ಪೊಳಲಿ ಶೀನಪ್ಪ ಹೆಗ್ಗಡೆ, ಎಸ್‌ಆರ್‌ ಹೆಗ್ಡೆ ಪ್ರಶಸ್ತಿಗೆ ಇತಿಹಾಸ ತಜ್ಞೆ ಡಾ, ಮಾಲತಿ ಆಯ್ಕೆ

KannadaprabhaNewsNetwork |  
Published : Jul 4, 2025 11:47 PM IST
04ಮಾಲತಿ | Kannada Prabha

ಸಾರಾಂಶ

ಇತಿಹಾಸತಜ್ಞೆ ಡಾ. ಮಾಲತಿ ಕೃಷ್ಣಮೂರ್ತಿ ಅವರನ್ನು ೨೦೨೫ನೇ ಸಾಲಿನ ಪೊಳಲಿ ಶೀನಪ್ಪ ಹೆಗ್ಗಡೆ - ಎಸ್.ಆರ್. ಹೆಗ್ಡೆ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಖ್ಯಾತ ಇತಿಹಾಸತಜ್ಞೆ ಡಾ. ಮಾಲತಿ ಕೃಷ್ಣಮೂರ್ತಿ ಅವರನ್ನು ೨೦೨೫ನೇ ಸಾಲಿನ ಪೊಳಲಿ ಶೀನಪ್ಪ ಹೆಗ್ಗಡೆ - ಎಸ್.ಆರ್. ಹೆಗ್ಡೆ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಈ ಪ್ರಶಸ್ತಿಯು 20 ಸಾವಿರ ರು. ನಗದುಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.ಡಾ. ಮಾಲತಿ ಕೃಷ್ಣಮೂರ್ತಿ ಉಡುಪಿ ಕಲ್ಯಾಣಪುರದ ಮೂಡುಕುದುರು ಎಂಬಲ್ಲಿ ಶ್ರೀನಿವಾಸ ರಾವ್ ಮತ್ತು ವರದಾಲಕ್ಷ್ಮಿ ದಂಪತಿ ಮಗಳಾಗಿ ೧೯೫೨ರಲ್ಲಿ ಜನಿಸಿದರು. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಮೊದಲ ಬ್ಯಾಚ್ ವಿದ್ಯಾರ್ಥಿನಿಯಾಗಿ, ಮೈಸೂರು ವಿವಿಯ ಬಿಎ ಪದವಿ ಪರೀಕ್ಷೆಯಲ್ಲಿ 4ನೇ ರ್‍ಯಾಂಕ್, ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ, ಮೈಸೂರು ವಿವಿ ಇತಿಹಾಸ ವಿಭಾಗದಲ್ಲಿ ಎಂಎ 2ನೇ ರ್‍ಯಾಂಕ್ ಪಡೆದಿದ್ದಾರೆ. ಇತಿಹಾಸತಜ್ಞ ಡಾ.ಬಿ ಸುರೇಂದ್ರ ರಾವ್ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ೧೯೭೨ರಿಂದ ಇವರು ಇತಿಹಾಸ ಉಪನ್ಯಾಸಕರಾಗಿ, ಪ್ರಾಧ್ಯಾಪಕಿಯಾಗಿ ಭಂಡಾರ್‌ಕಾರ್ಸ್ ಕಾಲೇಜು ಹಾಗೂ ಎಂ.ಜಿ.ಎಂ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿ ನಂತರ ವಿಭಾಗ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿ, ೨೦೦೮ರಲ್ಲಿ ಸ್ವಯಂನಿವೃತ್ತಿ ಪಡೆದರು. ಡಾ.ಬಿ.ಎ ವಿವೇಕ ರೈ ಸಂಪಾದಕತ್ವದ ‘ಮಂಗಳೂರು ದರ್ಶನ’ದ ಪ್ರಥಮ ಸಂಪುಟದಲ್ಲಿ ದೇವಾಲಯಗಳ ನಗರಿ ಉಡುಪಿ ಎಂಬ ದಾಖಲೀಕರಣಕ್ಕೆ ಮಾರ್ಗದರ್ಶನ, ಬಂಟರ ಇತಿಹಾಸ ಪ್ರಾಜೆಕ್ಟ್‌ನಲ್ಲಿ ಸಹಾಯಕ ಮಾರ್ಗದರ್ಶಕರಾಗಿ, ಹಲವಾರು ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಾಪಕರ ಸಂಘ (ಮಾನುಷ)ದ ಸದಸ್ಯೆಯಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

೧೯೯೪ರಲ್ಲಿ ‘ಕುಂದಾಪುರ ತಾಲೂಕು ಒಂದು ಅಧ್ಯಯನ’ ಎಂಬ ಗ್ರಂಥವನ್ನು ಎಚ್.ವಿ. ನರಸಿಂಹ ಮೂರ್ತಿ ಅವರೊಂದಿಗೆ ಸಂಪಾದಿಸಿದ್ದಾರೆ.

PREV