ಗದಗ: ಸ್ವರಾಷ್ಟ್ರ ಎಂಟರ್‌ಪ್ರೈಸೆಸ್ ಹಾಗೂ ಮಂಗಳೂರಿನ ಮಲ್ನಾಡ್ ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನ ಅಭಿಯಾನ ಸಂಸ್ಥೆಯಿಂದ ಗೋದಾನ, ಮಲೆನಾಡು ಗಿಡ್ಡ ತಳಿ ಹಸುಗಳ ಉಚಿತ ವಿತರಣಾ ಕಾರ್ಯಕ್ರಮ ಮತ್ತು ಗದಗ ಜಿಲ್ಲೆಯ ಗೋ ರಕ್ಷಕರಿಗೆ ಸನ್ಮಾನ ಸಮಾರಂಭ ಶನಿವಾರ ಸಂಜೆ ನಗರದಲ್ಲಿ ಜರುಗಿತು.
ಸಾನ್ನಿಧ್ಯ ವಹಿಸಿದ್ದ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮಿಗಳು ಮಾತನಾಡಿ, ಉಚಿತವಾಗಿ ನೀಡುತ್ತಿರುವ ಈ ಹಸುಗಳನ್ನು ಬೇವಾಜವಾಬ್ದಾರಿಯಿಂದ ನೀವು ಮಾರಾಟ ಮಾಡಿಕೊಳ್ಳುವಂತಹ ಕೆಲಸಕ್ಕೆ ಮುಂದಾದರೆ ಹಡೆದ ತಾಯಿಯನ್ನೇ ಮಾರಾಟ ಮಾಡಿಕೊಂಡಂತೆ. ಹಾಗಾಗಿ ರೈತರು ದುರುಪಯೋಗಪಡಿಸಿಕೊಳ್ಳದೇ ಅವುಗಳನ್ನು ಜವಾಬ್ದಾರಿಯಿಂದ ಸಂರಕ್ಷಣೆ ಮಾಡುವ ಸಂಕಲ್ಪ ಮಾಡಬೇಕು ಎಂದರು.
ಮಲೆನಾಡು ಗಿಡ್ಡ ತಳಿ ಸಂರಕ್ಷಣೆ ಮತ್ತು ಸಂವರ್ಧನ ಅಭಿಯಾನ ವೇದಿಕೆಯ ಅಕ್ಷಯ ಆಳ್ವ ಮಾತನಾಡಿ, ಮಲೆನಾಡು ಗಿಡ್ಡ ತಳಿ ಹಸುವಿನ ಕುರಿತು ಹಾಗೂ ದೇಸಿ ಹಸು ಸಾಕಾಣಿಕೆಯಿಂದ ಜನರಿಗೆ ಸಿಗುವಂತಹ ಲಾಭಗಳ ಕುರಿತು ವಿಸ್ತಾರವಾಗಿ ಮಾತನಾಡಿದರು. ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಸಂಪೂರ್ಣ ಗೋ ಹತ್ಯೆ ನಿಷೇಧ ಜಾರಿಗೊಳಿಸಬೇಕು ಎಂದರು. ಸ್ವರಾಷ್ಟ್ರ ಎಂಟರ್‌ಪ್ರೈಸಸ್‌ನ ಸಂತೋಷ ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ, ಗೋವು ಭೂಮಿಯ ಮೇಲಿನ ಪರಮ ಜೀವಿ ಮತ್ತು ಅತ್ಯಂತ ಪವಿತ್ರವಾದುದು. ಎಲ್ಲ ದಾನಗಳಿಗಿಂತ ಗೋ ದಾನವು ಶ್ರೇಷ್ಠವಾದುದು. ದೇಶಿ ಮಣ್ಣಿನ ಫಲವತ್ತತೆಯನ್ನು ಕಾಪಾಡುವಲ್ಲಿ ಮಲೆನಾಡು ಗಿಡ್ಡ ಹಸುವಿನ ಪಾತ್ರ ಬಹು ದೊಡ್ಡದು ಎಂದರು.ಅಶೋಕ ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ದೀಪಚಂದ ಬಾಗಮಾರ, ಆರ್.ಡಿ. ಕಡ್ಲಿಕೊಪ್ಪ, ಜಗನ್ನಾಥ ಭಾಂಡಗೆ, ಕಿಚಡಿ ಕೊಟ್ರೇಶ ಉಪಸ್ಥಿತರಿದ್ದರು.