ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಗೋಡೆ ಕುಸಿದು ಕಾರ್ಮಿಕ ಮಹಿಳೆ ಮೃತಪಟ್ಟಿರುವ ಘಟನೆ ಹಾನಗಲ್ಲು ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.ಕಲಬುರುಗಿ ಜಿಲ್ಲೆ, ಅಪ್ಜಲ್ಪುರದ ರವಿ ಎಂಬವರ ಪತ್ನಿ ಸುಷ್ಮಾ(35) ಮೃತಪಟ್ಟಿದ್ದಾರೆ. ನಗರಳ್ಳಿ ಸಚಿನ್ ಎಂಬವರ ಮನೆಯಲ್ಲಿ 2 ವರ್ಷದಿಂದ ಬಾಡಿಗೆಗೆ ಇದ್ದ ಕುಟುಂಬ ಕೂಲಿ ಕೆಲಸ ಮಾಡಿಕೊಂಡಿದ್ದರು. ಮೃತರ ಪತಿ, ಮೂವರು ಮಕ್ಕಳು ಹಾಗು ಸಹೋದರ ವಾಸವಾಗಿದ್ದರು. ಶನಿವಾರ ಬೆಳಗ್ಗಿನ ಜಾವ 5.30ರ ಸುಮಾರಿಗೆ ಗೋಡೆ ಕುಸಿದು ಮಲಗಿದ್ದ ಮಹಿಳೆಯ ತಲೆ ಮೇಲೆ ಇಟ್ಟಿಗೆ ಹಾಗು ಹೆಂಚು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಯಲ್ಲೆ ಮಲಗಿದ್ದ ಮೂವರು ಮಕ್ಕಳು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಇನ್ನೊಂದು ರೂಮಿನಲ್ಲಿ ಮಲಗಿದ್ದ ಸಹೋದರ ಅಕ್ಷಯ್ ಅವಶೇಷದಡಿ ಸಿಲುಕಿದ್ದ ಸಂದರ್ಭ ಸ್ಥಳೀಯರು ರಕ್ಷಿಸಿ, ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರ ಪತಿ ಅಪ್ಜಲ್ಪುರಕ್ಕೆ ತೆರಳಿದ್ದರು.
ನೊಂದ ಕುಟುಂಬಕ್ಕೆ ಪರಿಹಾರಕ್ಕೆ ಶಾಸಕ ಮಂತರ್ ಗೌಡ ಸೂಚನೆ:ನೊಂದ ಕುಟುಂಬಕ್ಕೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಕಂದಾಯ ಇಲಾಖೆಗೆ ಸೂಚಿಸಲಾಗಿದೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು. ಮೃತರಿಗೆ ಎನ್‌ಡಿಆರ್‌ಎಫ್‌ನಿಂದ 5 ಲಕ್ಷ ರು. ಗಳ ಪರಿಹಾರ ನೀಡಲು ಅವಕಾಶವಿದೆ. ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.
ಸ್ಥಳಕ್ಕೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಅಲ್ಲದೇ ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ತಹಸೀಲ್ದಾರ್ ಕೃಷ್ಣಮೂರ್ತಿ, ಹಾನಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶವಂತ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್, ಪಿಡಿಒ ಮೇದಪ್ಪ ಹಾಗು ಪಟ್ಟಣದ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.