ಮಹಿಳೆಯರಿಗೆ ಕಾನೂನು ಜ್ಞಾನ ಅರಿವು ಅವಶ್ಯ

KannadaprabhaNewsNetwork |  
Published : Nov 10, 2024, 01:35 AM ISTUpdated : Nov 10, 2024, 01:36 AM IST
ಕಾರ್ಯಾಗಾರದಲ್ಲಿ ಸಿಕಂದರ ಎಂ.‌ಆರಿ ಮಾತನಾಡಿದರು. | Kannada Prabha

ಸಾರಾಂಶ

ಸಂವಿಧಾನದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಸವಲತ್ತು ನೀಡಿದ್ದು, ಮಹಿಳೆಯರು ಯಾವುದೇ ಕಾನೂನು ನೆರವು ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶ

ಗದಗ: ಪ್ರಸುತ್ತ ಸಮಾಜದಲ್ಲಿ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ಮಾನಸಿಕ ಕಿರುಕಳು, ಲೈಂಗಿಕ ಹಿಂಸೆ, ದೌರ್ಜನ್ಯ, ಖಿನ್ನತೆ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳಿಗೆ ಸಿಲುಕಿ ಜೀವನ ನಡೆಸಲು ಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಮಹಿಳೆಯರಗೋಸ್ಕರ‌ ಇರುವ ವಿಶೇಷ ಕಾನೂನು ಜ್ಞಾನ ಹೊಂದುವುದು ಅತಿ ಅವಶ್ಯವಾಗಿದೆ ಎಂದು ಕಾನೂನು ವಿದ್ಯಾರ್ಥಿ ಸಿಕಂದರ್‌ ಎಂ.‌ಆರಿ ಹೇಳಿದರು.‌

ನಗರದದ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದ ಕಾನೂನು ಅರಿವು ಘಟಕದ ವತಿಯಿಂದ ಜರುಗಿದ ಕಾನೂನು ಅರಿವು ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಇರುವ ತಮ್ಮ ಹಕ್ಕು ಪಡೆದುಕೊಂಡು ಜೀವನ ಮಟ್ಟ ಶೋಷಣೆ ಸುಧಾರಿಸಲು ಹಾಗೂ ಅವರಲ್ಲಿರುವ ಭಯ ಹೋಗಲಾಡಿಸಲು ಮಹಿಳೆಯರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಹಲವಾರು ಕಾನೂನುಗಳಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳುವ ಕುರಿತಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಹೆಚ್ಚೆಚ್ಚು ಆಗಬೇಕಿದೆ ಎಂದರು.

ಸಂವಿಧಾನದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಸವಲತ್ತು ನೀಡಿದ್ದು, ಮಹಿಳೆಯರು ಯಾವುದೇ ಕಾನೂನು ನೆರವು ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಗೃಹ ಸಂಬಂಧಿ ಹಿಂಸೆಯಿಂದ ಮಹಿಳೆಯರ ರಕ್ಷಣೆ ಅಧಿನಿಯಮ 2005 ಇದ್ದು, ವಿಶೇಷವಾಗಿ ಕುಟುಂಬದಲ್ಲಿನ ಮಹಿಳೆಯರ ಮೇಲೆ ನಿತ್ಯ ಶೋಷಣೆ ನಡೆಯುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸರ್ಕಾರ ಈ ಅಧಿನಿಯಮ ಜಾರಿಗೆ ತರಲಾಗಿದೆ. ಈ ಅಧಿನಿಯಮ ಅಡಿಯಲ್ಲಿ ಮಹಿಳೆಯರು ಸಮಸ್ಯೆ ಎದುರಿಸುತ್ತಿದ್ದರೆ, ಸಮೀಪದ ಪೊಲೀಸ್ ಠಾಣೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸರ್ಕಾರಗಳಿಂದ ಸ್ಥಾಪಿತವಾದ ಸೇವಾ ಕೇಂದ್ರಗಳಲ್ಲಿ ಮಹಿಳಾ ದೌರ್ಜನ್ಯ ಸಮಿತಿ ಅಥವಾ ನ್ಯಾಯಾಲಯದಲ್ಲಿ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು. ಒಂದು ವೇಳೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿದ್ದರೆ ಕಾನೂನು ಸೇವಾ ಪ್ರಾಧಿಕಾರಗಳಲ್ಲಿ ಉಚಿತವಾಗಿ ನ್ಯಾಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಕಾನೂನು ವಿದ್ಯಾರ್ಥಿ ಶಿಲ್ಪಾ ಮಂಜಪ್ಪನವರ ಮಾತನಾಡಿ, ಮಹಿಳೆ ಹಕ್ಕುಗಳ ಉಲ್ಲಂಘನೆಯಾದಾಗ ಅದರ ವಿರುದ್ಧ ಧ್ವನಿ ಎತ್ತಲು ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯವಾಗಿದೆ.‌ ಮಹಿಳೆ ಹೆಚ್ಚಾಗಿ ಖಾಸಗಿ ವಲಯದಲ್ಲಿ ಸಕ್ರೀಯಳಾಗಿರುವುದರಿಂದ ಅವಳು ಎದುರಿಸುವ ಸಮಸ್ಯೆಗಳು, ಶೋಷಣೆ, ದೌರ್ಜನ್ಯ ಹೆಚ್ಚು ಚರ್ಚೆಗೆ ಬರುವುದಿಲ್ಲ. ಮಹಿಳೆಯರ ವಿಷಯದಲ್ಲಿ ಸಂಕೀರ್ಣತೆ ಇರುವುದರಿಂದ ಅವರಿಗೆ ಮಹಿಳಾ ಕಾನೂನುಗಳ ಕ್ರಮಬದ್ಧವಾದ ಮಾಹಿತಿ ಅವಶ್ಯಕವಾಗಿದೆ ಎಂದರು.

ಕಾನೂನು ವಿದ್ಯಾರ್ಥಿ ಪಲ್ಲವಿ ಅರಟಗಲ್ ಮಾತನಾಡಿ, ಉದ್ಯೋಗ ಸ್ಥಳದಲ್ಲಿನ ಹಕ್ಕು, ಸಾಂಸ್ಥಿಕ ಕಾನೂನು, ಸಮಾನ ವೇತನ, ಕೌಟುಂಬಿಕ ಕಾನೂನು ಶೋಷಣೆಯ ವಿರುದ್ಧ ಪ್ರಶ್ನಿಸುವ ಹಕ್ಕಿನ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಮಹಿಳೆಯರ ಸಮಾನತೆಗೆ ಹಿಂದಿನಿಂದಲೂ ಹೋರಾಟ ನಡೆಯುತ್ತಲೆ ಬಂದಿದೆ. ಮಹಿಳೆಯರ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗಾಗಿಯೇ ಮಹಿಳಾ ಆಯೋಗ ಹಾಗೂ ಸರ್ಕಾರಗಳು ಶ್ರಮಿಸುತ್ತಿವೆ ಎಂದರು.

ಈ ವೇಳೆ ಬಸವೇಶ್ವರ ಕಾಲೇಜಿನ ಪ್ರಾ. ಎಂ.ಎಂ. ಬುರುಡಿ, ಉಪನ್ಯಾಸಕಿ ವನಜಾ ಬಿಂಗಿ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.‌

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ