ಹೆಣ್ಣನ್ನು ಈಗಲೂ ವಸ್ತುವಾಗೇ ನೋಡಲಾಗುತ್ತಿದೆ: ಸಾಹಿತಿ ವಿನಯ

KannadaprabhaNewsNetwork | Published : Oct 29, 2024 12:55 AM

ಸಾರಾಂಶ

ಕಲಬುರಗಿ ನಗರದಲ್ಲಿ ನಡೆದ ರಾಜ್ಯಮಟ್ಟದ 12ನೇ ಕದಳಿ ಮಹಿಳಾ ಸಮಾವೇಶದಲ್ಲಿ ಒಳಗೆ ಸುಳಿವ ಆತ್ಮ ಗೋಷ್ಠಿಯಲ್ಲಿ ಸಾಹಿತಿ ವಿನಯ ಅಭಿಮತ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೊಡು, ಕೊಳ್ಳಲು ಹೆಣ್ಣು ವಸ್ತುವಲ್ಲ, ಆದಾಗ್ಯೂ ಅವಳನ್ನು ಆಗಲೂ, ಈಗಲೂ ವಸ್ತುವಾಗಿಯೇ ನೋಡಲಾಗುತ್ತಿದೆ ಎಂದು ಹೇಳುತ್ತ, ಹೊರಗಿನ ಆವರಣ ಬದಲಾದಂತೆ ಕಾಣುತ್ತಿದೆಯೇ ವಿನಾ ಅಂತರಂಗದಲ್ಲಿ ಹೆಣ್ಣನ್ನು ನೋಡುವ ನೋಟದಲ್ಲಿ ದೊಡ್ಡ ಬದಲಾವಣೆ ಘಟಿಸಿಲ್ಲವೆಂದು ಧಾರವಾಡ ಸಾಹಿತಿ ವಿನಯ ಒಕ್ಕುಂದ ಬೇಸರಿಸಿದರು.

ನಗರದಲ್ಲಿ ನಡೆದ ರಾಜ್ಯಮಟ್ಟದ 12ನೇ ಕದಳಿ ಮಹಿಳಾ ಸಮಾವೇಶದಲ್ಲಿ ಒಳಗೆ ಸುಳಿವ ಆತ್ಮ ಗೋಷ್ಠಿಯಲ್ಲಿ ವಿಷಯ ಮಂಡಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲೇ ಜಾತಿ ನಿರಸನ ಪ್ರಶ್ನೆಯನ್ನು ಅತ್ಯದ್ಭುತವಾಗಿ ನಿರ್ವಚನ ಮಾಡಿಕೊಟ್ಟಂತಹ ಬಸವಣ್ಣನಿಗೂ ಪುರುಷ ಅಹಂಕಾರ ಇಳಿಸಿಕೊಳ್ಳಲಾಗಿರಲಿಲ್ಲ. ಗಂಡಸುತನದ ಗರ್ವ ಕಳೆದುಕೊಳ್ಳುವುದು ಸುಲಭವಾಗಿರಲ್ಲವೆಂದು ಅನೇಕ ವಚನಗಳನ್ನು ಅದಕ್ಕೆ ಸೋದಾಹರಣವಾಗಿ ವಿವರಿಸಿದರು.

ಬಸವಣ್ಣನವರಿಗೂ ಪುರುಷ ಅಹಂಕಾರದಿಂದ ಹೊರಬರಲು ಆಗಿರಲಿಲ್ಲ. ಎನ್ನ ಸತಿ ನೀಲಲೋಚನೆ ಗಗ್ಗಳೆಯ ಚೆಲುವೆ ಎಂದ ಬಸವಣ್ಣನೂ ಹೆಣ್ಣನ್ನು ದೇಹ ರೂಪವಾಗಿ ನೋಡುವ ಶಾಪದಿಂದ ಮುಕ್ತನಾಗಿರಲಿಲ್ಲ. ಪರಂಪರಾಗತವಾದ ರೋಗಗ್ರಸ್ತ ಚಿಂತನೆಯಿಂದ ಹೊರ ಬರುವುದು ಕಠಿಣವಾಗಿತ್ತು ಎಂದು ವಿನಯ ಅಭಿಪ್ರಾಯಪಟ್ಟರು.

ಲೇಖಕ ಬಸವರಾಜ ಸಾದರ್‌ ಅವರು ಮಡದಿ ಎಂಬ ಶಬ್ಧ ನಿಶ್ಯಬ್ಧವಾದೊಡೆ ವಿಷಯ ಮಂಡಿಸಿದರು. ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಅಧ್ಯತ್ಕ್ಷತೆ ವಹಿಸಿದ್ದರು. ಕಲಬುರಗಿ, ಮೈಸೂರು, ವಿಜಯಪೂರ, ಬೀದರ್‌ ಜಿಲ್ಲೆಯ ಸಾಹಿತಿಗಳನೇಕರು ಉಪಸ್ಥಿತರಿದ್ದರು.

ಕದಳಿ ಮಹಿಳಾ ವೇದಿಕೆ, ಸಂಘಟನೆ ಮತ್ತು ಸವಾಲುಗಳು, ಶಿವನ ಸೊಮ್ಮು ಶಿವಂಗೆ, ಗೋತ್ರನಾಮವ ಬೆಸಗೊಂಡಡೆ ಎಂಬ ವಿಷಯಗಳ ಮೇಲೂ ಗೋಷ್ಠಿಗಳು ನಡೆದು ಚಿಂತಕರು ವಿಷಯ ಮಂಡಿಸಿದರು. ಡಾ. ಶಾಂತಾ ಮಠ. ಡಾ. ಸಾವಿತ್ರಿ ಪಟ್ಟಣ, ಡಾ. ಚಿತ್ಕಲಾ ಮಠಪತಿ, ಡಾ. ಶಿವಶರಣಪ್ಪ ಗೋಷ್ಠಿಗಳನ್ನು ನಡೆಸಿಕೊಟ್ಟರು.

ಕೋವಿಡ್‌ ಕಾಲದಲ್ಲಿ ದೇವರು ಎಲ್ಲಿದ್ದ?: ಹುಲಿಕಲ್‌

ಕದಳಿ ಮಹಿಳಾ ಸಮಾವೇಶದಲ್ಲಿ ಕಲ್ಲು ದೇವರು ದೇವರಲ್ಲ ಎಂಬ ವಿಷಯವಾಗಿ ಮಾತನಾಡಿದ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್‌ ನಟರಾಜ್‌ ಕೋವಿಡ್‌ ಬಂದಾಗ ದೇವರು ಎಲ್ಲಿದ್ದ? ಎಂದು ಪ್ರಶ್ನಿಸಿದರು.

ಕೋವಿಡ್‌ ಕಾಡಿದಾಗ ಮಂದಿರ, ಮಸೀದಿ ಹಾಗೂ ಚರ್ಚ್‌ಗಳಿಗೇ ಬೀಗ ಜಡಿಯಲಾಗಿತ್ತು, ಆಗ ದೇವರು ಎಲ್ಲಿ ಹೋಗಿದ್ದ? ಎಂದು ಪ್ರಶ್ನಿಸಿದ ನಟರಾಜ್‌, ದೇಹಕ್ಕೆ ಕಾಯಿಲೆ ಬಂದರೆ ಸರಿ ಹೋಗುತ್ತದೆ, ಮನಸ್ಸಿಗೆ ಬಂದರೆ ದೇವರ ಅಪ್ಪ ಬಂದರೂ ವಾಸಿಯಾಗದು ಎಂದರು.

ವಿಜ್ಞಾನ ಮುಂದುವರಿದಿದ್ದು ಭೂಮಿ ತವರೂರಾಗಿ, ಅನ್ಯ ಗ್ರಹಗಳು ನಮಗೆ ಮನೆಯಾಗೋ ಕಾಲ ದೂರವಿಲ್ಲ, ಈ ಹಂತದಲ್ಲಿ ಪಂಚಾಂಗಕ್ಕೆ ಗಮನ ಕೊಡೋ ಬದಲು ದೇಹದ ಪಂಚ ಅಂಗಗಳತ್ತ ಗಮನ ನೀಡುವಂತೆ ಕೋರಿದರು.

ಅನುಭ‍ ಮಂಟಪ ಅನುವು ಮಾಡಿದಾತ ವಿಷಯವಾಗಿ ನೀಲಾಂಬಿಕಾ ಪೊಲೀಸ್‌ ಪಾಟೀಲ್‌ ಮಾತನಾಡಿದರು. ಕೇಂದ್ರೀಯ ವಿವಿ ಪ್ರಾಧ್ಯಾಪಕಿ ಶಿವಗಂಗಾ ರುಮ್ಮಾ ಅಧ್ಯಕ್ಷತೆ ಇತ್ತು. ಅಮೃತಾ ಕಟಕೆ, ಕಮಲಾಬಾಯಿ ಶಾಬಾದಿ ಇದ್ದರು. ಸಾಕ್ಷಿ ಸತ್ಯಂಪೇಟೆ ನಿರೂಪಿಸಿದರು, ಸಂಜಯ್‌ ಪಾಟೀಲ್‌ ವಂದಿಸಿದರು.

Share this article