ಮಹಿಳೆಯರು ಶಿಕ್ಷಣದಿಂದ ಮಾತ್ರ ಜೀವನ ರೂಪಿಸಿಕೊಳ್ಳಲು ಸಾಧ್ಯ: ಪ್ರೊ.ಎಂ.ಎಸ್. ಸಪ್ನಾ

KannadaprabhaNewsNetwork |  
Published : Mar 18, 2025, 12:32 AM IST
10 | Kannada Prabha

ಸಾರಾಂಶ

ಸಮಾಜದಲ್ಲಿ ಹೆಣ್ಣು ಮಕ್ಕಳೆಂದರೆ ಕೀಳರಿಮೆ ಇದೆ. ಅದನ್ನು ಮೆಟ್ಟಿ ನಿಲ್ಲಲು ಮಹಿಳೆಯರು ಸಿದ್ಧರಿರಬೇಕು. ನಮ್ಮದೇ ಆದ ಅಸ್ತಿತ್ವವನ್ನು ಉಳಿಸಿಕೊಂಡು ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು. ಮಹಿಳೆಯರು ಆರೋಗ್ಯದ ಕಡೆ ಹೆಚ್ಚು ಗಮನಕೊಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಿಂದ ಮಾತ್ರ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಿದ್ದು, ಮಹಿಳೆಯರು ಯಾವುದಕ್ಕೂ ಎದೆಗುಂದದೆ ಯಾರ ಮೇಲೂ ಅವಲಂಬಿತರಾಗದೆ ಗುರಿ ಇಟ್ಟುಕೊಂಡು ಸಮಾಜಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು ಎಂದು ಮೈಸೂರು ವಿವಿ ಇ.ಎಂ.ಆರ್.ಸಿ. ನಿರ್ದೇಶಕಿ ಹಾಗೂ ಪತ್ರಿಕೋದ್ಯಮ ವಿಭಾಗ ಪ್ರಾಧ್ಯಾಪಕಿ ಡಾ.ಎಂ.ಎಸ್. ಸಪ್ನಾ ತಿಳಿಸಿದರು.

ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕರ್ನಾಟಕದಲ್ಲಿ ಬುಡಕಟ್ಟು ಮಹಿಳೆಯರ ಸ್ಥಾನಮಾನ, ಸಮಸ್ಯೆಗಳು, ಸವಾಲುಗಳು ಮತ್ತು ಸಬಲೀಕರಣದ ತಂತ್ರಗಳು ಕುರಿತ ಒಂದು ದಿನದ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಹೆಣ್ಣು ಮಕ್ಕಳೆಂದರೆ ಕೀಳರಿಮೆ ಇದೆ. ಅದನ್ನು ಮೆಟ್ಟಿ ನಿಲ್ಲಲು ಮಹಿಳೆಯರು ಸಿದ್ಧರಿರಬೇಕು. ನಮ್ಮದೇ ಆದ ಅಸ್ತಿತ್ವವನ್ನು ಉಳಿಸಿಕೊಂಡು ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು. ಮಹಿಳೆಯರು ಆರೋಗ್ಯದ ಕಡೆ ಹೆಚ್ಚು ಗಮನಕೊಡಬೇಕು. ಜಾಗೃತರಾಗಬೇಕು ಗಟ್ಟಿತನ ಬೆಳೆಸಿಕೊಂಡು ಏನೇ ಕಷ್ಟಬಂದರು ಎದುರಿಸಿ ಮಾನಸಿಕವಾಗಿ ಸದೃಢರಾಗಿ, ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಅವರು ಹೇಳಿದರು.

ಸಮಾನತೆ ಸಿಕ್ಕಿಲ್ಲ:

ಮೈಸೂರು ವಿವಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಎಚ್.ಪಿ. ಜ್ಯೋತಿ ಮಾತನಾಡಿ, ಮಹಿಳಾ ದಿನಾಚರಣೆಯನ್ನು ಹಬ್ಬದ ರೀತಿ ಆಚರಿಸುತ್ತಾರೆ. ಆದರೆ, ಮಹಿಳೆಯರಿಗೆ ಇನ್ನೂ ಸಮಾನತೆ ಸಿಕ್ಕಿಲ್ಲ. ಹೆಣ್ಣು ಹೆಣ್ಣನ್ನು ಮೊದಲು ಗೌರವಿಸಬೇಕು ಎಂದರು.

ಬುಡಕಟ್ಟು ಮಹಿಳೆಯರು ತುಂಬಾ ಸದೃಢರಾಗಿದ್ದು, ಸಮಾಜದ ಮುಖ್ಯವಾಹಿನಿಗೆ ಬರಬೇಕು. ತಾಯಿಯ ಸಂಸ್ಕಾರ, ಗಂಡನ ಮನೆ ಸಹಕಾರವಿದ್ದರೆ ಮಹಿಳೆ ಏನು ಬೇಕಾದರೂ ಸಾಧನೆ ಮಾಡಬಹುದು. ತಾಯಂದಿರು ಮಕ್ಕಳಲ್ಲಿ ಲಿಂಗ ತಾರತಮ್ಯ ಮಾಡದೇ ಶಿಕ್ಷಣದ ಜೊತೆಗೆ ಕೌಶಲ್ಯ ತರಬೇತಿಗಳನ್ನು ಮಕ್ಕಳಿಗೆ ಕೊಡಿಸಿ, ಪ್ರಶ್ನಿಸುವ ಗುಣವನ್ನು ಮಕ್ಕಳಲ್ಲಿ ಕಲಿಸಿ, ಬಾಲ್ಯ ವಿವಾಹವನ್ನು ಮಹಿಳೆಯರು ತಡೆಗಟ್ಟಬೇಕು ಎಂದು ಅವರು ಕರೆ ನೀಡಿದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕಿ ಬಿ.ಎಸ್. ಪ್ರಭಾ ಅರಸ್ ಮಾತನಾಡಿ, ಸಾಧನೆಗೆ ಪ್ರೋತ್ಸಾಹವಿದ್ದರೆ ಏನು ಬೇಕಾದರೂ ಸಾಧಿಸಬಹುದು. ವಿದ್ಯಾರ್ಥಿಗಳು ಸಾಧಕರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದರು.

ಇದೇ ವೇಳೆ ಮಹಿಳಾ ದಿನಾಚರಣೆಯ ಅಂಗವಾಗಿ ಬುಡಕಟ್ಟು ಸಮುದಾಯದಲ್ಲಿ ಸಾಧನೆ ಮಾಡಿರುವ ಡಾ.ಎಸ್.ಆರ್. ದಿವ್ಯಾ, ಡಾ. ಕಲಾವತಿ, ಡಾ. ಸಬಿತಾ, ಸೃಜನ್, ಮಾಸ್ತಮ್ಮ, ಕುಂಬಿಅಮ್ಮ, ಮಾದಮ್ಮ, ಜೆ.ಆರ್. ರಾಣಿ ಅವರನ್ನು ಅಭಿನಂದಿಸಲಾಯಿತು.

ನಂತರ ಡಾ. ದೀಪಾ ಭಟ್, ಡಾ. ರತ್ನಮ್ಮ, ಡಾ. ಸಬಿತಾ ಕೊರಗ ಅವರಿಂದ ವಿಚಾರಗೋಷ್ಠಿಗಳು ನಡೆಯಿತು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಂಶೋಧನಾಧಿಕಾರಿ ಕೆ. ಶ್ರೀನಿವಾಸ, ಡಾ. ಮೋಹನ್‌ ಕುಮಾರ್, ಡಾ. ಮಂಜುನಾಥ್, ಡಾ. ರವಿಕುಮಾರ್, ಬಿ.ಆರ್. ಭವ್ಯಾ, ಗುಣಧರ್, ವೇಣುಕಾಂತ, ಹೇಮಚಂದ್ರ, ಗಂಗಾಧರಯ್ಯ, ಪುಷ್ಪಲತಾ, ದಾಕ್ಷಾಯಿಣಿ, ಪಿ. ಮಮತಾ, ಸರಸ್ವತಿ ಹಾಗೂ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ.1ರಂದು ಜಕಣಾಚಾರಿ ಸಂಸ್ಮರಣಾ ದಿನ
ಸೇವಾ ಕಾರ್ಯಕ್ರಮಗಳೊಂದಿಗೆ ಕೆ. ಮರೀಗೌಡ ಹುಟ್ಟುಹಬ್ಬ