ಕುಶಾಲನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪರಿಕಲ್ಪನೆಯ ನಾರಿ ಶಕ್ತಿಯೊಂದಿಗೆ ವಿಕಸಿತ ಭಾರತ ನಿರ್ಮಾಣ ಪ್ರಗತಿದಾಯಕವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಹಿಳಾ ಶಕ್ತಿಗೆ ಅಗತ್ಯವಿರುವ ಕಟ್ಟಡಗಳ ನಿರ್ಮಾಣ ಅವರ ಅಭ್ಯುದಯಕ್ಕೆ ಪೂರಕವಾಗಿವೆ ಎಂದು ಕೊಡಗು ಸಂಸದ ಯದುವೀರ್ ಹೇಳಿದರು.
ಗ್ರಾಮೀಣ ಭಾಗದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಯೋಜನೆಯ ಹೆಸರು ಬದಲಾವಣೆ ಮುಖ್ಯವಲ್ಲ.
ಗ್ರಾಮೀಣ ಕೌಶಲ್ಯ ಅಭಿವೃದ್ಧಿಗೆ ಬೇಕಾದ ಸವಲತ್ತುಗಳು ಹೊಸ ಹೆಸರಿನಲ್ಲಿ ಅಡಕವಾಗಿದೆ. ಆದರೆ ಕಾಂಗ್ರೆಸ್ ನವರ ಅಪಪ್ರಚಾರ ಸಲ್ಲದು. ಮನರೇಗಾ ಆ ಕಾಲ ಘಟ್ಟಕ್ಕೆ ಆಗಿದ್ದು ಸರಿ. ಆದರೆ ಈಗ ಸ್ವಾವಲಂಬಿಗಳಾಗಲೂ ಜಿ ರಾಮ್ ಜಿಯಂತಹ ಹೊಸ ಹೊಸ ಯೋಜನೆಗಳ ಅನುಷ್ಠಾನ ಹಾಗೂ ಸವಲತ್ತುಗಳ ಅಗತ್ಯವಿದೆ ಎಂದು ಸಂಸದರು ಸಮರ್ಥಿಸಿಕೊಂಡರು.ರಾಜ್ಯ ಸರ್ಕಾರಗಳ ಉಚಿತ ಗ್ಯಾರಂಟಿ ಯೋಜನೆಗಳಿಂದಾಗಿ ಗ್ರಾಮೀಣ ಭಾಗದ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿಗಳು ಆಗುತ್ತಿಲ್ಲ ಎಂದು ಹೇಳಿದರು.ಸುಸಜ್ಜಿತ ರಸ್ತೆಗಳಿಲ್ಲದೆ ಉಚಿತ ಬಸ್ ಕೊಟ್ಟು ಏನು ಪ್ರಯೋಜನವಿಲ್ಲ. ಬಸ್ ನಲ್ಲಿ ಉಚಿತವಾಗಿ ತೆರಳುವವರಿಗೆ ಕೆಲಸಗಳೇ ಇಲ್ಲ ಎಂದು ಸಂಸದರು ಹೇಳಿದರು.ಜಲಜೀವನ್ ಯೋಜನೆಯ ಕುಡಿವ ನೀರಿನ ಸಮರ್ಪಕ ಪೂರೈಕೆಗೆ ಒತ್ತು
ನೀಡಲಾಗುತ್ತಿದೆ.ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಭ್ರೂಣದಿಂದ ಬೂದಿಯಾಗುವವರೆಗೂ ಹೆಣ್ಣು ಮಕ್ಕಳು ಈ ಹಿಂದೆ ಸಾಕಷ್ಟು ಶೋಷಣೆಗೊಳಗಾಗಿದ್ದರು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಮುನ್ನುಡಿ ಬರೆಯಲಾಯಿತು. ಮರದಡಿ, ಬೇರೆ ಬೇರೆ ಮನೆಯಂಗಳದಲ್ಲಿ ಮಹಿಳಾ ಚಟುವಟಿಕೆಗಳ ಮನಗಂಡು ಇಂತಹ ಸ್ತ್ರೀ ಶಕ್ತಿ ಭವನ ನಿರ್ಮಾಣ ಹೆಮ್ಮೆಯ ಸಂಗತಿ.ಅತಿ ದೊಡ್ಡ ಜನಸಂಖ್ಯೆ ಇರುವ ಹೆಬ್ಬಾಲೆ ಗ್ರಾಮದ ವ್ಯಾಪ್ತಿಯ ಜನರಿಗೆ ಉದ್ಯೋಗ ಒದಗಿಸಲು ಕೈಗಾರಿಕಾ ನಿರ್ಮಾಣ, ಶಿಕ್ಷಣ ಸಂಸ್ಥೆಗಳು ಈ ಹಿಂದೆ ಆಗಬೇಕಿತ್ತು.ಆದರೆ, ನಮ್ಮನ್ನಾಳುವ ಜನಪ್ರತಿನಿಧಿಗಳ ಮನಸ್ಥಿತಿಯಿಂದಾಗಿ ಈ ಭಾಗ ಅಭಿವೃದ್ಧಿ ಯಿಂದ ಕಡೆಗಣಿಸಿದೆ.ಇದೀಗ ಹೋಬಳಿ ಕೇಂದ್ರವಾಗುವ ಮೂಲಕ ಹೆಬ್ಬಾಲೆ ಗ್ರಾಮ ಸಾಮೂಹಿಕ ಅಭಿಪ್ರಾಯಗಳ ಮೂಲಕ ಸಾಕಷ್ಟು ಅಭಿವೃದ್ದಿಯಾಗಬೇಕು ಎಂದರು.ಜಲಜೀವನ್ ಯೋಜನೆ ಇನ್ನೂ ಕೂಡ ಪೂರ್ಣಗೊಳ್ಳದ ಬಗ್ಗೆ ಹೇಳಿದ ಶಶಿಧರ್, ಈ ಬಗ್ಗೆ ಸಂಸದರು ಹೆಚ್ಚಿನ ಒತ್ತು ನೀಡುವ ಮೂಲಕ ಕೇಂದ್ರದ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿದರು.
ಹೆಬ್ಬಾಲೆ ಗ್ರಾಪಂ ಅಧ್ಯಕ್ಷೆ ಅರುಣ ಕುಮಾರಿ ಮಾತನಾಡಿ, ಪಿಡಿಒ ಇಲ್ಲದೆ ಪಂಚಾಯಿತಿ ಯಲ್ಲಿ ಸದಸ್ಯರ ನಡುವೆ ಸಾಮರಸ್ಯವಿಲ್ಲದೆ ಒಳ್ಳೆಯ ಕೆಲಸಗಳು ನನೆಗುದಿಗೆ ಬಿದ್ದಿವೆ ಎಂದು ವಿಷಾದಿಸಿದ ಅರುಣ ಕುಮಾರಿ, ಈ ಭಾಗದ ಮಹಿಳೆಯರಿಗೆ ಅತಿ ಅಗತ್ಯವಿದ್ದ ಸ್ತ್ರೀ ಶಕ್ತಿ ಭವನ ನಿರ್ಮಾಣ ಹೆಮ್ಮೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.ತಾಪಂ ಕಾರ್‍ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಸಹಾಯಕ ನಿರ್ದೇಶಕ ರಾಕೇಶ್, ಜಿಪಂ ಮಾಜಿ ಅಧ್ಯಕ್ಷ ಎಚ್.ಎಸ್. ಅಶೋಕ್, ಗ್ರಾಪಂ ಉಪಾಧ್ಯಕ್ಷೆ ಲತಾ ತಮ್ಮಯ್ಯ, ಸದಸ್ಯರಾದ ಎಚ್.ಸಿ. ಮಹದೇವ, ಮಹೇಶ್, ಚಂದ್ರಶೇಖರ್ ಜೋಗಿ, ನಾರಾಯಣ, ಎಚ್.ಪಿ. ತನು ಕುಮಾರ್, ಎಚ್.ಬಿ. ರತ್ನಮ್ಮ, ಪುಟ್ಟಲಕ್ಷ್ಮಮ್ಮ, ಯಶಸ್ವಿನಿ, ಪವಿತ್ರ, ಕವಿತಾ, ಗ್ರಾಪಂ ಪಿಡಿಒ ರವಿಕುಮಾರ್, ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಸ್. ರಘು, ಹೆಬ್ಬಾಲೆ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ವಿ. ಶಿವಪ್ಪ,
ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಇದ್ದರು.