ಹಿರೇಕೆರೂರು: ಮಹಿಳೆ ಸೃಷ್ಟಿಯ ಕಣ್ಣು, ಅವಳನ್ನು ಗೌರವಯುತವಾಗಿ ನಡೆಸಿಕೊಂಡು, ಸಿಗಬೇಕಾದ ಹಕ್ಕುಗಳನ್ನು ನೀಡಿ, ಪುರುಷ ಮತ್ತು ಮಹಿಳೆಯನ್ನು ಸಮಾನವಾಗಿ ಕಾಣುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಜೆಎಂಎಫ್‌ಸಿ ಹಿರಿಯ ದಿವಾಣಿ ನ್ಯಾಯಾಧೀಶರಾದ ಅನಿತಾ ಒ.ಎ. ಹೇಳಿದರು.
ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನೆ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪುರುಷ ಮತ್ತು ಮಹಿಳೆ ಸಮಾನವಾಗಿದ್ದಾಗ ಮಾತ್ರ ಉತ್ತಮ ಸಮಾಜ ಎಂದು ಕರೆಯಲು ಸಾಧ್ಯವಾಗುತ್ತದೆ. ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕು. ಇಂದು ಸಮಾಜದಲ್ಲಿ ನಾವು ಈ ಮಟ್ಟದಲ್ಲಿ ಬೆಳವಣಿಗೆ ಕಂಡಿದ್ದೇವೆ ಎಂದರೆ ಅನೇಕ ಸಮಾಜ ಸುಧಾರಕರ ಹೋರಾಟದ ಪ್ರತಿಫಲವಾಗಿದೆ, ಅವರ ಹೋರಾಟವನ್ನು ನಾವು ಸ್ಮರಿಸಬೇಕು ಎಂದರು.
ಮಹಿಳೆಯರು ಮತ್ತು ಮಕ್ಕಳಿಗಾಗಿ ಸರ್ಕಾರ ವಿಶೇಷ ಕಾನೂನುಗಳನ್ನು ಜಾರಿಗೊಳಿಸುವ ಜತೆಗೆ ಕಾನೂನು ಸೇವಾ ಸಮಿತಿಯಿಂದ ಮಹಿಳೆಯರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತಿದೆ. ಅದರ ಪ್ರಯೋಜನ ಪಡೆದುಕೊಳ್ಳಬೇಕು. ಗ್ರಾಮೀಣ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಮೇಲ್ವಿಚಾರಕಿಯರು ಕಾರ್ಯಕರ್ತೆಯರಿಗೆ ಅಲ್ಲಿನ ಸಮಸ್ಯೆಗಳ ಅರಿವು ನಿಮಗಾಗುತ್ತದೆ. ಅಂತಹ ಸಂದರ್ಭದಲ್ಲಿ ಅವರಿಗೆ ಅವಶ್ಯಕವಾದ ಕಾನೂನು ಮಾಹಿತಿ ನೀಡಬೇಕು ಎಂದರು.ದಿವಾಣಿ ನ್ಯಾಯಾಧೀಶರಾದ ನಾಗರತ್ನಮ್ಮ, ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಸವಿತಾ ಮುಕ್ಕಲ್ ಮಾತನಾಡಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೀತಾ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಕೆ.ಬಿ. ಬಾಳಿಕಾಯಿ, ಕಾರ್ಯದರ್ಶಿ ಎಸ್.ಎಚ್. ಪಾಟೀಲ, ಉಪಾಧ್ಯಕ್ಷೆ ಹೇಮಾ ಬೆಳ್ಳೂರ, ಅಬಕಾರಿ ನಿರೀಕ್ಷಕಿ ಸುಧಾ ಎಚ್.ಆರ್., ಉಪಖಜಾನೆ ಅಧಿಕಾರಿ ಎಸ್.ಎಂ. ಕರೀಂಖಾನ್, ಸಹಾಯಕ ಸರ್ಕಾರಿ ಅಭಿಯೋಜಕರಾದ ರಂಗಪ್ಪ ಬಿ.ಎಚ್., ಕೆಂಚಪ್ಪ ಬಿದರಿ, ವಕೀಲರಾದ ಬಿ.ಎಂ. ಹೊಳೆಯಪ್ಪನವರ, ಎಸ್.ಬಿ. ತಿಪ್ಪಣ್ಣನವರ, ಎಸ್.ವಿ. ತೊಗರ್ಸಿ, ಎಸ್.ಎಸ್. ಹುಲ್ಲತ್ತಿ, ಎಚ್.ಎಸ್. ಕೋಣನವರ, ಬಿ.ಜಿ. ಪಾಟೀಲ, ದೀಪಕ್ ಜವಳಿ, ರೇಷ್ಮಾ ಹಳ್ಳಪ್ಪನವರ, ರೋಜಾ ಬೂಸೇರೆ, ಜ್ಯೋತಿ ನೇಕಾರ, ಸ್ನೇಹಾ, ತನುಶ್ರೀ ಇದ್ದರು.