- ನಗರದಲ್ಲಿ ನಡೆದ ಸ್ವಚ್ಛ ವಾಹಿನಿ ವಾಹನ ಚಾಲನಾ ತರಬೇತಿ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟನೆ
ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪಯೋಗ ಪಡೆದುಕೊಂಡು ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ತಮ್ಮ ಬದುಕು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಡಿಆರ್‌ಡಿಎ ಕೋಶ ಯೋಜನಾ ನಿರ್ದೇಶಕಿ ನಯನಾ ಕರೆ ನೀಡಿದ್ದಾರೆ.
ನಗರದ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರ (ಕಾಬ್‌ಸೆಟ್) ದಲ್ಲಿ ನಡೆದ ಸ್ವಚ್ಛ ವಾಹಿನಿ ವಾಹನ ಚಾಲನಾ ತರಬೇತಿಯ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸ್ವಚ್ಛತೆ ಕಾಪಾಡುವಲ್ಲಿ ಬಹಳ ಮುತುವರ್ಜಿ ವಹಿಸಿದ್ದಾರೆ. ಇವರಿಗೆ ಲಘು ಮೋಟಾರ್ ವಾಹನ ಚಾಲನ ಸ್ವಚ್ಛ ವಾಹಿನಿ ತರಬೇತಿ ನೀಡುವುದರಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಮಹಿಳಾ ಸಬಲೀಕರಣ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಸರ್ಕಾರದ ವಿವಿಧ ಯೋಜನೆ ಸದುಪಯೋಗ ಪಡೆದು ಸ್ವತಂತ್ರ ಬದುಕನ್ನು ರೂಪಿಸಿ ಕೊಳ್ಳಬೇಕೆಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಎನ್ ಆರ್ ಎಲ್ ಎಂ ನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಕೆ.ಕೆ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ 226 ಗ್ರಾಮ ಪಂಚಾಯಿತಿಗಳಿದ್ದು, ಇದರಲ್ಲಿ 200 ಗ್ರಾಮ ಪಂಚಾಯಿತಿಗಳಿಗೆ ಲಘು ಮೋಟಾರ್ ವಾಹನ ಚಾಲನ ತರಬೇತಿ ನೀಡಲಾಗುತ್ತಿದೆ. ಶೇ.60 ಕ್ಕಿಂತಲೂ ಹೆಚ್ಚಿನ ಜನರು ಸ್ವಚ್ಛ ವಾಹಿನಿ ವಾಹನವನ್ನು ಚಲಾಯಿಸುತ್ತಾ ತಮ್ಮ ಬದುಕನ್ನು ಕಟ್ಟಿ ಕೊಂಡಿದ್ದಾರೆ. ಸರ್ಕಾರದಿಂದ ಸಿಗುವಂತಹ ಸೌಲಭ್ಯ ಬಳಸಿಕೊಂಡು ಮಾದರಿ ಚಾಲಕರಾಗಬೇಕು ಎಂದರು.