ಕನ್ನಡಪ್ರಭ ವಾರ್ತೆ, ಔರಾದ್
''''ಪೀನೆ ಕೋ ಪಾನಿ ನಹೀ ಹೈ, ಹಮೇ ಬಹುತ್ ತಕಲೀಫ್ ಹೊತಾ ಹೈ, ಬಚ್ಚೆ ಕೋ ಸಂಬಾಲನಾ ಕ್ಯಾ ಪಾನಿ ಲಾನಾ''''(ಕುಡಿಯಲು ನೀರಿಲ್ಲ, ನನಗೆ ತುಂಬಾ ಕಷ್ಟವಾಗುತ್ತೆ ಮಕ್ಕಳಿಗೆ ನೋಡಲಾ, ನೀರು ತರಲಾ) ಹೀಗೆ ಕಣ್ತುಂಬ ನೀರು ತಂದು ನೀರಿಗಾಗಿ ಕಷ್ಟ ಅನುಭವಿಸ್ತಿರುವ ತುಂಬು ಗರ್ಭಿಣಿ ನೋವು ತೊಡಿಕೊಂಡಿದ್ದಾರೆ.ತಾಲೂಕಿನ ಬೊಂತಿ ಗ್ರಾಮ ಪಂಚಾಯತ ವ್ಯಾಪ್ತಿಯ ಸಾವರಗಾಂವ್ ಗ್ರಾಮದ ಮೀನಾಬಾಯಿ ಎಂಬ ತುಂಬು ಗರ್ಭಿಣಿ ಮಹಿಳೆ ಕೈಯಲ್ಲಿ ನೀರಿನ ಬಿಂದಿಗೆ ಭುಜದ ಮೇಲೆ ಮಗು ಹೊತ್ತಕೊಂಡು ನೀರಿಗಾಗಿ ಅಲೆದಾಡಿ ದೂರದ ಬಾವಿಗಳಿಂದ ನೀರು ತಂದು ಬದುಕುತ್ತಿರುವ ಮನ ಕಲುಕುವ ಸಂಗತಿಗೆ ಸಾಕ್ಷಿಯಾದರು.
ಕಳೆದ ಒಂದು ವಾರದಿಂದ ಸಾವರಗಾಂವ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಜಲ ಜೀವನ್ ಮಿಶನ್ ಯೋಜನೆಯಡಿಯಲ್ಲಿ ಕೋಟ್ಯಂತರ ರು. ಖರ್ಚು ಮಾಡಲಾಗಿದೆ. ಆದರೆ ಅಪೂರ್ಣ ಕಾಮಗಾರಿ ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯತನದಿಂದಾಗಿ ಜನರು ನೀರಿಗಾಗಿ ನಿತ್ಯ ನರಕಯಾತನೆ ಅನುಭವಿಸುವಂಥ ಸ್ಥಿತಿ ನಿರ್ಮಾಣವಾಗಿದೆ ಅಂತಾರೆ ಗ್ರಾ.ಪಂ ಸದಸ್ಯ ಬಾಲಾಜಿ.ಇಲ್ಲಿ ಆಗಾಗ್ಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಎಂಬುದು ಗ್ರಾಮಸ್ಥರಿಗೆ ಅಭ್ಯಾಸವಾಗಿದೆ. ಆದ್ರೆ ಕಳೆದ ಒಂದು ವಾರದಿಂದ ನೀರಿನ ಸಮಸ್ಯೆ ತೀವ್ರಗೊಂಡು ಜನರು ನೀರಿಗಾಗಿ ಗ್ರಾಮದಿಂದ ಒಂದು ಕಿಲೋ ಮಿಟರ್ ದೂರದ ಅಂತರದ ತೆರೆದ ಬಾವಿಯಿಂದ ನೀರು ತರುವ ದುರಂತ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಚಳಿಗಾಲದಲ್ಲೇ ಈ ಪರಿ ನೀರಿನ ಬವಣೆ ತಾರಕಕ್ಕೇರಿದರೆ, ಇನ್ನೂ ಬೇಸಿಗೆ ಕಾಲದ ಸ್ಥಿತಿಯಂತೂ ಚಿಂತಾಜನಕಎಂದು ಸ್ಥಳೀಯ ಮುಖಂಡ ಹರಿದೇವ ಆತಂಕ ವ್ಯಕ್ತಪಡಿಸಿದ್ದಾರೆ.
ಜಲಜೀವನ್ ಮಿಷನ್ ಗುತ್ತಿಗೆದಾರ ಕಳಪೆ ಕಾಮಗಾರಿ ಮಾಡಿಕೊಂಡು ಹಣ ಗುಳುಂ ಮಾಡಿದ್ದಾನೆ. ಅಧಿಕಾರಿಗಳೂ ಇದರಲ್ಲಿ ಸಾಮೀಲಾಗಿದ್ದಾರೆ. ಇವರ ಮಧ್ಯೆ ಜನರು ಸಂಕಷ್ಟಕ್ಕೆ ಸಿಲುಕಿ ಒದ್ದಾಡ್ಡುವಂತಾಗಿದೆ. ಇಷ್ಟಾದರೂ ಒಬ್ಬನೇ ಒಬ್ಬ ಅಧಿಕಾರಿ ಇಂತ ತಿರುಗಿ ಕ್ಯಾರೆ ಅನ್ನುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಸುಧಾಕರ ಕೊಳ್ಳುರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ತುಂಬು ಗರ್ಭಿಣಿಯೊಬ್ಬಳ ಕಣ್ಣಿರಿನಿಂದಾದ್ರು ಸಂಬಂಧಪಟ್ಟ ಅಧಿಕಾರಿಗಳ ಮನ ಕರಗಿ ಮಾನವೀಯತೆ ದೃಷ್ಟಿಯಿಂದಲಾದರೂ ಸಾವರಗಾಂವ್ ಗ್ರಾಮದ ನೀರಿನ ಸಮಸ್ಯೆ ಬಗ ಹರಿಸಿ ಜನರ ನೋವಿಗೆ ಸ್ಪಂದಿಸುವಂತೆ ಗ್ರಾಮಸ್ಥರ ಒಕ್ಕೊರಲ ಮನವಿಯಾಗಿದೆ.
ಗ್ರಾಮೀಣ ನೀರು ಸರಬರಾಜು ಇಲಾಖೆ ಸಹಾಯಕ ಅಭಿಯಂತರ ಸುಭಾಷ ಧುಳಗುಂಡೆ ಮಾತನಾಡಿ, ಗುತ್ತಿಗೆದಾರ ಕೆಲಸ ಮಾಡುತ್ತಿದ್ದಾರೆ. ಇನ್ನು ಕಾಮಗಾರಿ ಆರಂಭ ವಾದದಂದಿನಿಂದಲೂ ಸ್ಥಳೀಯ ಕೆಲ ಮುಖಂಡರು ಸತತ ತಡೆ ಮಾಡುತ್ತಿದ್ದಾರೆ. ಹೀಗಾಗಿ ಕಾಮಗಾರಿಗೆ ವಿಳಂಬವಾಗಿದೆ. ಇನ್ನೂ ಕಾಮಗಾರಿ ಹ್ಯಾಂಡ್ ಓವರ್ ಮಾಡಕೊಂಡಿಲ್ಲ. ಸಮಸ್ಯೆ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದರು.ಸಾವರಗಾಂವ್ ನೀರಿನ ಬವಣೆ ಸದ್ಯದಲ್ಲೇ ನೀಗಿಸುವೆ: ಶಾಸಕಜಲ ಜೀವನ ಮಿಶನ್ ಯೋಜನೆ ಅಡಿಯಲ್ಲಿ ಕಳಪೆ ಕಾಮಗಾರಿಯಾಗಿರುವ ಕುರಿತು ಸಮಗ್ರ ವರದಿ ಮಾಡಿ ಈಗಾಗಲೇ ಸರ್ಕಾರಕ್ಕೆ ದೂರಿದ್ದೇನೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜನರಿಗೆ ತಲುಪಲು ಕೆಲ ಗುತ್ತಿಗೆದಾರರು ಬಿಡುತ್ತಿಲ್ಲ. ಅಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಳೆದ ನಾಲ್ಕು ತಿಂಗಳಿಂದಲೇ ಆಗ್ರಹಿಸಿದ್ದೇನೆ. ಸಾವರಗಾಂವ್ ಗ್ರಾಮದಲ್ಲಿನ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಪ್ರಭು ಚವ್ಹಾಣ ಭರವಸೆ ನೀಡಿದ್ದಾರೆ.