ಸಮಾನತೆಯ ಫಲ ಮಹಿಳೆಯರಿಗೆ ಸಿಗುತ್ತಿಲ್ಲ-ಪರಿಮಳಾ ಜೈನ್‌

KannadaprabhaNewsNetwork |  
Published : Apr 19, 2026, 02:15 AM IST
ಹಾನಗಲ್ಲಿನ ಲೋಯೋಲಾ ವಿಕಾಸ ಕೇಂದ್ರದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-ಸಮಾನತೆಯ ಸಮಾಜದೆಡೆಗೆ ನಮ್ಮ ನಡೆ ಕಾರ್ಯಕ್ರಮವನ್ನು ಪರಿಮಳಾ ಜೈನ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಹಿಳಾ ಸಮಾನತೆಯ ಕೂಗು ೧೨ನೇ ಶತಮಾನದ ಶರಣರ ಕಾಲದಲ್ಲಿಯೇ ಮುನ್ನೆಲೆಗೆ ಬಂದರೂ ಈವರೆಗೂ ಅದರ ಫಲ ಮಹಿಳೆಯರಿಗೆ ಸಿಗದಿರುವುದು ವಿಷಾದದ ಸಂಗತಿ ಎಂದು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಆಯೋಗದ ಸದಸ್ಯೆ ಪರಿಮಳಾ ಜೈನ್ ಅಭಿಪ್ರಾಯಪಟ್ಟರು.

ಹಾನಗಲ್ಲ: ಮಹಿಳಾ ಸಮಾನತೆಯ ಕೂಗು ೧೨ನೇ ಶತಮಾನದ ಶರಣರ ಕಾಲದಲ್ಲಿಯೇ ಮುನ್ನೆಲೆಗೆ ಬಂದರೂ ಈವರೆಗೂ ಅದರ ಫಲ ಮಹಿಳೆಯರಿಗೆ ಸಿಗದಿರುವುದು ವಿಷಾದದ ಸಂಗತಿ ಎಂದು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಆಯೋಗದ ಸದಸ್ಯೆ ಪರಿಮಳಾ ಜೈನ್ ಅಭಿಪ್ರಾಯಪಟ್ಟರು.

ಶನಿವಾರ ಇಲ್ಲಿನ ಜಗಜೀವನರಾಮ್ ಭವನದಲ್ಲಿ ಪ್ರಗತಿ ಲೋಯೋಲಾ ತಾಲೂಕು ಸ್ವ ಸಹಾಯ ಸಂಘಗಳ ಒಕ್ಕೂಟ ಹಾಗೂ ಲೋಯೋಲಾ ವಿಕಾಸ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-ಸಮಾನತೆಯ ಸಮಾಜದೆಡೆಗೆ ನಮ್ಮ ನಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನು, ಹಕ್ಕು, ಶಿಕ್ಷಣದ ಪ್ರತಿರೂಪವಾಗಿ ಅಕ್ಕಮಹಾದೇವಿಯ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಪತಿಯೇ ದೇವರು ಎಂದು ಒಪ್ಪಿಕೊಳ್ಳೋಣ, ಆದರೆ ಮಹಿಳೆ ಎಂದೂ ಮನೆಯ ಯಜಮಾನಿ ಆಗಲಿಲ್ಲ. ನಮಗೆ ಸ್ವಾಭಿಮಾನಿ ಬದುಕು ಬೇಕಾಗಿದೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮಹಿಳೆಯ ಬದುಕು ಬರಡಾಗುತ್ತದೆ. ಆಸೆಯೇ ಹಿಂಸೆಗೆ ಕಾರಣ, ಆದರೆ ಹೆಣ್ಣು ಹೆಣ್ಣಾದೆನೆಂದು ಬೇಸರಿಸುವ ಬದಲು ಹೆಮ್ಮೆಯಿಂದ ಹೇಳಿ. ಆತ್ಮವಿಶ್ವಾಸವೇ ಎಲ್ಲರ ಯಶಸ್ಸಿನ ಗುಟ್ಟು ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಹೆಣ್ಮಕ್ಕಳೇ ಸ್ಟ್ರಾಂಗು ಗುರು ಎಂಬುದನ್ನು ಮರೆಯಬೇಡಿ. ಈಗಲೂ ಮಹಿಳೆ ಮನೆಗೆ ಸೀಮಿತವಾಗಿರುವುದು ಬಾಲ್ಯವಿವಾಹದಂಥ ಕಾನೂನು ಬಾಹೀರ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದು ಬೇಡ. ಮಹಿಳೆಗೆ ಸಮಾನತೆಯ ಹೋರಾಟ ಆಮೆಗತಿಯಲ್ಲಿ ಸಾಗುತ್ತಿದೆ. ಹೆಣ್ಣು ನ್ಯಾಯದ ಸ್ವರೂಪ ಎಂದು ಬಾಯಲ್ಲಿ ಹೇಳುತ್ತೇವೆ. ಆದರೂ ಹೆಣ್ಣು ಎಲ್ಲವನ್ನೂ ಸಹಿಸಿಕೊಂಡಿದ್ದಾಳೆ. ನಮ್ಮನ್ನು ಇನ್ನೂ ಪರೀಕ್ಷಿಸಬೇಡಿ. ನಾವು ಮುಖ್ಯವಾಹಿನಿಗೆ ಬರಬೇಕು. ನಮ್ಮ ಜವಾಬ್ದಾರಿಯನ್ನು ನಾವೇ ನಿರ್ವಹಿಸುವಂತಾಗಬೇಕು. ಭವಿಷ್ಯದಲ್ಲಿ ನಮಗೆ ಉತ್ತಮ ಬದುಕು ಬೇಕು. ಅದಕ್ಕಾಗಿ ನ್ಯಾಯಯುತ ಹೋರಾಟ ಮಾಡೋಣ ಎಂದು ಕರೆ ನೀಡಿದರು.ಆಶಯ ಮಾತುಗಳನ್ನಾಡಿದ ಲೋಯೋಲಾ ವಿಕಾಸ ಕೇಂದ್ರದ ನಿರ್ದೇಶಕ ವಿನ್ಸೆಂಟ್ ಜೆಸಸ್, ಅವಕಾಶವಂಚಿತ, ದುರ್ಬಲರ ಸೇವೆಯೇ ನಮ್ಮ ಗುರಿ. ಜನಜಾಗೃತಿ ಮೂಲಕ ಸ್ವಾವಲಂಬಿ ಜೀವನಕ್ಕೆ ಮಾರ್ಗದರ್ಶನ ಮಾಡುವ ಸಂಕಲ್ಪ ನಮ್ಮದಾಗಿದೆ. ಈ ಮೂಲಕ ಮಹಿಳಾ ಸಾಮರ್ಥ್ಯವನ್ನು ಔದ್ಯೋಗಿಕ ಸಾಮಾಜಿಕವಾಗಿ ಗಟ್ಟಿಗೊಳಿಸುವ ಪ್ರಯತ್ನ ನಮ್ಮದು. ವಿಶೇಷವಾಗಿ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿ, ಪ್ರತಿಭಾವಂತರನ್ನು ಇನ್ನಷ್ಟು ಬೆಳೆಸುವ ಕಾರ್ಯದಲ್ಲಿ ನಾವು ಮುಂದಿದ್ದೇವೆ ಎಂದರು. ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಗತಿ ಲೋಯೋಲಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಗೀತಾ ಕುರುಬರ, ಈಗ ಮಹಿಳಾ ಸಂಘಟನೆಗಳು ಸದೃಢವಾಗಿವೆ. ಲೋಯೋಲಾ ವಿಕಾಸ ಕೇಂದ್ರದ ಮೂಲಕ ತಾಲೂಕಿನ ಹಲವು ಗ್ರಾಮಗಳಲ್ಲಿ ಮಹಿಳಾ ಸಂಘಟನೆಗಳು ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿವೆ. ಆರ್ಥಿಕ ಸಬಲತೆಗೂ ದೊಡ್ಡ ಹೆಜ್ಜೆ ಹಾಕಿದ್ದೇವೆ. ಇದರೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಶಿಕ್ಷಣವನ್ನೂ ನೀಡುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಯುವ ಪ್ರಗತಿಪರ ಕೃಷಿ ಮಹಿಳೆ ಕಾವ್ಯಾ ಕುಂಟನಹೊಸಳ್ಳಿ, ಸಾಹಿತಿ ಪಾರ್ವತಿಬಾಯಿ ಕಾಶೀಕರ, ಗುತ್ತೆಮ್ಮ ಸುಣಗಾರ, ಲೋಯೋಲಾ ವಿಕಾಸ ಕೇಂದ್ರದ ಸಹನಿರ್ದೇಶಕ ಜೆಸನ್ ಪಾಯ್ಸ, ಅನಿಲ್ ಡಿಸೋಜಾ, ಭಾರತಿ, ಸಿಸ್ಟರ್ ಸೆರೋಲಾ, ಸಿಸ್ಟರ್ ಸೋನಿಯಾ ಇತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಗಾಗಿ ಕಾವ್ಯಾ ಕುಂಟನಹೊಸಳ್ಳಿ, ಗುತ್ತೆಮ್ಮ ಸವಣೂರ ಅವರನ್ನು ಸನ್ಮಾನಿಸಲಾಯಿತು. ವೈಷ್ಣವಿ ಸ್ವಾಗತ ನೃತ್ಯ ಪ್ರದರ್ಶಿಸಿದರು. ವಿದ್ಯಾ ಲಕ್ಷ್ಮಿಪುರ ಸಂವಿಧಾನ ಪೀಠಿಕೆ ಓದಿದರು. ಕವಿತಾ ಜಾಡರ್ ಸ್ವಾಗತಿಸಿದರು. ಅನ್ನಪೂರ್ಣ ಹಾಗೂ ಗೀತಾ ಕಾರ್ಯಕ್ರಮ ನಿರ್ವಹಿಸಿದರು. ಶಬನಾಜ್ ಶೇಖ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಂಡ್ ಪವರ್ ಕಾಟಕ್ಕೆ ಬೇಸತ್ತು ಹೈಟೆನ್ಷನ್ ಕಂಬ ಏರಿದ ರೈತ
ತುಂಗಭದ್ರಾ ಒಡಲು ಬಗೆದು, ಮರಳು ದಂಧೆ