ಕನ್ನಡಪ್ರಭ ವಾರ್ತೆ ಚಿಕ್ಕಬಳ್ಲಾಪುರ
ಸರ್ಕಾರಿ ಶಾಲಾ ಮಕ್ಕಳಿಗೆ ರುಚಿ, ಶುಚಿ, ಗುಣಮಟ್ಟದ ಆಹಾರವನ್ನು ಮಧ್ಯಾಹ್ನ ಅಕ್ಷರ ದಾಸೋಹದಲ್ಲಿ ನೀಡುವ ಮೂಲಕ ಮಕ್ಕಳ ಆರೋಗ್ಯ ಕಾಪಾಡಲು ಸಾಧ್ಯ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಆರ್.ಲಕ್ಷ್ಮೀ ಅಭಿಪ್ರಾಯಪಟ್ಟರು.ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹದ ಸಿಬ್ಬಂದಿಗೆ ಆಯೋಜಿಸಲಾಗಿದ್ದ ಕ್ಲಸ್ಟರ್ ಮಟ್ಟದ ಅಡುಗೆ ಸ್ವರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಎನ್.ಮಂಜುನಾಥ ಮಾತನಾಡಿ, ನಮ್ಮ ಕ್ಲಸ್ಟರ್ ನಲ್ಲಿ ಒಟ್ಟು 13 ಶಾಲೆಗಳಲ್ಲಿ 21 ಅಡುಗೆ ಸಿಬ್ಬಂದಿ ಇದ್ದಾರೆ. ಅಡುಗೆ ಮಾಡುವಾಗ ಮೊದಲು ಅಡುಗೆ ಕೋಣೆಯನ್ನು ಶುಭ್ರವಾಗಿ, ಸ್ವಚ್ಛತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಿವಿಧ ಶಾಲೆಗಳಿಂದ ಹೋಳಿಗೆ, ಅಕ್ಕಿ, ರಾಗಿ ರೊಟ್ಟಿಗಳು, ತರಕಾರಿ ಪಲಾವ್, ಪಾಯಸ, ಮೊಟ್ಟೆ ಪಲ್ಯ, ಉಚ್ಚೆಲ್ಲೂ, ದೊಡ್ಡ ಪತ್ರೆ ಚಟ್ನಿ, ಕೋಸಂಬರಿ, ಮುದ್ದೆ ಸಾರು, ಅನ್ನ, ಬೇಳೆ ಸಾರು, ಮೊಟ್ಟೆ ಕರಿ, ಗೋದಿ ಸಿಹಿ ಉಂಡೆ ಸೇರಿದಂತೆ ವಿವಿಧ ರೀತಿಯ ಆಹಾರವನ್ನು ಮಾಡಿದ್ದರು. ಇದರಲ್ಲಿ ಕೆಲವು ಅಡುಗೆಗಳಾದ ಅನಿಲ ರಹಿತ ಆಹಾರವನ್ನು ಸಹ ಅಡುಗೆ ಸ್ಪರ್ಧೆಯಲ್ಲಿ ಪ್ರದರ್ಶನ ಮಾಡಿದ್ದರು.
ಅಡುಗೆ ಸ್ಪರ್ಧೆಯಲ್ಲಿ ಕ್ಲಸ್ಟರ್ ಶಾಲೆಗಳಾದ ಕಠಾರಿ ಕದಿರೇನಹಳ್ಳಿ ಪ್ರಥಮ ಸ್ಥಾನ, ಆನೆಮಡಗು ಕೊತ್ತೂರು ಶಾಲೆ ದ್ವಿತೀಯ ಸ್ಥಾನ, ಕೇತೇನಹಳ್ಳಿ ತೃತೀಯ ಸ್ಥಾನ ಮತ್ತು ಉಳಿದ ಎಲ್ಲಾ ಶಾಲೆಗಳು ಸಮಾಧಾನಕರ ಬಹುಮಾನ ಪಡೆದವು.ಪ್ರಥಮ ಸ್ಥಾನ ಪಡೆದ ಶಾಲೆ ಮಾತ್ರ ತಾಲ್ಲೂಕು ಮಟ್ಟಕ್ಕೆ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ.
ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಯಾಸ್ಮಿನ್, ಬಡ್ತಿ ಮುಖ್ಯ ಶಿಕ್ಷಕರಾದ ನಳಿನಿ, ರಾಮಚಂದ್ರ ರೆಡ್ಡಿ, ಶಿಕ್ಷಕರಾದ ಶ್ರೀಮೂರ್ತಿ, ಶಾಂತಮ್ಮ, ಮೈಲಪ್ಪ, ಭಾರತಿ, ಲಾವಣ್ಯ, ನೂರ್ ಜಮಾನಿ, ವಿಶಾಲವತಿ, ಲತಾ, ಸುನೀತಾ, ಸುಮಾ ಸೇರಿದಂತೆ.ಶಾಲಾ ಸಿಬ್ಬಂಧಿ ಮತ್ತಿತರರು ಇದ್ದರು.