ಕನ್ನಡಪ್ರಭ ವಾರ್ತೆ ಪಾವಗಡ
ರಾಜಕೀಯ ಸೇರಿದಂತೆ ಎಲ್ಲ ರಂಗಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರಿಗೆ ರಾಜಕೀಯ ಪ್ರಾಶಸ್ತ್ಯ ಸಿಗಬೇಕು. ಇದರಿಂದ ಗ್ರಾಮ ಹಾಗೂ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದು ಸಂಸದ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು. ಒಕ್ಕಲಿಗ ಸಮುದಾಯದ ವತಿಯಿಂದ ತಾಲೂಕಿನ ಕೆ.ಟಿ ಹಳ್ಳಿ ಗ್ರಾಮದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಮತ್ತು ಜಯಂತ್ಯುತ್ಸವ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಅಭಿವೃದ್ಧಿಯಲ್ಲಿ ಮಹಿಳೆಯರಿಗೆ ಹೆಚ್ಚು ಬದ್ದತೆ ಇದ್ದು, ಈ ದೇಶ ಸಮಗ್ರ ಪ್ರಗತಿ ಕಾಣಬೇಕಾದರೆ ಮಹಿಳೆಯರಿಗೆ ಹೆಚ್ಚು ಮೀಸಲಾತಿ ಸೌಲಭ್ಯ ಸಿಗಬೇಕು. ಆ ನಿಟ್ಡಿನಲ್ಲಿ ಜನಪ್ರತಿನಿಧಿಗಳು ಬದ್ಧತೆ ಪ್ರದರ್ಶಿಸಬೇಕು. ಇಂದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಕಾರಣೀಭೂತರಾಗಿದ್ದು ಸಂತಸ ತಂದಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಈ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಒತ್ತು ನೀಡಿದೆ. ತುಂಗಭದ್ರಾ ಕುಡಿಯುವ ನೀರು ಈಗಾಗಲೇ ಅನುಷ್ಠಾನವಾಗಿದೆ. ಅಂತರ್ಜಲ ಹೆಚ್ಚಳಕ್ಕೆ ಕೆರೆಗಳಿಗೆ ನೀರು ತುಂಬಿಸಲು ಭದ್ರಾ ಮೇಲ್ಡಂಡೆ ಪ್ರಗತಿಯಲಿದ್ದು ಇದರ ಜತೆ ಹೇಮಾವತಿ ಹಾಗೂ ಎತ್ತಿನಹೊಳೆಯ ಮೇಕೆದಾಟು ಯೋಜನೆಯ ನೀರು ಪೂರೈಕೆ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.ಶಾಸಕ, ತುಮುಲ್ ಅಧ್ಯಕ್ಷ ಎಚ್.ವಿ. ವೆಂಕಟೇಶ್ ಮಾತನಾಡಿ ತಾಲೂಕಿನ ಒಕ್ಕಲಿಗ ಸಮುದಾಯದ ಪ್ರಗತಿಗೆ ವಿಶೇಷ ಆದ್ಯತೆ ನೀಡಿದ್ದು, ಮಾಜಿ ಸಚಿವ ವೆಂಕಟರಮಣಪ್ಪ ಮಾರ್ಗದರ್ಶನ ಹಾಗೂ ನಿಮ್ಮೆಲ್ಲರ ಸಹಕಾರದ ಮೇರೆಗೆ ,ಇನ್ನೂ ಹೆಚ್ಚು ಒತ್ತು ನೀಡುವುದಾಗಿ ಹೇಳಿದರು.
ಈ ವೇಳೆ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮಿಜೀ ದಿವ್ಯ ಸಾನ್ನಿಧ್ಯವಹಿಸಿ ಅರ್ಶೀವಾಚನ ನೀಡಿದರು. ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಮಾತನಾಡಿದರು.ತಾಳೆಮರದಹಳ್ಳಿ ನರಸಿಂಹಯ್ಯ, ತುಮುಲ್ ನಿರ್ದೇಶಕ ಎಸ್.ಆರ್ .ಗೌಡ, ಎನ್.ತಿಮ್ಮಾರೆಡ್ಡಿ, ಆರ್.ಸಿ.ಅಂಜಿನಪ್ಪ, ಮಹೇಶ್ , ರಂಗೇಗೌಡ,ದೊಡ್ಡ ಹನುಮಂತರಾಯಪ್ಪ, ಅಧ್ಯಕ್ಷ ಎನ್.ಎ.ಈರಣ್ಣ, ಡಿ.ಮಂಜುನಾಥ್, ಗೋಪಿ, ಕರಿಯಣ್ಣ, ಹನುಮಂತರಾಯಪ್ಪ ಇತರರಿದ್ದರು.