ಮಹಿಳೆಯರು, ಮಕ್ಕಳಿಂದ ಹೊಳೆ ಗಂಗಾ ಪೂಜೆ

KannadaprabhaNewsNetwork |  
Published : Aug 19, 2026, 02:15 AM IST
ನಾಗರ ಪಂಚಮಿ ಅಂಗವಾಗಿ ವರದಾ ನದಿ ತೀರದಲ್ಲಿ ಸುಮಂಗಲೆಯರು ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಿ ಭಕ್ತಿಭಾವ ಮೆರೆದರು. | Kannada Prabha

ಸಾರಾಂಶ

ಜಿಲ್ಲಾದ್ಯಂತ ನಾಗರ ಪಂಚಮಿ ಹಬ್ಬದ ಮೂರನೇ ದಿನವಾದ ಸೋಮವಾರ ಮಹಿಳೆಯರು ಮತ್ತು ಮಕ್ಕಳು ಹೊಳಿಗಂಗಾ ಪೂಜೆ ನೆರವೇರಿಸಿ ಭಕ್ತಿಭಾವ ಮೆರೆದರು.

ಹಾವೇರಿ: ಜಿಲ್ಲಾದ್ಯಂತ ನಾಗರ ಪಂಚಮಿ ಹಬ್ಬದ ಮೂರನೇ ದಿನವಾದ ಸೋಮವಾರ ಮಹಿಳೆಯರು ಮತ್ತು ಮಕ್ಕಳು ಹೊಳಿಗಂಗಾ ಪೂಜೆ ನೆರವೇರಿಸಿ ಭಕ್ತಿಭಾವ ಮೆರೆದರು.

ಜಿಲ್ಲಾದ್ಯಂತ ಶನಿವಾರ ರೊಟ್ಟಿ ಪಂಚಮಿ, ಭಾನುವಾರ ನಾಗರ ಪಂಚಮಿ ಹಬ್ಬವನ್ನು ಆಚರಿಸಿದ್ದ ಜಿಲ್ಲೆಯ ಜನತೆ ಸೋಮವಾರ ಗಂಗಾ ಪೂಜೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ನೆರವೇರಿಸಿದರು. ಕೆಲವರು ಸೋಮವಾರ ನಾಗರ ಪಂಚಮಿ ಹಬ್ಬ ಆಚರಿಸಿ ನಾಗ ದೇವತೆಗೆ ಹಾಲೆರದು ಪೂಜೆ ಸಲ್ಲಿಸಿದರು.

ಹಬ್ಬದ ಅಂಗವಾಗಿ ನದಿ ಪಾತ್ರದ ಗ್ರಾಮಗಳ ಜನರು ವರದಾ, ತುಂಗಭದ್ರಾ, ಕುಮದ್ವತಿ ಹಾಗೂ ಧರ್ಮಾ ನದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಹಳ್ಳ-ಕೊಳ್ಳ, ಕೆರೆ, ತೆರೆದ ಬಾವಿ, ಮನೆಯ ಮುಂದಿನ ನಲ್ಲಿಗಳಲ್ಲಿ ಕುಂಭ ಇಟ್ಟು, ಹೂವು, ಹಣ್ಣು, ಅರಿಶಿಣ, ಕುಂಕುಮದಿಂದ ಪೂಜಿಸಿ, ಉಸುಳಿ, ಅರಳು, ಕೊಕ್ಕಾಬತ್ತಿ ಮಾಡಿ ನೈವೇದ್ಯ ಅರ್ಪಿಸುವ ಮೂಲಕ ಗಂಗಾಪೂಜೆ ನೆರವೇರಿಸಿದರು.

ಭೋಜನಕ್ಕೆ ಬೇಕಾದ ಕರಿಗಡುಬು, ಕರ್ಚಿಕಾಯಿ, ಪಾಯಿಸ, ಖಡಕ್ ಜೋಳದ ರೊಟ್ಟಿ, ಚಪಾತಿ, ಶೇಂಗಾ ಚಟ್ನಿ, ಕಡ್ಲಿ ಚಟ್ನಿ, ಅಲಸಂದಿ, ಹೆಸರು, ಕಡಲೆ, ಕಾಳಿನ ಪಲ್ಲೆ, ಬದನೆಕಾಯಿ ಎಣ್ಣಗಾಯಿ ಪಲ್ಯ, ಅನ್ನ, ಸಾಂಬಾರ, ಅಕ್ಕಿ ಹುಗ್ಗಿ, ಸ್ಯಾಂಡಿಗೆ, ಹಪ್ಪಳ, ಕರಿದ ಮೆಣಸಿನಕಾಯಿ ಸೇರಿದಂತೆ ತರಹೇವಾರಿ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವಿಸಿದರು.

ಗ್ರಾಮೀಣ ಕ್ರೀಡೆ ಸೊಬಗು: ಗ್ರಾಮೀಣ ಪ್ರದೇಶದಲ್ಲಿ ನಾಗರ ಪಂಚಮಿ ನಿಮಿತ್ತ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಕಣ್ಣಾಮುಚ್ಚಾಲೆ ಆಟ, ಜೋತಾಡುವ ಜೋಕಾಲಿ, ಮಿಲ್ಟ್ರಿ ಜೋಕಾಲಿ ಹಾಗೂ ದುಂಡಿ ಎತ್ತುವುದು ಹೀಗೆ ವಿವಿಧ ಮನರಂಜನೆಯ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನದಿಂದ ಸಂಜೆಯವರೆಗೂ ಯುವಕರ ದಂಡು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಹರಸಾಹಸ ಪಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದವು.

ಕೆಲವರು ಜೋಕಾಲಿ ಆಡುವುದು, ಹೊಳೆಗಂಗಾ ಪೂಜೆ ಮಾಡುವುದನ್ನು ಸೆರೆಹಿಡಿದು ಸಂಭ್ರಮಿಸಿದರೆ, ಹಲವರು ಒಳ್ಳೊಳ್ಳೆ ಸಿನಿಮಾ ಹಾಡುಗಳಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಖುಷಿಪಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೂಲಿಕಾರರಿಗೆ ಸ್ಕೀಂನ ಲಾಭ ಪಡೆಯಲಿ: ಪಾಟೀಲ್
ಸಂಸ್ಕಾರ, ಸಂಸ್ಕೃತಿ ಉಳಿಯಲು ದೇವಸ್ಥಾನ ಅವಶ್ಯ: ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು