ಮಹಿಳೆಯರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ

KannadaprabhaNewsNetwork | Published : Apr 11, 2025 12:36 AM

ಸಾರಾಂಶ

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮೈಸೂರಿನ ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯು ಚಾಮರಾಜನಗರದ ಮರಿಯಾಲದ ಬಸವ ರಾಜೇಂದ್ರ ಆಸ್ಪತ್ರೆಯ ಸಹಯೋಗದೊಂದಿಗೆ ಮಹಿಳೆಯರ ಆರೋಗ್ಯ ಮತ್ತು ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಿದ್ದ ವಾಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಹಿಳೆಯರು ಅವಕಾಶ ಸಿಕ್ಕಾಗ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಪಂ ಸಿಇಒ ಮೋನಾ ರೋತ್ ಕರೆ ನೀಡಿದರು.ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮೈಸೂರಿನ ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯು ಚಾಮರಾಜನಗರದ ಮರಿಯಾಲದ ಬಸವ ರಾಜೇಂದ್ರ ಆಸ್ಪತ್ರೆಯ ಸಹಯೋಗದೊಂದಿಗೆ ಮಹಿಳೆಯರ ಆರೋಗ್ಯ ಮತ್ತು ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಿದ್ದ ವಾಕಥಾನ್ ಕಾರ್ಯಕ್ರಮಕ್ಕೆ ನಗರದ ಚಾಮರಾಜೇಶ್ವರ ದೇವಸ್ಥಾನದ ಆವರಣದ ಮುಂದೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚೆಗೆ ಪ್ರಕಟವಾದ ಪಿಯುಸಿ ಫಲಿತಾಂಶದಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ. ಇದನ್ನು ಗಮನಿಸಿದರೇ ಅವಕಾಶ ಸಿಕ್ಕಾಗ ಮಹಿಳೆಯರು ಉತ್ತಮ ಯಶಸ್ಸನ್ನು ಸಾಧಿಸಬಹುದು ಎಂದರು.ವಾಕಥಾನ್‌ನಲ್ಲಿ ಭಾಗವಹಿಸಿದ ಮಹಿಳೆಯರಿಗೆ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದ ಅವರು, ಕ್ಯಾನ್ಸರ್ ಕಾಯಿಲೆಯಿಂದ ತಮ್ಮ ತಂದೆಯನ್ನು ಕಳೆದುಕೊಂಡ ಬಗ್ಗೆ ತಿಳಿಸುತ್ತಾ, ಕ್ಯಾನ್ಸರ್ ಕಾಯಿಲೆಯನ್ನು ಆರಂಭಿಕ ಹಂತದಲ್ಲಿ ಪತ್ತೆಮಾಡಿದರೇ ರೋಗಿಯು ಬದುಕುಳಿಯುವ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಕಾಯಿಲೆಯನ್ನು ಆರಂಭಿಕ ಹಂತದಲ್ಲಿಯೇ ಪತ್ತೆಯಾದರೆ ಪರಿಣಾಮಕಾರಿಯಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬಹುದು ಎಂದರು.ಮಹಿಳೆಯರು ವರ್ಷಕ್ಕೊಮ್ಮೆಯಾದರೂ ಮುಂಜಾಗ್ರತಾ ಕ್ರಮವಾಗಿ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಮುಖ್ಯವಾಗಿ ಸ್ತನ ಕ್ಯಾನ್ಸರ್ ಈಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಮಹಿಳೆಯರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ಅಕಸ್ಮಿಕವಾಗಿ ಈ ಕಾಯಿಲೆ ಬಂದಿದ್ದರೆ ಬೇಗನೆ ಗುರುತಿಸುವುದಕ್ಕೆ ಅನುಕೂಲವಾಗುತ್ತದೆ. ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ನೀಡಿ ಪ್ರಾಥಮಿಕ ಹಂತದಲ್ಲೇ ಕಾಯಿಲೆಯನ್ನು ಗುಣಪಡಿಸಬಹುದು. ಅಲ್ಲದೇ ಮಹಿಳೆಯರು ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದರು.ಬಸವ ರಾಜೇಂದ್ರ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಶ್ವೇತಾ ಶಶಿಧರ್ ಮಾತನಾಡಿ, ತಮ್ಮ ಆಸ್ಪತ್ರೆಯು ಮಹಿಳೆಯರ ಆರೋಗ್ಯಕ್ಕೆ ಉತ್ತಮ ವಾತಾವರಣವನ್ನು ಕಲ್ಪಿಸಿದೆ. ವೈದ್ಯರು ಹಾಗೂ ಸಿಬ್ಬಂದಿ ಸಮರ್ಪಣೆ ಮನೋಭಾವನೆಯಿಂದ ಕೆಲಸ ಮಾಡುತ್ತಾರೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಕಾಯಿಲೆ ಬರುವುದುನ್ನು ತಡೆಗಟ್ಟಬಹುದು ಎಂದರು. ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯ ಮಕ್ಕಳ ಆಂಕೊಲಾಜಿಸ್ಟ್ ಡಾ. ಜೆ.ಸೌಮ್ಯ ಮಾತನಾಡಿ, ಇತ್ತೀಚೆಗೆ ಎಲ್ಲಾ ವಯೋಮಾನದವರಲ್ಲೂ ಕ್ಯಾನ್ಸರ್ ಹರಡುವಿಕೆ ಹೆಚ್ಚಾಗುತ್ತಿದೆ. ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಮತ್ತು ಲಸಿಕೆಯನ್ನು ನಿಗಧಿತ ವೇಳೆಯಲ್ಲಿ ಹಾಕಿಸಿಕೊಳ್ಳಬೇಕು ಎಂದರು. ೪೦ ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ವರ್ಷಕ್ಕೊಮ್ಮೆಯಾದರೂ ಮ್ಯಾಮೊಗ್ರಾಜಮ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ೯ ರಿಂದ ೪೫ ವರ್ಷ ವಯಸ್ಸಿನವರು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್‌ಪಿವಿ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು. ಲಿಂಗ ಸಮಾನತೆ, ಮಹಿಳಾ ಸುರಕ್ಷತೆ ಮತ್ತು ಆರೋಗ್ಯ ಜಾಗೃತಿಯನ್ನು ಉತ್ತೇಜಿಸುವ ಬ್ಯಾನರ್‌ಗಳನ್ನು ಹಿಡಿದ ಮಹಿಳೆಯರು, ಆರೋಗ್ಯ ಕಾರ್ಯಕರ್ತೆಯರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ಚಾಮರಾಜೇಶ್ವರ ದೇವಸ್ಥಾನದಿಂದ ಸಾಗಿ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ, ಅಲ್ಲಿ ವಾಕಥಾನ್ ಸಮಾಪ್ತಿಗೊಳಿಸಿದರು.

ಬಸವ ರಾಜೇಂದ್ರ ಆಸ್ಪತ್ರೆಯ ಅಧ್ಯಕ್ಷ ಡಾ.ಎಂ.ಬಸವರಾಜೇಂದ್ರ, ಬಿಎಚ್‌ಒದ ರೊಬೊಟಿಕ್ ಸರ್ಜನ್ ಡಾ. ರಕ್ಷಿತ್ ಶೃಂಗೇರಿ, ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ.ಎಂ.ಎಸ್. ರವಿಕುಮಾರ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ. ಸುಂದರೇಶ್ ಮತ್ತಿತರರು ವಾಕಥಾನ್‌ನಲ್ಲಿ ಭಾಗವಹಿಸಿದ್ದರು.

Share this article