ಕನ್ನಡಪ್ರಭ ವಾರ್ತೆ ಮಂಗಳೂರು
ನವೋದಯ ಸ್ವಸಹಾಯ ಗುಂಪುಗಳ ಮೂಲಕ ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ಡಾ.ಎಂ.ಎನ್. ರಾಜೇಂದ್ರ ಕುಮಾರ್ ನಿರಂತರವಾಗಿ ಮಾಡುತ್ತಾ ಆರ್ಥಿಕ ಸದೃಢತೆಗೆ ಕಾರಣರಾಗಿದ್ದಾರೆ. ಅಸಹಾಯಕರಿಗೆ ಸಹಾಯ ಮಾಡುವ, ಧ್ವನಿಯಿಲ್ಲದವರಿಗೆ ಧ್ವನಿ ನೀಡುವ ಈ ಕೈಂಕರ್ಯ ಮುಂದುವರಿಯಲಿ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಆಶಿಸಿದ್ದಾರೆ.ನವೋದಯ ಸ್ವಸಹಾಯ ಸಂಘಗಳ ರಜತ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ನವೋದಯ ಸ್ವಸಹಾಯ ಗುಂಪುಗಳನ್ನು ಸಂಘಟಿಸಿ ನಡೆಸಿಕೊಂಡು ಬರುತ್ತಿರುವುದು ಮಾದರಿ ಕಾರ್ಯ. ಹಳ್ಳಿಗಾಡಿನಲ್ಲಿ ಆರ್ಥಿಕ ಚಟುವಟಿಕೆ ನಡೆದರೆ ಮಾತ್ರ ರಾಜ್ಯ, ದೇಶದ ಆರ್ಥಿಕ ಸದೃಢತೆ ಸಾಧ್ಯ. ಈ ನಿಟ್ಟಿನಲ್ಲಿ ಆರಂಭವಾದ ನವೋದಯ ಸ್ವಸಹಾಯ ಸಂಘಗಳು ಇಂದು ಹೆಮ್ಮರವಾಗಿ ಬೆಳೆದಿವೆ. ಈ ಬದ್ಧತೆ ಮುಖ್ಯ. ಇದು ಐತಿಹಾಸಿಕ ಸಮಾವೇಶ ಎಂದು ಬಣ್ಣಿಸಿದರು.
ಡಾ. ರಾಜೇಂದ್ರ ಕುಮಾರ್ ಅವರು ಜನರ ಅಭ್ಯುದಯಕ್ಕಾಗಿ, ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. ಸಹಕಾರ ಸಚಿವನಾಗಿ ಇಂಥ ಜನಪರ ಕೆಲಸಗಳಿಗೆ ಯಾವ ಸಹಕಾರ ನೀಡಲೂ ಬದ್ಧ ಎಂದ ಕೆ.ಎನ್. ರಾಜಣ್ಣ, ಪಕ್ಷಾತೀತವಾಗಿ ಮುಂದುವರಿಯುತ್ತಿರುವ ಈ ಆಂದೋಲನ ಜನರ ಆಂದೋಲನವಾಗಿ ಮುಂದುವರಿಯಲಿ. ಜಾತಿ, ಧರ್ಮದ ಆಧಾರದಲ್ಲಿ ತೀರ್ಮಾನ ಮಾಡೋದು ಸಹಕಾರಿ ಆಂದೋಲನದಲ್ಲಿ ಇರಬಾರದು ಎಂದು ಹೇಳಿದರು.-------------ಸಮಾಜ ಕಟ್ಟುವ ಕೆಲಸ ಸಾಕಾರ: ಪೇಜಾವರ ಸ್ವಾಮೀಜಿ
ಮಾತೆಯರನ್ನು ಮುಂದಿಟ್ಟುಕೊಂಡು ಅವರ ಸಬಲೀಕರಣದೊಂದಿಗೆ ಸಮಾಜವನ್ನು ಕಟ್ಟುವ ಕೆಲಸ ಅತಿ ದೊಡ್ಡದು. ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಈ ಸಾಧನೆಯನ್ನು ಸಾಕಾರಗೊಳಿಸಿದ್ದಕ್ಕೆ ಅಭಿನಂದನಾರ್ಹರು ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವೀಮೀಜಿ ಹೇಳಿದ್ದಾರೆ.ಹೆತ್ತ ಕುಲ, ಹೊತ್ತ ಕುಲದ ಜವಾಬ್ದಾರಿ ಹೊತ್ತಿರುವ ಮಾತೆಯರನ್ನು ನವೋದಯ ಸಹಕಾರ ಸಂಘಗಳ ಮೂಲಕ ಡಾ.ರಾಜೇಂದ್ರ ಕುಮಾರ್ ಒಗ್ಗೂಡಿಸಿದ್ದಾರೆ, 25 ವರ್ಷಗಳಿಂದ ಈ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸೋದು ಸಣ್ಣ ಮಾತಲ್ಲ ಎಂದರು.
ಶತ್ರು ರಾಷ್ಟ್ರದ ವಿರುದ್ಧದ ಯುದ್ಧಕಾಲದಲ್ಲಿ ಮಾತ್ರವಲ್ಲದೆ ಸರ್ವ ಜನರ ಸಹಕಾರ ಎಲ್ಲ ಕಾಲಕ್ಕೂ ಸರ್ಕಾರಕ್ಕೆ ಬೇಕು. ಪರಸ್ಪರ ದ್ವೇಷ, ಅಸೂಯೆಯಿಂದ ಸಮಾಜದ ಶಾಂತಿ ಕೆಡದಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.------------ಸ್ವಸಹಾಯ ಗುಂಪು ಸೇರಿದ ಮೇಲೆ ‘ನವೋದಯ’
ಕಾಪು ಮಜೂರು ಗ್ರಾಮದ ನಂದಿನಿ ಸ್ವಸಹಾಯ ಸಂಘದ ಪ್ರಭಾವತಿ ಸಮಾರಂಭದಲ್ಲಿ ಮಾತನಾಡಿ, 25 ವರ್ಷಗಳ ಹಿಂದೆ ಮಜೂರು ಗ್ರಾಮದಲ್ಲಿ ನವೋದಯ ಸ್ವಸಹಾಯ ಸಂಘ ರಚನೆಯಾದಾಗ ಅದರ ಕಾರ್ಯದರ್ಶಿಯಾಗಿದ್ದೆ. ಅಲ್ಲಿಯವರೆಗೆ ಬ್ಯಾಂಕ್ ಎಂದರೇನು, ಬ್ಯಾಂಕಿಂಗ್ ವ್ಯವಹಾರ ಹೇಗೆ ನಡೆಸೋದು ಎಂಬುದೇ ಗೊತ್ತಿರಲಿಲ್ಲ. ಇದೆಲ್ಲ ಕಲಿತದ್ದೇ ನವೋದಯ ಸಂಘಕ್ಕೆ ಸೇರಿದ ನಂತರ. ಈ ಸಂಘಟನೆ ಮಹಿಳೆಯರ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಹೇಳಿದರು.