ಹಾವೇರಿ: ಪ್ರತಿ ಪುರುಷನ ಯಶಸ್ಸಿನ ಹಿಂದೆ ಓರ್ವ ಮಹಿಳೆ ಇರುತ್ತಾಳೆ. ಮಹಿಳೆ ಎಲ್ಲ ರಂಗದಲ್ಲಿಯೂ ಸಾಧನೆ ಮಾಡುತ್ತಿದ್ದಾಳೆ. ಸ್ತ್ರೀಯನ್ನು ಶಕ್ತಿಸ್ವರೂಪಿಯಾಗಿ ಆರಾಧಿಸುವ ದೇಶ ನಮ್ಮದು ಎಂದು ಡಿಸಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳು ಹಾಗೂ ತಾಲೂಕು ಪಂಚಾಯಿತಿ ಮಹಿಳಾ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳೆ ಅಬಲೆಯಲ್ಲ, ಸಬಲೆ ಎಂದು ನಿರೂಪಿಸಿದ್ದಾಳೆ. ಅವಳು ಕಾಮಧೇನು ಸ್ವರೂಪಿಯಾಗಿರುತ್ತಾಳೆ. ಮದರ ಥೆರೇಸಾ, ಸಾಲು ಮರದ ತಿಮ್ಮಕ್ಕ, ಇಂದಿರಾ ಗಾಂಧಿ, ಸಾವಿತ್ರಾಬಾಯಿ ಫುಲೆ, ಸುಧಾಮೂರ್ತಿ ಮುಂತಾದ ಮಹಿಳೆಯರು ಸಾಧನೆ ಮಾಡಿದ್ದಾರೆ. ಮಹಿಳೆ ಅಡುಗೆ ಮನೆಯಿಂದ ಹಿಡಿದು ರಣರಂಗದವರೆಗೂ ಮಹಿಳೆ ಎಲ್ಲ ರಂಗದಲ್ಲಿಯೂ ಬೆಳೆದಿದ್ದಾಳೆ. ಸರ್ಕಾರದ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಗಳು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿವೆ. ಶಿಕ್ಷಣ, ಉದ್ಯೋಗ ಸೇರಿದಂತೆ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್ ಮಾತನಾಡಿ, ಇಂದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಒಂದೇ ಕಡೆ ನೋಡಿ ಸಂತೋಷವಾಯಿತು. ಇಂದು ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಮಹಿಳೆಯರು ಕುಟುಂಬದ ಜವಾಬ್ದಾರಿ ಜತೆಗೆ ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕು ಎಂದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕೆರು ಹಾಗೂ ತಾಪಂ ಆಡಳಿತಾಧಿಕಾರಿ ಸುರೇಶ ಹುಗ್ಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ ನವೀನಪ್ರಸಾದ ಕಟ್ಟಿಮನಿ, ವಲಯ ಮೇಲ್ವೀಚಾರಕಿ ಇಂದಿರಾ ಕನವಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ತಾಪಂ ಗ್ರಾ.ಉ. ಸಹಾಯಕ ನಿರ್ದೇಶಕ ಜಿ.ಜಿ. ನಾಯಕ್ ಸ್ವಾಗತಿಸಿದರು. ಶಿಲ್ಪಾ ಕಡ್ಡಿಪುಡಿ ಹಾಗೂ ಚಂದ್ರ ಮಾಳಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ನಾಗರಾಜ ಬಾರ್ಕಿ ವಂದಿಸಿದರು. ಗ್ರಾಮೀಣ ಅಭಿವೃದ್ಧಿ ಧರ್ಮಸ್ಥಳ ಯೋಜನೆ ಆದ್ಯತೆ
ರಾಣಿಬೆನ್ನೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದರ ಮೂಲಕ ಗ್ರಾಮಗಳಲ್ಲಿನ ದೇವಸ್ಥಾನ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ತಿಳಿಸಿದರು.ತಾಲೂಕಿನ ಬೇಲೂರು ಗ್ರಾಮದಲ್ಲಿ ಹುಲಿಗೆಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಕಲ್ಲಪ್ಪ ಮುಕ್ಕಣ್ಣನವರಿಗೆ ಒಂದು ರು. ಲಕ್ಷ ಡಿಡಿ ವಿತರಿಸಿ ಮಾತನಾಡಿದರು. ಗ್ರಾಮಗಳಲ್ಲಿ ದೇವಸ್ಥಾನಗಳು ಜೀರ್ಣೋದ್ಧಾರ ಹೊಂದಿದರೆ ಆ ಗ್ರಾಮವು ಧಾರ್ಮಿಕ ಮನೋಭಾವನೆಯಿಂದ ಕೂಡಿರುತ್ತದೆ ಎಂದರು.ಯೋಜನಾಧಿಕಾರಿ ಮಂಜುನಾಥ ಎಂ., ಮೇಲ್ವಿಚಾರಕ ಅನಂತ ಕರಣ್ಣನವರ, ಒಕ್ಕೂಟದ ಅಧ್ಯಕ್ಷೆ ಸರಸ್ವತಿ ಹಿರೇಮಠ, ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಅಧಿಕಾರಿಗಳು, ದೇವಸ್ಥಾನ ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.