ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿಗೆ ಮಹಿಳೆಯರ ವಿರೋಧ

KannadaprabhaNewsNetwork |  
Published : Sep 19, 2025, 01:00 AM IST
18ಎಚ್ಎಸ್ಎನ್5 : ಆರಂಭವಾಗಲಿರುವ ಮದ್ಯದಂಗಡಿ ಎದುರು ಪ್ರತಿಭಟನೆ ನಡೆಸಿದ ಸ್ಥಳೀಯರು. | Kannada Prabha

ಸಾರಾಂಶ

ಚೆಲುವರಾಯಸ್ವಾಮಿ ಲೇಔಟ್‌ನಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವುದನ್ನು ಸ್ಥಳೀಯ ಮಹಿಳೆಯರು ಮತ್ತು ನಿವಾಸಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ರಾತ್ರೋರಾತ್ರಿ ಪರವಾನಗಿ ಪಡೆದು ಅಂಗಡಿಯನ್ನು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ಸ್ಟಾಕ್ ತಂದು ಇಡಲಾಗಿದೆ. ಇಲ್ಲಿಯವರೆಗೆ ನಾವು ಭಯವಿಲ್ಲದೆ ಎಲ್ಲ ಹೊತ್ತಿನಲ್ಲೂ ಓಡಾಡುತ್ತಿದ್ದೇವೆ. ಆದರೆ ಅಂಗಡಿ ಆರಂಭವಾದರೆ ಮಹಿಳೆಯರು ಮತ್ತು ಮಕ್ಕಳು ಸಂಕಷ್ಟ ಅನುಭವಿಸಬೇಕಾಗುತ್ತದೆ. ನಮ್ಮ ಶಾಂತಿಯುತ ಬದುಕನ್ನು ಹಾಳು ಮಾಡಬೇಡಿ ಎಂದು ಅಳಲು ತೋಡಿಕೊಂಡರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಸುತ್ತಮುತ್ತಲಿನ ಗ್ರಾಮಗಳಿಗೆ ಹೋಗುವ ಮುಖ್ಯ ಮಾರ್ಗದ ಪಕ್ಕ ನಗರದ ಚೆಲುವರಾಯಸ್ವಾಮಿ ಲೇಔಟ್‌ನಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವುದನ್ನು ಸ್ಥಳೀಯ ಮಹಿಳೆಯರು ಮತ್ತು ನಿವಾಸಿಗಳು ತೀವ್ರವಾಗಿ ವಿರೋಧಿಸಿದ್ದಾರೆ.

ಗುರುವಾರ ಬೆಳಿಗ್ಗೆ ಅವರು ನಿರ್ಮಾಣ ಹಂತದ ವೈನ್‌ಶಾಪ್ ಮುಂದೆ ಶಾಮಿಯಾನ ಹಾಕಿಕೊಂಡು ಧರಣಿ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ಪಲ್ಲವಿ ಮಾಧ್ಯಮದೊಂದಿಗೆ ಮಾತನಾಡಿ, ಈ ಪ್ರದೇಶವು ಶಾಂತಿಯುತವಾಗಿದ್ದು, ಬೆಳಗ್ಗೆ ಹಾಗೂ ಸಂಜೆ ಹೊತ್ತು ಮಹಿಳೆಯರು, ಪುರುಷರು, ವೃದ್ಧರು ವಾಯುವಿಹಾರಕ್ಕೆ ಬರುತ್ತಾರೆ. ಶಾಲೆ ಕೂಡ ಹತ್ತಿರದಲ್ಲಿದ್ದು, ಮಕ್ಕಳು ಓಡಾಡುವ ಜಾಗದಲ್ಲಿ ಮದ್ಯದಂಗಡಿ ಆರಂಭಿಸುವುದು ಸಂಪೂರ್ಣ ತಪ್ಪು. ಅನೇಕ ಶಾಲಾ ವಾಹನಗಳು ಈ ವೃತ್ತದಲ್ಲೇ ನಿಲ್ಲುತ್ತವೆ. ದಾರಿಯೂ ಚಿಕ್ಕದಾಗಿದೆ. ಈ ಭಾಗದಲ್ಲಿ ಲಿಕ್ಕರ್ ಶಾಪ್ ತೆರೆಯುವುದರಿಂದ ಸಮಸ್ಯೆಗಳು ಹೆಚ್ಚುತ್ತವೆ ಎಂದು ತಿಳಿಸಿದರು.

ರಾತ್ರೋರಾತ್ರಿ ಪರವಾನಗಿ ಪಡೆದು ಅಂಗಡಿಯನ್ನು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ಸ್ಟಾಕ್ ತಂದು ಇಡಲಾಗಿದೆ. ಇಲ್ಲಿಯವರೆಗೆ ನಾವು ಭಯವಿಲ್ಲದೆ ಎಲ್ಲ ಹೊತ್ತಿನಲ್ಲೂ ಓಡಾಡುತ್ತಿದ್ದೇವೆ. ಆದರೆ ಅಂಗಡಿ ಆರಂಭವಾದರೆ ಮಹಿಳೆಯರು ಮತ್ತು ಮಕ್ಕಳು ಸಂಕಷ್ಟ ಅನುಭವಿಸಬೇಕಾಗುತ್ತದೆ. ನಮ್ಮ ಶಾಂತಿಯುತ ಬದುಕನ್ನು ಹಾಳು ಮಾಡಬೇಡಿ ಎಂದು ಅಳಲು ತೋಡಿಕೊಂಡರು.

ಈ ಪ್ರದೇಶದಲ್ಲಿ ದೊಡ್ಡಕೊಂಡಗುಳ, ಯಡಿಯೂರು, ರಾಜಾಜಿನಗರ, ದಾಸರಕೊಪ್ಪಲು, ಜಯನಗರ ಸೇರಿದಂತೆ ಅನೇಕ ಗ್ರಾಮಗಳಿಗೆ ಹೋಗುವ ದಾರಿ ಇದೆ. ಈಗಾಗಲೇ ಕೆಲವರು ಖಾಲಿ ಜಾಗದಲ್ಲಿ ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದಾರೆ. ಹೊಸದಾಗಿ ಅಂಗಡಿ ಆರಂಭವಾದರೆ ಪರಿಸ್ಥಿತಿ ಇನ್ನಷ್ಟು ಕೆಡುತ್ತದೆ. ಕುಡಿದವರ ಅಟ್ಟಹಾಸದಿಂದ ಮಹಿಳೆಯರು, ಮಕ್ಕಳು ಸುರಕ್ಷಿತವಾಗಿರುವುದೇ ಅನುಮಾನ ಎಂದು ಆತಂಕ ವ್ಯಕ್ತಪಡಿಸಿದರು. ಈ ಲೇಔಟ್ ಈಗಾಗಲೇ ಅಭಿವೃದ್ಧಿಯ ಹಾದಿಯಲ್ಲಿ ಇದೆ. ಮನೆಗಳು ನಿರ್ಮಾಣವಾಗುತ್ತಿವೆ. ಮದ್ಯದಂಗಡಿ ಬಂದರೆ ಜನರು ಇಲ್ಲಿ ನೆಲೆಸಲು ಹೆದರುತ್ತಾರೆ. ಈಗಾಗಲೇ ರಿಂಗ್ ರಸ್ತೆಯಿಂದ ಕುಡಿದವರ ಕಾಟ ಇದೆ. ಅದಕ್ಕೆ ಈ ಅಂಗಡಿ ಸೇರಿಸಿದರೆ ಪರಿಸ್ಥಿತಿ ನಿಯಂತ್ರಣ ತಪ್ಪುತ್ತದೆ. ಸರ್ಕಾರ ಇಂತಹ ಶಾಪ್‌ಗಳಿಗೆ ಅನುಮತಿ ನೀಡುವುದನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಮಹಿಳೆಯರೊಂದಿಗೆ ಪುರುಷರೂ ಸಹ ಪಾಲ್ಗೊಂಡು ಧ್ವನಿ ಎತ್ತಿದರು. ನಮಗೆ ಲಿಕ್ಕರ್ ಶಾಪ್ ಬೇಡ. ಬದಲಾಗಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಕೂಗಿದರು.

ಪ್ರತಿಭಟನೆಯಲ್ಲಿ ಕವಿತಾ, ರತ್ನ, ಕಮಲಮ್ಮ, ರೂಪ, ಶಿವಣ್ಣ, ಹೇಮಂತ್, ಆನಂದ್ ಸೇರಿದಂತೆ ಅನೇಕರು ಭಾಗವಹಿಸಿ ತಮ್ಮ ವಿರೋಧವನ್ನು ತೀವ್ರವಾಗಿ ವ್ಯಕ್ತಪಡಿಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ