಹೋಗಿದ್ದರು ಎಂದು ವಾದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಯನ ನಿಲ್ಲಿಸಿದ ದಕ್ಷಿಣದ ಕೋಗಿಲೆ: ಕೆ.ಟಿ.ಹನುಮಂತು
ಸಾರಂಗಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಜೆಡಿಎಸ್ ಬೆಂಬಲಿತ 9 ಮಂದಿ ಆಯ್ಕೆ