ಮಹಿಳೆ ಮಾನಸಿಕ, ದೈಹಿಕ, ಸಾಮಾಜಿಕವಾಗಿ ಸಬಲವಾಗಲಿ: ಡಾ.ಅನಂತಮತಿ ಯಂಡೊಳ್ಳಿ

KannadaprabhaNewsNetwork |  
Published : Jul 4, 2025 11:47 PM IST
ತೇರದಾಳದ ಎಸ್‌ಡಿಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಇನ್ಫೋಸಿಸ್ ಸಂಸ್ಥೆ ಮಹಿಳೆಯರಿಗೆ ನೀಡಿದ ಹೊಲಿಗೆ ಯಂತ್ರಗಳ ವಿತರಣೆ ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕಿ ಡಾ.ಮಧುರಾ ದಾನಿಗೊಂಡ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಆರ್ಥಿಕ ಸ್ವಾವಲಂಬನೆ ಜೊತೆಗೆ ಮಹಿಳೆಯರು ದೈಹಿಕವಾಗಿ, ಸಾಮಾಜಿಕವಾಗಿ ಸಬಲರಾಗಿ ಕೌಟುಂಬಿಕ ಪ್ರಗತಿಯಲ್ಲಿ ತಮ್ಮದೆ ಆದ ಯೋಗದಾನ ನೀಡುವತ್ತ ಸಂಕಲ್ಪ ಹೊಂದಬೇಕು. ಬಹುಮುಖ್ಯವಾಗಿ ನಮ್ಮ ಮಕ್ಕಳು ಇಂದು ನಮ್ಮತನ ಕಳೆದುಕೊಳ್ಳುತ್ತಿರುವುದು ಕಳವಳಕಾರಿಯಾಗಿದ್ದು, ಅವರಿಗೆ ಸಂಸ್ಕೃತಿ, ಸಂಸ್ಕಾರ ನೀಡುವ ಗುರುತರ ಹೊಣೆಗಾರಿಕೆ ಪಾಲಕರ ಕರ್ತವ್ಯವಾಗಿದೆ ಎಂದು ರಬಕವಿಯ ಹೆಸರಾಂತ ಹೋಮಿಯೋಪಥಿ ತಜ್ಞೆ ಡಾ.ಅನಂತಮತಿ ಯಂಡೊಳ್ಳಿ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ,ತೇರದಾಳ(ರ-ಬ)

ಆರ್ಥಿಕ ಸ್ವಾವಲಂಬನೆ ಜೊತೆಗೆ ಮಹಿಳೆಯರು ದೈಹಿಕವಾಗಿ, ಸಾಮಾಜಿಕವಾಗಿ ಸಬಲರಾಗಿ ಕೌಟುಂಬಿಕ ಪ್ರಗತಿಯಲ್ಲಿ ತಮ್ಮದೆ ಆದ ಯೋಗದಾನ ನೀಡುವತ್ತ ಸಂಕಲ್ಪ ಹೊಂದಬೇಕು. ಬಹುಮುಖ್ಯವಾಗಿ ನಮ್ಮ ಮಕ್ಕಳು ಇಂದು ನಮ್ಮತನ ಕಳೆದುಕೊಳ್ಳುತ್ತಿರುವುದು ಕಳವಳಕಾರಿಯಾಗಿದ್ದು, ಅವರಿಗೆ ಸಂಸ್ಕೃತಿ, ಸಂಸ್ಕಾರ ನೀಡುವ ಗುರುತರ ಹೊಣೆಗಾರಿಕೆ ಪಾಲಕರ ಕರ್ತವ್ಯವಾಗಿದೆ ಎಂದು ರಬಕವಿಯ ಹೆಸರಾಂತ ಹೋಮಿಯೋಪಥಿ ತಜ್ಞೆ ಡಾ.ಅನಂತಮತಿ ಯಂಡೊಳ್ಳಿ ಕಿವಿಮಾತು ಹೇಳಿದರು.

ಶುಕ್ರವಾರ ತೇರದಾಳದ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯ ಎಸ್‌ಡಿಎಂ ಆಯುರ್ವೆದಿಕ್ ಮೆಡಿಕಲ್ ಕಾಲೇಜಿನಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸುವ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಆರ್ಥಿಕ ಸ್ವಾವಲಂಬನೆಯತ್ತ ಮಾತ್ರ ನಮ್ಮ ಚಿತ್ತ ನೆಡದೆ ನಮ್ಮ ಮುಂದಿನ ಪೀಳಿಗೆ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಮರೆಯದಂತೆ ನೋಡಿಕೊಂಡು, ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಸುತ್ತಲಿನ ಪರಿಸರ ಮಾಲಿನ್ಯವಾಗದಂತೆ ನಮ್ಮ ಜವಾಬ್ದಾರಿ ನಿರ್ವಹಿಸಿದರೆ ಉತ್ತಮ ಆರೋಗ್ಯ ನಮ್ಮ ಅಡಿಯಾಳಾಗುತ್ತದೆಂದರು. ಮಿಸೆಸ್ ಇಂಡಿಯಾ ಪುರಸ್ಕೃತೆ ಹೇಮಲತಾ ನಿರಂಜನ ಮಹಿಳೆಯರು ಸತತ ಪರಿಶ್ರಮದಿಂದ ಸಾಧನೆ ಮೆರೆಯಲು ಸಾಧ್ಯವೆಂದರು.

ಕಾರ್ಯಕ್ರಮ ಉದ್ಘಾಟಿಸಿದ ನೇತ್ರತಜ್ಞೆ ಡಾ.ಮಧುರಾ ದಾನಿಗೊಂಡ ಮಾತನಾಡಿ, ಆಯ್ಕೆಯಾದ ಮಹಿಳೆಯರಿಗೆ ನಮ್ಮ ಸಂಸ್ಥೆಯಲ್ಲಿ ತರಬೇತಿ ನೀಡಿದ್ದು, ಇದೀಗ ಇನ್ಫೋಸಿಸ್ ಸಂಸ್ಥೆಯಿಂದ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದ್ದು, ಇದು ನಿಮ್ಮ ಭವಿಷ್ಯದ ಬದುಕಿಗೆ ನೆರವಾಗಲಿದೆ ಎಂದರು.

ಇನ್ಫೋಸಿಸ್ ಸಾಮಾಜಿಕ ಸೇವಾ ಸಂಘಟನೆ ಮುಖ್ಯಸ್ಥ ನಾರಾಯಣ ಕುಲಕರ್ಣಿ ಮಾತನಾಡಿ, ಮಹಿಳೆ ಸಮಾಜದ ಆಧಾರಸ್ತಂಭ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಯ ನಡುವೆಯೂ ಸಮಾಜಿಕ ಸೇವೆಗೆ ನಮ್ಮೊಡನೆ ಕೈಜೋಡಿಸಿದ ಡಾ.ಮಹಾವೀರ ದಾನಿಗೊಂಡ ಪರಿವಾರದ ಕಾರ್ಯ ಪ್ರಶಂಸನಾರ್ಹ. ಬೆಳೆದರೆ ದಾನಿಗೊಂಡರಂತೆ, ಉಳಿದರೆ ಸುಧಾ ಮೂರ್ತಿ ತರಹ ಉಳಿಯಬೇಕು. ಫೌಂಡೇಶನ್ ₹೩೦೦ಕೋಟಿ ವೆಚ್ಚದಲ್ಲಿ ೧೩೦ ಕಾರ್ಯಕ್ರಮ ನಡೆಸುತ್ತಿದ್ದು, ಮುಧೋಳದಲ್ಲಿ ಎಚ್‌ಐವಿ ಪೀಡಿತ ೨೦೦೦ ಜನರಿಗೆ ಆಶ್ರಯ, ಆಹಾರ, ಮಕ್ಕಳಿಗೆ ಶಿಕ್ಷಣ ನೀಡಿದ್ದು, ಘಟಪ್ರಭಾದಲ್ಲಿ ದೇವದಾಸಿಯರಿಗೆ ಆಶ್ರಯ, ಆಹಾರ, ಅವರ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು, ಪುನರ್ವಸತಿ, ಉದ್ಯೋಗ ತರಬೇತಿ ನೀಡಲಾಗುತ್ತಿದೆ. ಕೈಗೊಂಡ ಯೋಜನೆಗಳ ಸಾಫಲ್ಯದತ್ತ ನಿಗಾ ವಹಿಸಲು ಪ್ರತ್ಯೇಕ ತಂಡ ಉಸ್ತುವಾರಿಯಲ್ಲಿದೆ. ಮಹಿಳೆಯರು ಕುಟುಂಬಕ್ಕಂಟಿದ ಬಡತನದ ಭೂತ ಹೊಡೆದೋಡಿಸಲು ಶ್ರದ್ಧೆಯುತ ದುಡಿಮೆಯ ಮಂತ್ರವನ್ನು ನಮ್ಮ ಮುಂದಿನ ಪೀಳಿಗೆ ಬಳುವಳಿಯಾಗಿ ನೀಡಬೇಕಿದೆ ಎಂದು ಹೇಳಿದರು.

ಮುಧೋಳದ ಕಮಲಾ ಜೇಡರ ಅನಿಸಿಕೆ ಹಂಚಿಕೊಂಡರು. ಡಾ.ಸಿದ್ಧಾಂತ ದಾನಿಗೊಂಡ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಿದ್ದು ಹಾವೋಜಿ ನಿರ್ವಹಿಸಿದರು. ಆಡಳಿತಾಧಿಕಾರಿ ರಾಜೇಂದ್ರ ಪರೀಟ, ಪ್ರಾಚಾರ್ಯ ಡಾ.ಪ್ರಭಾಕರ ಅಪರಾಜ, ಡಾ.ಪೂರ್ಣಿಮಾ ಉಂಡಿ, ಅಮೃತಾ ಶಿರಗಾವಿ, ಅಶ್ವಿನಿ ನಾಯ್ಕರ, ಸುರೇಖಾ ಅಮ್ಮಣಗಿಮಠ, ರಶ್ಮಿ ಗಸ್ತಿ, ಸುರೇಶ ವಾಲಿಕಾರ ಸೇರಿದಂತೆ ೨೫೦ ತರಬೇತಿ ಪಡೆದ ಮಹಿಳೆಯರು ಉಪಸ್ಥಿತರಿದ್ದರು.

PREV