ಹೂವಿನಹಡಗಲಿ: ಆಧಾರ್ ಕಾರ್ಡ್ ತಿದ್ದುಪಡಿಗಾಗಿ ನಿತ್ಯ ನೂರಾರು ಜನ ಸರದಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಇದೆ. ಊರಿಗೆ ಹೋದರೇ ಮತ್ತೆ ಬೆಳಗಿನ ಜಾವ ಬರಲು ಆಗದೇ ಮಕ್ಕಳು, ಮಹಿಳೆಯರು ಕಚೇರಿ ಮುಂದೆ ಮಲಗುವ ದೃಶ್ಯ ಸಾಮಾನ್ಯವಾಗಿದೆ.
ಆಧಾರ್ ಮಾಹಿತಿ ಪ್ರತಿಯೊಂದು ಯೋಜನೆಗಳಿಗೆ ತೀರಾ ಅಗತ್ಯ ದಾಖಲೆಯಾಗಿದೆ. ಈಗ ಪಡಿತರ ಚೀಟಿ ಇಕೆವೈಎಸಿ, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಯದ್ದೇ ದೂರವಾಣಿ ಸಂಖ್ಯೆ ಆಧಾರ್ ಕಾರ್ಡ್‌ಗೆ ಹೊಂದಾಣಿಕೆಯಾಗಿರಬೇಕು, ಶಾಲಾ ಮಕ್ಕಳಿಗೆ ಆಧಾರ್ ಕಾರ್ಡ್ ಹೀಗೆ ಹಲವಾರು ಕೆಲಸಕ್ಕೆ ಅಗತ್ಯವಿರುವ ಆಧಾರ್ ಕಾರ್ಡ್‌ಗೆ ಜನ ನಿತ್ಯ ಮುಗಿಬಿದ್ದಿದ್ದಾರೆ.
ತಾಲೂಕಿನ ಅಂಚೆ ಕಚೇರಿ, ಬಿಎಸ್‌ಎನ್‌ಎಲ್ ಕಚೇರಿ, ಕೆಲ ಬ್ಯಾಂಕ್‌ಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಅವರ ಕೆಲಸದ ಒತ್ತಡದಿಂದ ಬಂದ ಜನರನ್ನು ವಾಪಸ್ ಕಳಿಸುತ್ತಿದ್ದಾರೆ. ಇಡೀ ತಾಲೂಕು ಕೇಂದ್ರಕ್ಕೆ ಒಂದೇ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರವಿದೆ. ಅಲ್ಲಿ ಕೆಲಸ ಮಾಡುವ ವ್ಯಕ್ತಿ ದಿನಕ್ಕೆ 30 ರಿಂದ 40 ಜನರ ಆಧಾರ್ ತಿದ್ದುಪಡಿ ಮಾಡುತ್ತಾನೆ. ಉಳಿದವರು ಮತ್ತೆ ಊರಿಗೆ ವಾಪಸ್ ಹೋಗುವ ಸ್ಥಿತಿ ಇದೆ.ಅದಕ್ಕೆ ಊರಿಗೆ ಹೋದರೇ ಬೆಳಗಿನ ಜಾವದಲ್ಲೇ ಬಸ್ಸಿನ ಸೌಕರ್ಯ ಇಲ್ಲ, ಜತೆಗೆ ಬೈಕ್ ವ್ಯವಸ್ಥೆ ಇಲ್ಲದವರು, ಕಚೇರಿ ಮುಂದಿನ ಕಟ್ಟೆಯ ಮೇಲೆ ಮಕ್ಕಳು ಮಹಿಳೆಯರು ನೆಲದ ಮೇಲೆಯೇ ಮಲಗಿದ್ದರು.ಆಧಾರ್ ಕಾರ್ಡ್ ತಿದ್ದುಪಡಿ ಸಾಕಷ್ಟು ಬೇಡಿಕೆ ಇದೆ. ಜನರ ಒತ್ತಾಯವೂ ಸಾಕಷ್ಟಿದೆ. ಈ ಕುರಿತು ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗುವುದು ಎಂದು ಹೂವಿನಹಡಗಲಿ ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ತಿಳಿಸಿದ್ದಾರೆ.