ಕನ್ನಡಪ್ರಭ ವಾರ್ತೆ ಸಿಂದಗಿ
ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರದಲ್ಲಿಯೂ ಮಹೋನ್ನತ ಸಾಧನೆಗೈದು, ದೇಶದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಇನ್ನರ್‌ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ ಬಣ್ಣಿಸಿದರು.ಪಟ್ಟಣದ ಲೊಯೋಲ ಶಾಲೆಯಲ್ಲಿ ಬುಧವಾರ ನಬಿರೋಷನ್ ಪ್ರಕಾಶನ, ಬೋರಗಿ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ವೀರನಾರಿ ಪ್ರಶಸ್ತಿ ಪ್ರದಾನ ಹಾಗೂ ಮಹಿಳಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸುವಲ್ಲಿ ಮತ್ತು ಕುಟುಂಬವನ್ನು ಮುನ್ನಡೆಸುವಲ್ಲಿ ಮಹಿಳೆಯರ ಪಾತ್ರ ಅಪಾರ ಇದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜಶೇಖರ ಕೂಚಬಾಳ ಮಾತನಾಡಿ, ಅಂದು ಹೆಣ್ಣು ಹುಟ್ಟಿದರೆ ಹೊರೆ, ಗಂಡು ಹುಟ್ಟಿದರೆ ದೊರೆ, ಹೆಣ್ಣು ಹುಣ್ಣು ಗಂಡು ಹೊನ್ನು ಎನ್ನುತ್ತಿದ್ದರು. ಆದರೆ ಇಂದು ಡಾ.ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ಮಹಿಳೆಯರು ಅಸಮಾನತೆಯ ನರಳಾಟದಿಂದ ಹೊರ ಬಂದು ಸಮಾನತೆಯೊಂದಿಗೆ ಪ್ರಗತಿಯ ಪಥದತ್ತ ಸಾಗುತ್ತ, ಸಮಾಜದ ಬಹುದೊಡ್ಡ ಶಕ್ತಿಯಾಗಿ ಬೆಳೆಯುತ್ತಿದ್ದಾರೆ ಎಂದು ತಿಳಿಸಿದರು.ಉಪತಹಸೀಲ್ದಾರ್ ಇಂದಿರಾಬಾಯಿ ಬಳಗಾನೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಯಶಸ್ವಿ ಪುರುಷರ ಹಿಂದೆ ಒಬ್ಬ ಮಹಿಳೆ ಇದ್ದಾಳೆ. ಮಹಿಳೆ ತಾಯಿಯಾಗಿ, ಸತಿಯಾಗಿ, ಮಗಳಾಗಿ, ತಂಗಿಯಾಗಿ ತನ್ನದೇಯಾದ ಜವಾಬ್ದಾರಿ ನಿರ್ವಹಿಸುತ್ತಾಳೆ. ಮಹಿಳೆ ಸೃಷ್ಟಿಕರ್ತೆ, ಅವಳು ಜೀವ ನೀಡುವ, ಜೀವ ತುಂಬವ ಕರುಣಾಮಯಿ. ಅಲ್ಲದೇ ತ್ಯಾಗದ ಪ್ರತೀಕ. ಹೆಣ್ತನ ಎಂಬುವುದೇ ಒಂದು ದೊಡ್ಡ ಶಕ್ತಿ ಎಂದರು.ಆರಕ್ಷಕ ಮೌಲಾಲಿ ಆಲಗೂರ ಮಾತನಾಡಿ, ಕಳೆದ 12 ವರ್ಷಗಳಿಂದ ನಬಿರೋಶನ್ ಪ್ರಕಾಶನ ಸಂಸ್ಥೆ ಮಾಡಿಕೊಂಡು ಬರುತ್ತಿರುವ ಸಾಹಿತ್ಯ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಇದೇ ವೇಳೆಗೆ ಕನ್ನಡ ಝೀ ವಾಹಿನಿಯ ಸರಿಗಮಪ ಖ್ಯಾತಿಯ ಗಾಯಕಿ ಸಾಕ್ಷಿ ಹಿರೇಮಠ, ನಾಗರತ್ನ ಮನಗೂಳಿ, ಇಂದಿರಾಬಾಯಿ ಜೆ.ಬಳಗಾನೂರ, ಸಭಿಯಾಬೇಗಂ ಮರ್ತೂರ, ಸುನಂದಾ ಯಂಪೂರೆ ಅವರಿಗೆ ವೀರನಾರಿ ಪ್ರಶಸ್ತಿ ಪ್ರದಾನ ಹಾಗೂ ಇತ್ತೀಚೆಗೆ ರಾಜ್ಯಪಾಲರಿಂದ ಚಿನ್ನದ ಪದಕ ಪಡೆದ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯ, ಬಿ.ಎಸ್.ಡಬ್ಲ್ಯೂ ವಿಭಾಗ, ವಿದ್ಯಾರ್ಥಿನಿ ಸುರೇಖಾ ಬಿರಾದಾರ, ಅಂತಾರಾಷ್ಟ್ರೀಯ ವಿಕಲಚೇತನ ಪ್ರತಿಭಾನ್ವಿತ ಕ್ರೀಡಾಪಟು ರಿಜ್ವಾನ್ ಜಮಾದಾರ, ಮಹಿಳಾ ಸ್ವಾಂತನ ಕೇಂದ್ರದ ಸಮಾಜ ಕಾರ್ಯಕರ್ತೆ ರಶ್ಮಿ ನೂಲನವರ, ಲಯೋಲ ಶಾಲೆಯ ನೀಲಮ್ಮ ಗೌರ ಇವರಿಗೆ ಸನ್ಮಾನಿಸಿ, ಗೌರವಿಸಲಾಯಿತು. ವೇದಿಕೆಯ ಮೇಲೆ ಚೇತನಗೌಡ ಬಿರಾದಾರ, ನಬಿಪಟೇಲ್ ಆಲಗೂರ, ಲೋಯಲ್ ಶಾಲೆಯ ಸಿಸ್ಟರ್ ಸೋಫಿಯಾ ಫೆರೇರ, ಶಾರದಾ ಮಂಗಳೂರು, ಶಿಲ್ಪಾ ಪತ್ತಾರ, ಶಿಕ್ಷಕ ಸಿದ್ದಪ್ಪ, ವರದಿಗಾರ ,ಮಹಾಂತೇಶ ನೂಲನವರ, ಶಾಂತಾ ಮೋಸಗಿ ಸೇರಿದಂತೆ ಅನೇಕರು ವೇದಿಕೆಯ ಮೇಲಿದ್ದರು. ಮಹಿಳಾ ಕವಯತ್ರಿಯರಿಂದ ಕವನ ವಾಚನ ನಡೆಯಿತು.