ಮಹಿಳೆಯರಿಗೆ ಶೌಚದ ಸಂಕಷ್ಟ: ಸಾಮೂಹಿಕ ಶೌಚಾಲಯಕ್ಕೆ ಮಹಿಳೆಯರ ಆಗ್ರಹ

KannadaprabhaNewsNetwork |  
Published : Jul 15, 2026, 02:15 AM IST
ಮಹಿಳೆಯರಿಗೆ ಶೌಚದ ಸಂಕಷ್ಟ, ಸಾಮೂಹಿಕ ಶೌಚಾಲಯಕ್ಕೆ ಮಹಿಳೆಯರ ಆಗ್ರಹ | Kannada Prabha

ಸಾರಾಂಶ

ಸಾಮೂಹಿಕ ಶೌಚಾಲಯ ಇಲ್ಲದೇ ಹತ್ತಿರದ ಸರ್ಕಾರಿ ಜಾಗದ ಬೇಲಿಗಳ ಮಧ್ಯದ ಬಯಲು ಶೌಚವೇ ಗತಿ ಎಂಬಂತಾಗಿದೆ.

ತೆಕ್ಕಲಕೋಟೆ: ಪಟ್ಟಣದ ಎಲೆಮಟ್ಟಿ ಗುಡ್ಡದ ಬಳಿಯ 16ನೇ ವಾರ್ಡಿನಲ್ಲಿ ಮಹಿಳೆಯರಿಗೆ ಸಾಮೂಹಿಕ ಶೌಚಾಲಯ ಇಲ್ಲದೇ ಹತ್ತಿರದ ಸರ್ಕಾರಿ ಜಾಗದ ಬೇಲಿಗಳ ಮಧ್ಯದ ಬಯಲು ಶೌಚವೇ ಗತಿ ಎಂಬಂತಾಗಿದೆ.

ಈಚೆಗೆ ಖಾಸಗಿ ವ್ಯಕ್ತಿಗಳು ಬಯಲು ಶೌಚಕ್ಕೆ ತೆರಳುವ ಮಾರ್ಗದ ಮಧ್ಯೆ ಬಂಡೆಗಳನ್ನು ಅಡ್ಡಲಾಗಿ ನಿಲ್ಲಿಸಿದ್ದರಿಂದ ಮಹಿಳೆಯರು ಅತ್ತ ಬಯಲು ಶೌಚವೂ ಇಲ್ಲ, ಇತ್ತ ಸಾಮೂಹಿಕ ಶೌಚಾಲಯವೂ ಇಲ್ಲದೇ ನಿತ್ಯ ಪರದಾಡುವಂತಾಗಿದೆ.

ಈ ಕುರಿತು ಮಹಿಳೆಯರು ಜು.10ರಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಶೌಚಕ್ಕೆ ತೆರಳುವ ಮಾರ್ಗಕ್ಕೆ ಅಡ್ಡಲಾಗಿ ನಿಲ್ಲಿಸಲಾದ ಬಂಡೆಗಳನ್ನು ತೆರವುಗೊಳಿಸುವಂತೆ ಹಾಗೂ ಅದೇ ಸರ್ಕಾರಿ ಜಾಗದಲ್ಲಿ ಮಹಿಳೆಯರಿಗೆ ಸಾರ್ವಜನಿಕ ಸಾಮೂಹಿಕ ಶೌಚಾಲಯ ನಿರ್ಮಿಸಿ ಕೊಡುವಂತೆ ಮನವಿ ಸಲ್ಲಿಸಿದ್ದರು.

ಸ್ಥಳ ಪರಿಶೀಲಿಸಿದ ಮುಖ್ಯಾಧಿಕಾರಿ ಪರಶುರಾಮ, ಖಾಸಗಿ ವ್ಯಕ್ತಿಗಳಿಗೆ ತಿಳಿಹೇಳಿ ಬಂಡೆ ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೆ ನಾಲ್ಕು ದಿನಗಳಾದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತೆ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಶೌಚಕ್ಕೆ ತೆರಳುವ ಮಾರ್ಗದ ಬಂಡೆ ತೆರವುಗೊಳಿಸುವಂತೆ ಆಗ್ರಹಿಸಿದರು.

ಈ ಭಾಗದಲ್ಲಿ ನೀರಿನ ಸಮಸ್ಯೆ ಇರುವುದರಿಂದ ಕೆಲವು ಮನೆಗಳಲ್ಲಿ ಶೌಚಾಲಯಗಳಿದ್ದರೂ ಅದನ್ನು ಬಳಸಲು ಮನೆಯವರು ಹಿಂದೇಟು ಹಾಕುತ್ತಿದ್ದಾರೆ. ಈ ವಾರ್ಡಿನಲ್ಲಿ ಸಾಮೂಹಿಕ ಶೌಚಾಲಯ ಇಲ್ಲ. ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಬಯಲು ಶೌಚಕ್ಕೆ ಮಹಿಳೆಯರು ತೆರಳುತಿದ್ದರು. ಆದರೆ ಈಗ ಇದೂ ಇಲ್ಲದಂತಾಗಿದೆ ಎಂದು ಮಹಿಳೆಯರು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಬಯಲು ಬೇಲಿಗಳಲ್ಲಿ ಶೌಚಕ್ಕೆ ತೆರಳಿಸಿದ್ದ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿ ರಸ್ತೆ ಬಂಡೆ ನಿಲ್ಲಿಸಿದ್ದಾರೆ. ಇದರಿಂದಾಗಿ ಮಹಿಳೆಯರಿಗೆ ತೊಂದರೆಯಾಗಿದೆ ಎಂದು ಸ್ಥಳೀಯ ಮಹಿಳೆ ರಾಮಲಿಂಗಮ್ಮ ಆರೋಪಿಸಿದರು.

ಈ ಮೊದಲೇ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದ್ದೆವು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಬಂಡೆ ತೆಗೆಸುವುದಾಗಿ ತಿಳಿಸಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಪಟ್ಟಣ ಪಂಚಾಯಿತಿ ಮುತ್ತಿಗೆ ಹಾಕಲಾಗುವುದು ಎಂದು ಸಿರಿಗೇರಿ ಸಿದ್ದಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ನರೇಂದ್ರ ಸಿಂಹ, ಶ್ಯಾಮಸುಂದರ, ಈರಮ್ಮ ದೇವರಮನೆ, ನಾಗಮ್ಮ, ಎಸ್.ರೇಣುಕಮ್ಮ, ನರಸಮ್ಮ, ಮಹಾಕಾಳಮ್ಮ, ದೇಪುರ್ ಸಿದ್ದಮ್ಮ, ಗಂಗಮ ಇದ್ದರು.

ಅರ್ಜಿ ಸಲ್ಲಿಸಿದಲ್ಲಿ ಪರಿಗಣನೆ: ಬಯಲು ಶೌಚಕ್ಕೆ ಅವಕಾಶ ಇಲ್ಲ. ಮನೆ ಮನೆಗೆ ಶೌಚಾಲಯದಂತಹ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಯಾರಿಗೆ ವೈಯಕ್ತಿಕ ಶೌಚಾಲಯ ಇರುವುದಿಲ್ಲವೋ ಅವರು ಅರ್ಜಿ ಸಲ್ಲಿಸಿದಲ್ಲಿ ಪರಿಗಣಿಸಲಾಗುವುದು ಎನ್ನುತ್ತಾರೆ ಪಪಂ ಮುಖ್ಯಾಧಿಕಾರಿ ಪರಶುರಾಮ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಾವರಿ ಯೋಜನೆಗಳ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು: ಶಾಸಕ ಮಾನೆ
ನಗರದ ರಸ್ತೆ ಅಗೆದಿರುವುದಕ್ಕೆ ನಗರಾಭಿವೃದ್ಧಿ ಕೋಶಕ್ಕೆ ಸಿಎಂ ಸಚಿವಾಲಯದಿಂದ ಪತ್ರ