ಮಹಿಳೆಯರು ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು

KannadaprabhaNewsNetwork |  
Published : Jan 04, 2025, 12:31 AM IST

ಸಾರಾಂಶ

ಸಮಾಜದಲ್ಲಿ ಶಿಕ್ಷಣವಿದ್ದರೆ ಮಾತ್ರ ಘನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆ ಸಂಯುಕ್ತಾಶ್ರಯದಲ್ಲಿ ತುಮಕೂರು ಸ್ಲಂ ಭವನದಲ್ಲಿ ಸಾವಿತ್ರಿ ಬಾಪುಲೆರವರ ಜಯಂತಿಯಲ್ಲಿ ಸಾವಿತ್ರಿ ಬಾಯಿಪುಲೆರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಸಮಾಜದಲ್ಲಿ ಶಿಕ್ಷಣವಿದ್ದರೆ ಮಾತ್ರ ಘನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆ ಸಂಯುಕ್ತಾಶ್ರಯದಲ್ಲಿ ತುಮಕೂರು ಸ್ಲಂ ಭವನದಲ್ಲಿ ಸಾವಿತ್ರಿ ಬಾಪುಲೆರವರ ಜಯಂತಿಯಲ್ಲಿ ಸಾವಿತ್ರಿ ಬಾಯಿಪುಲೆರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಇಂದು ಆಸ್ತಿ, ಭೂಮಿ, ಮನೆ ಅಥವಾ ಚಿನ್ನಕ್ಕಿಂತ ಶಿಕ್ಷಣವೇ ಮನುಷ್ಯನಿಗೆ ದೊಡ್ಡ ಆಸ್ತಿ, 1848 ರಲ್ಲಿ ಪತಿ ಜ್ಯೋತಿಬಾಪುಲೆರವರ ಸಹಕಾರದೊಂದಿಗೆ ತಳಸಮುದಾಯಗಳ ಹೆಣ್ಣುಗಳಿಗೆ ಪುಣೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ಕೂಲಿ ಕಾರ್ಮಿಕರಿಗೆ ರಾತ್ರಿ ಶಾಲೆ ಪ್ರಾರಂಭಿಸಿ ದಲಿತರಿಗಾಗಿ ಮನೆಯ ಬಾವಿಯಲ್ಲಿ ಕುಡಿಯುವ ನೀರನ್ನು ಬಿಟ್ಟುಕೊಟ್ಟರು, ಭಾರತದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಾವಿತ್ರಿ ಬಾಯಿಪುಲೆರವರ ಕೊಡುಗೆ ಅಪಾರವಾಗಿದೆ ಎಂದರು.

ಬ್ರಿಟಿಷ್ ಸರ್ಕಾರ ಇವರ ಸೇವೆಯನ್ನು ಶ್ಲಾಘಿಸಿ ಇಂಡಿಯನ್ ಫಸ್ಟ್ ಲೇಡಿ ಟೀಚರ್ ಎಂಬ ಬಿರುದು ಕೊಟ್ಟಿದೆ. ಅವರ ಪರಿಶ್ರಮದಿಂದಲೇ ಹೆಣ್ಣು ಮಕ್ಕಳು ಭಾರತದಲ್ಲಿ ಉನ್ನತ ಸ್ಥಾನಗಳಿಗೆ ಹೋಗಲು ಸಾಧ್ಯವಾಗಿದೆ ಎಂದರು.19ನೇ ಶತಮಾನದಲ್ಲಿ ಸತ್ಯಶೋಧಕ ಸಮಾಜದಿಂದ ಮಹಿಳಾ ವಿಮೋಚನೆಗಾಗಿ ಕನಸು ಕಟ್ಟಿಕೊಟ್ಟ ಮೊಟ್ಟ ಮೊದಲ ಮಹಿಳಾ ಹೋರಾಟಗಾರ್ತಿಯಾಗಿ ಸಾವಿತ್ರಿ ಬಾಯಿಪುಲೆಯವರು ಶ್ರಮಿಸಿರುವುದರಿಂದ ಮಹಿಳಾ ಹಕ್ಕುಗಳು ದೊರೆತಿದೆ. ಅವರ ಸುಧಾರಣೆಗಳು ಇಂದು ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳಾಗಿ ಜಾರಿಯಾಗುತ್ತಿವೆ, ನಾವೆಲ್ಲರೂ ಅಸಮಾನತೆಯನ್ನು ತೊಡೆದುಹಾಕುವ ಪಣತೊಡಬೇಕಿದೆ ಎಂದರು.

ಆಧುನಿಕ ಸಮಾಜದಲ್ಲಿ ಸಾಕಷ್ಟು ಅವಕಾಶಗಳು ಮಹಿಳೆಯರಿಗಿವೆ, ಇವುಗಳನ್ನು ಪಡೆದುಕೊಳ್ಳಲು ಮುಂದಾದರೆ ಸವಾಲುಗಳು ಎದುರಾಗುತ್ತವೆ. ಈ ಸವಾಲುಗಳನ್ನು ಮೆಟ್ಟಿನಿಂತು ಆತ್ಮ ವಿಶ್ವಾಸದಿಂದ ಮುನ್ನುಗಿದ್ದರೆ ಗೆಲುವು ಖಚಿತವೆಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ ಅಶ್ವಿಜ ರವರು ಸಾವಿತ್ರಿ ಬಾಯಿಪುಲೆ ರವರ ಬಾಲ್ಯ ಜೀವನವನ್ನು ಸ್ಮರಿಸುತ್ತ 1831ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂವ್‌ನಲ್ಲಿ ಹುಟ್ಟಿದರು ಬಾಲ್ಯದಲ್ಲೇ ಜ್ಯೋತಿ ಬಾಪುಲೆರವರನ್ನು ಮದುವೆಯಾಗಿ ವಿದ್ಯಾಭ್ಯಾಸವನ್ನು ಕಲಿತರು. 150 ವರ್ಷಗಳ ಹಿಂದೆ ಶಾಲೆಯನ್ನು ತೊರೆದ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಯೋಜನೆ ಸತ್ಯಶೋಧಕ ಸಮಾಜದಿಂದ ಮಾಡಿದರು ಎಂದರು.

19ನೇ ಶತಮಾನದಲ್ಲಿ ಮಹಿಳೆಯರಿಗೆ ಶಿಕ್ಷಣದ ಬಾಗಿಲು ತೆರೆಯದ ಸಂದರ್ಭದಲ್ಲಿ ಅಂದಿನ ಸಮಾಜದ ಕಟ್ಟುಪಾಡುಗಳ ಸುಧಾರಣೆಗಾಗಿ ಎಷ್ಟೇ ಅಪಮಾನಗಳಾದರೂ ತಡೆದುಕೊಂಡು ಸಮಾಜ ಸುಧಾರಣೆಗೆ ಪ್ರಯತ್ನಿಸಿದರು. ಅವರ ಈ ಸ್ಫೂರ್ತಿಯಿಂದ ಮಹಿಳೆಯರು ಇಂದು ಆಧುನಿಕ ಭಾರತದಲ್ಲಿ ಪ್ರಾಧಾನ್ಯತೆ ಪಡೆಯಲು ಸಾಧ್ಯವಾಗಿದೆ ಎಂದರು.

ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಕಾರ್ಯದರ್ಶಿ ಅನುಪಮಾ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕ ನುಡಿಗಳನ್ನು ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ. ನರಸಿಂಹಮೂರ್ತಿ ಆಡಿದರು. ವೇದಿಕೆಯಲ್ಲಿ ತೃತೀಯ ಲಿಂಗಿಗಳ ಮುಖಂಡರಾದ ದೀಪಿಕಾ, ನಿವೇಶನ ರಹಿತ ಹೋರಾಟ ಸಮಿತಿಯ ಮಂಗಳಮ್ಮ, ಪೂರ್ಣಿಮಾ, ಸುಧಾ, ತುಮಕೂರು ಸ್ಲಂ ಸಮಿತಿಯ ಶಾರದಮ್ಮ, ಗುಲ್ನಾಜ್, ಮಹದೇವಮ್ಮ ಉಪಸ್ಥಿತರಿದ್ದರು.

ಅರುಣ್ ಸ್ವಾಗತಿಸಿ, ತಿರುಮಲಯ್ಯ ನಿರೂಪಿಸಿದರು, ಕೃಷ್ಣಮೂರ್ತಿ ವಂದಿಸಿದರು, ತುಮಕೂರು ಸ್ಲಂ ಸಮಿತಿ ಕಲಾ ತಂಡದಿಂದ ಪರಿವರ್ತನಾ ಗೀತೆಗಳನ್ನು ಹಾಡಲಾಯಿತು. ಕಾರ್ಯಕ್ರಮದ ನೇತೃತ್ವವನ್ನು ಪದಾಧಿಕಾರಿಗಳಾದ ಶಂಕ್ರಯ್ಯ, ಕಣ್ಣನ್, ಗಣೇಶ್, ಧನಂಜಯ್, ಮನೋಜ್, ಚಿಕ್ಕಗಂಗಮ್ಮ, ವೆಂಕಟೇಶ್, ಪುಟ್ಟರಾಜು, ನಂಜಮ್ಮ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ