ಕೊಪ್ಪಳ: ಪ್ರತಿಯೊಬ್ಬ ಮಹಿಳೆ ಮಾಸಿಕ ಋತುಚಕ್ರ ಸಂದರ್ಭದಲ್ಲಿ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಿ, ಸ್ಯಾನಿಟೆರಿ ಪ್ಯಾಡ್ ಬಳಕೆಗೆ ಒತ್ತು ನೀಡಬೇಕೆಂದು ಜಿಪಂ ಸ್ವಚ್ಛ ಭಾರತ ಮಿಷನ್ ಯೋಜನೆಯ ಸ್ಯಾನಿಟೇಷನ್ & ಹೈಜಿನ್ ಸಮಾಲೋಚಕಿ ಬಸಮ್ಮ ಹುಡೇದ ಕರೆ ನೀಡಿದರು.
ಮುಟ್ಟಿನ ಸಮಯದಲ್ಲಿ ಮಾಸಿಕ ಋತುಚಕ್ರ ನಿರ್ವಹಣೆ, ಶುಚಿಯಾದ ಬಟ್ಟೆ ಬಳಕೆ ಹಾಗು ಸ್ಯಾನಿಟೆರಿ ಪ್ಯಾಡ್ ಬಳಕೆಯಿಂದ ಆಗುವ ಅನುಕೂಲ, ವೈಯಕ್ತಿಕ ಶುಚಿತ್ವ ಕುರಿತು ಮಹತ್ವದ ಮಾಹಿತಿ ನೀಡಿದರು. ಮಹಿಳೆಯರ ವೈಯಕ್ತಿಕ ಶುಚಿತ್ವ ಹಾಗೂ ಸ್ಯಾನಿಟರಿ ಪ್ಯಾಡ್‌ಗಳ ಬಳಕೆ ಹಾಗೂ ಬಳಸಿದ ಪ್ಯಾಡ್ ಇನ್ಸಿನರೇಟರ್ ಮೂಲಕ ವೈಜ್ಞಾನಿಕ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು. ಇತ್ತೀಚಿನ ದಿನಗಳಲ್ಲಿ ನಾವು ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸದೇ ಇರುವದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇವೆ. ಮುಟ್ಟನ್ನು ಗುಟ್ಟನ್ನಾಗಿಸದೇ ಮುಟ್ಟನ್ನು ಒಗ್ಗೂಡಿಕೊಂಡು ಆರೋಗ್ಯದ ಬದಲಾವಣೆಗೆ ಮುನ್ನುಡಿ ಬರೆಯೋಣ ಎಂದು ಕರೆ ನೀಡಿದರು.
ಮಹಿಳೆಯರು ಋತುಚಕ್ರ ಸಂದರ್ಭದಲ್ಲಿ ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲು ಪ್ರತಿ ಗ್ರಾಪಂನಲ್ಲಿ ಬಳಕೆಯಾದ ಪ್ಯಾಡ್‌ಗಳನ್ನು ಸಂಗ್ರಹಿಸಿ ವೈಜ್ಞಾನಿಕ ನಿರ್ವಹಣೆ ಮಾಡಲು ಇನ್ಸಿನರೆಟರ್ ಅಳವಡಿಸಲಾಗುತ್ತಿದ್ದು, ಎಲ್ಲ ಮಹಿಳೆಯರು ಅವುಗಳಿಗೆ ನೀಡಬೇಕು. ಎಲ್ಲಿ ಬೇಕಾದಲ್ಲಿ ಬಿಸಾಡದೇ ಗ್ರಾಪಂ ವಾಹನಕ್ಕೆ ನೀಡಬೇಕು ಅಥವಾ ನಿಗದಿಪಡಿಸಿದ ಸ್ಥಳದಲ್ಲಿ ವಿಲೆವಾರಿ ಮಾಡಬೇಕು. ಬಯಲು ಶೌಚಕ್ಕೆ ಹೋಗುವದರಿಂದ ಅನೇಕ ರೋಗ ಹರಡುವ ಸಾಧ್ಯತೆ ಶೇ. 80 ರಷ್ಟು ಇರುತ್ತದೆ. ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಿಸಿ ವಾಹನಕ್ಕೆ ನೀಡಬೇಕೆಂದು ಕರೆ ನೀಡಿದರು.ಪಂಚಾಯತ ಅಭಿವೃದ್ಧಿ ಅಧಿಕಾರಿ ಅಶೋಕ ರಾಂಪುರ ಮಾತನಾಡಿ, ಮಹಿಳೆಯರಿಗೆ ವೈಯಕ್ತಿಕ ಶುಚಿತ್ವ ಎನ್ನುವದು ಆರೋಗ್ಯದ ಮೂಲಕ ಬುನಾದಿ. ಹಾಗಾಗಿ ಮಹಿಳೆಯರು ಸ್ವಚ್ಛತೆಗೆ ಹಾಗು ಶುಚಿತ್ವಕ್ಕೆ ಆದ್ಯತೆ ನೀಡಬೇಕೆಂದು ಕರೆ ನೀಡಿದರು.