ಸಮಸ್ಯೆಗಳ ವಿರುದ್ಧ ಮಹಿಳೆ ಧ್ವನಿ ಎತ್ತಲಿ

KannadaprabhaNewsNetwork | Published : Mar 9, 2025 1:45 AM

ಸಾರಾಂಶ

ಮಾ. 8, 1918ರಂದು ನ್ಯೂಯಾರ್ಕ್‌ನ ಸಿದ್ಧ ಉಡುಪಿನ ಕಾರ್ಖಾನೆಯ ಸಾವಿರಾರು ಮಹಿಳಾ ಕಾರ್ಮಿಕರು, ಉಸಿರುಗಟ್ಟಿಸಿ ದುಡಿಯುವ ವಾತಾವರಣ ವಿರೋಧಿಸಿ, 8 ಗಂಟೆ ದುಡಿಮೆ ಅವಧಿ ನಿಗದಿಗಾಗಿ, ಸಮಾನ ವೇತನ, ಹೆರಿಗೆ ರಜೆಯ ಹಕ್ಕಿಗಾಗಿ ಧ್ವನಿಯೆತ್ತಿದರು. ಅವರ ಮೇಲೆ ಗುಂಡು ಹಾರಿಸಲಾಯಿತು. ಈ ಐತಿಹಾಸಿಕ ಹೋರಾಟದ ಸ್ಫೂರ್ತಿಯಿಂದ ವಿಶ್ವದ್ಯಾದ್ಯಂತ ಹಲವು ಮಹಿಳಾ ಹೋರಾಟಗಳಿಗೆ ನಾಂದಿ ಹಾಡಿತು.

ಕೊಪ್ಪಳ:

ಮಹಿಳಾ ದಿನದ ನೈಜ ಇತಿಹಾಸದಿಂದ ಸ್ಫೂರ್ತಿ ಪಡೆದುಕೊಂಡು ಮಹಿಳೆಯರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಸಿದ್ಧರಾಗಿ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಸೆಕ್ರೆಟರಿಯೇಟ್ ಸದಸ್ಯೆ ವಿಜಯಲಕ್ಷ್ಮಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಹಾಗೂ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಂಟಿಯಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಮಾ. 8, 1918ರಂದು ನ್ಯೂಯಾರ್ಕ್‌ನ ಸಿದ್ಧ ಉಡುಪಿನ ಕಾರ್ಖಾನೆಯ ಸಾವಿರಾರು ಮಹಿಳಾ ಕಾರ್ಮಿಕರು, ಉಸಿರುಗಟ್ಟಿಸಿ ದುಡಿಯುವ ವಾತಾವರಣ ವಿರೋಧಿಸಿ, 8 ಗಂಟೆ ದುಡಿಮೆ ಅವಧಿ ನಿಗದಿಗಾಗಿ, ಸಮಾನ ವೇತನ, ಹೆರಿಗೆ ರಜೆಯ ಹಕ್ಕಿಗಾಗಿ ಧ್ವನಿಯೆತ್ತಿದರು. ಅವರ ಮೇಲೆ ಗುಂಡು ಹಾರಿಸಲಾಯಿತು. ಈ ಐತಿಹಾಸಿಕ ಹೋರಾಟದ ಸ್ಫೂರ್ತಿಯಿಂದ ವಿಶ್ವದ್ಯಾದ್ಯಂತ ಹಲವು ಮಹಿಳಾ ಹೋರಾಟಗಳಿಗೆ ನಾಂದಿ ಹಾಡಿತು ಎಂದರು.

ಭ್ರೂಣಾವಸ್ಥೆಯಿಂದ ಮಸಣ ಸೇರುವವರೆಗೂ ಹಲವು ಬಗೆಯ ಗೌರವ, ಅನಾದರಗಳಿಗೆ ಮಹಿಳೆ ಬಲಿಯಾಗುತ್ತಿದ್ದಾಳೆ. ಇತ್ತೀಚೆಗೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿಯಿಂದಾಗಿ ಬಾಣಂತಿಯರು ಹಾಗೂ ಶಿಶು ಮರಣ ನಮ್ಮ ಆರೋಗ್ಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿವೆ. ರಾಜ್ಯದಲ್ಲಿ ಐದು ವರ್ಷಗಳಲ್ಲಿ 3,350 ಬಾಣಂತಿಯರ ಜೀವ ಬಲಿ ತೆಗೆದುಕೊಂಡಿದೆ ಎಂದು ಹೇಳಿದರು.

ಮಹಿಳೆ ಹಾಗೂ ಬಡವರಿಗೆ ನರಕ ಸದೃಶವಾಗಿರುವ ಬಂಡವಾಳಶಾಹಿ ವ್ಯವಸ್ಥೆಯನ್ನು ಬುಡ ಸಮೇತ ಕಿತ್ತು ಹಾಕುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ದಿನದ ಇತಿಹಾಸದಿಂದ ಎಲ್ಲರೂ ಸ್ಫೂರ್ತಿ ಪಡೆದು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಸನ್ನದ್ಧರಾಗಬೇಕು. ಆ ಮೂಲಕ ಮಹಿಳೆಯರಿಗೆ ನೈಜ ಘನತೆ, ಗೌರವ, ಹಕ್ಕುಗಳನ್ನು ಖಾತ್ರಿಪಡಿಸುವ ಶೋಷಣಾ ರಹಿತ ಹೊಸ ಸಮಾಜ ತರಲು ಶ್ರಮಿಸಬೇಕಾಗಿದೆ ಎಂದರು.

ಎಐಎಂಎಸ್ಎಸ್‌ನ ಜಿಲ್ಲಾ ಸಂಘಟನಾಕಾರರಾದ ಮಂಜುಳಾ ಮಜ್ಜಿಗಿ, ಸಹಾಯಕ ಪ್ರಾಧ್ಯಾಪಕಿ ನಾಗರತ್ನ ತಮ್ಮಿನಾಳ್, ಪ್ರಾಂಶುಪಾಲ ಗಣಪತಿ ಲಮಾಣಿ, ಸಂಘಟನೆಯ ಜಿಲ್ಲಾ ಸಂಘಟನಾಕಾರರಾದ ಶಾರದಾ ಗಡ್ಡಿ, ಸದಸ್ಯರಾದ ಹುಸೇನ್ ಬಿ., ಸೇರಿದಂತೆ ಇತರರು ಇದ್ದರು.

Share this article