ಕನ್ನಡಪ್ರಭ ವಾರ್ತೆ ಮಂಡ್ಯ
ಹೆಣ್ಣು ಮಕ್ಕಳಿಗೆ ಅವಕಾಶ ಸಿಕ್ಕರೆ ಕ್ರಿಯಾಶೀಲತೆ ಅನಾವರಣಗೊಳ್ಳುತ್ತದೆ. ಇಂದು ಹಲವಾರು ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಸ್ವಾವಲಂಬನೆ ಸಾಧಿಸುತ್ತಿದ್ದಾರೆ. ಆಕೆಗೆ ಇನ್ನಷ್ಟು ಸ್ವಾತಂತ್ರ್ಯ, ಸಮಾನತೆ ಸಿಗಬೇಕಿದೆ. ಆಗ ಹೆಣ್ಣಿನ ಆರ್ಥಿಕ ಸಬಲೀಕರಣ ಸಾಧ್ಯವಾಗಲಿದೆ ಎಂದು ನುಡಿದರು.ಹೊಸ ತಲೆಮಾರಿನ ಯುವಕರು ಮೊಬೈಲ್‌ನಲ್ಲಿ ಮುಳುಗಿ ಹೋಗಿರುವುದು ಅಪಾಯಕಾರಿ ಬೆಳವಣಿಗೆ. ಮೊಬೈಲ್ ಪ್ರತಿಯೊಬ್ಬರಲ್ಲಿರುವ ಕ್ರಿಯಾಶೀಲತೆಯನ್ನು ಹಾಳುಮಾಡುತ್ತದೆ. ಮೊಬೈಲ್ ಅನ್ನು ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಅದರಿಂದ ದೂರ ಉಳಿದು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಿ.ಅದು ಜೀವನದಲ್ಲಿ ಹೊಸ ಅನುಭವವನ್ನು ನೀಡುತ್ತದೆ. ಆ ಅನುಭವದೊಂದಿಗೆ ಹೊರಹೊಮ್ಮುವ ಸಾಹಿತ್ಯ ಶಾಶ್ವತವಾಗಿ ಉಳಿಯುತ್ತದೆ ಎಂದರು.ಸುಮಾರು ಮೂರನೇ ಶತಮಾನದಿಂದಲೂ ಸಮಾಜ ಹೆಣ್ಣನ್ನು ಶಕ್ತಿಯಾಗಿ ನೋಡದೆ ಸ್ವತ್ತಾಗಿ ನಡೆಸಿಕೊಂಡಿದೆ. ಹೆಣ್ಣನ್ನು ದೇವರೆಂದು ಪೂಜಿಸುವ ನೆಲದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದು ವಿಷಾದಕರ. ಇದಕ್ಕೆಲ್ಲಾ ಅಂತ್ಯವಾಡಬೇಕು. ಹೆಣ್ಣಿಗೆ ಸಮಾಜದಲ್ಲಿ ಸಿಗಬೇಕಾದ ಸ್ವಾತಂತ್ರ್ಯ, ಸಮಾನತೆ, ಹಕ್ಕುಗಳನ್ನು ಮುಕ್ತವಾಗಿ ನೀಡಬೇಕು. ಆಧುನಿಕ ಯುಗದಲ್ಲೂ ಹೆಣ್ಣಿನ ಬಗೆಗಿನ ತಾತ್ಸಾರ ಮನೋಭಾವವನ್ನು ಬಿಟ್ಟು ಅವಳಿಗೆ ಸಮಾಜ ಬೆಂಬಲವಾಗಿ ನಿಂತಾಗ ಏನನ್ನಾದರೂ ಸಾಧಿಸುತ್ತಾಳೆ ಎಂದು ವಿವರಿಸಿದರು. ಸಮಾಜದಲ್ಲಿ ಹೆಣ್ಣನ್ನು ಸಮಾನವಾಗಿ ನೋಡಿದರೆ ಏನಾಗಬಹುದು ಎಂಬುದಕ್ಕೆ ಕನ್ನಿಕಾ ಅವರ ಸಾಧನೆ ನೋಡಿದರೆ ತಿಳಿಯುತ್ತದೆ. ಜೀವ ಪೊರೆಯುವ ಶಕ್ತಿ ಹೆಣ್ಣಿಗಿದೆ. ನಿಸರ್ಗವೇ ತಾಯಿಗೆ ಈ ಕೊಡುಗೆ ನೀಡಿದೆ. ಇಂತಹ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾದರೆ ಸಮಾಜದ ಸ್ವಾಸ್ಥ್ಯ ಹೆಚ್ಚುತ್ತದೆ. ಪ್ರಗತಿಯ ಕಡೆ ಮುನ್ನಡೆಯುತ್ತದೆ ಎಂದರು.ಹೆಚ್.ಆರ್.ಕನ್ನಿಕಾ ಅವರ ‘ಲೈಫ್ ಮಾಕ್ಟೇಲ್’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಬೆಂಗಳೂರು ಶ್ರೀ ಶಾರದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಅನುಸೂಯ ಹೊಂಬಾಳೆ, ಶಿಕ್ಷಣ-ಸಮಾಜ ಸೇವೆ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಕನ್ನಿಕಾ ಮಾಡಿರುವ ಸಾಧನೆ ಪ್ರಶಂಸನೀಯ. ಅವಕಾಶ ಕೊಟ್ಟರೆ ಹೆಣ್ಣು ಹೊಸತನ್ನು ಹುಡುಕಿ ಸಾರ್ಥಕತೆ ಕಂಡುಕೊಳ್ಳುತ್ತಾಳೆ ಎಂದು ಅಭಿಪ್ರಾಯಪಟ್ಟರು.ಕವಿ ಕೊಟ್ಟದ್ದನ್ನು ಓದುಗರು ಆಸ್ವಾದಿಸಬೇಕು. ಈ ನಿಟ್ಟಿನಲ್ಲಿ ನಾನು ಇವರ ಕವಿತೆಗಳನ್ನು ಓದಿದ್ದೇನೆ. ತಮ್ಮ ಕವನ ಸಂಕಲನದಲ್ಲಿರುವ ೬೪ ಕವಿತೆಗಳಲ್ಲೂ ಅಕ್ಕರೆ-ಸಕ್ಕರೆ’, ಬೇವು-ಬೆಲ್ಲ’, ಸವಿ-ಜೇನು’, ಉಪ್ಪು ಹುಳಿ ಕಾರ’, ಚಿಗುರು-ಒಗರು’ ಎಂಬ ವಿಭಾಗಗಳಲ್ಲಿ ತಮ್ಮ ಬದುಕಿನ ಹೂರಣವನ್ನು ಕಟ್ಟಿಕೊಟ್ಟಿದ್ದಾರೆ. ಕಲಿಸುತ್ತಾ, ಕಲಿಯುತ್ತಾ, ಸಮಾಜದೊಂದಿಗೆ ಬೆರೆಯುತ್ತ್ತಾ ಸಾಧಕರಾಗಿ ಹೊರಹೊಮ್ಮಿರುವುದು ಆಶ್ಚರ್ಯ ಮೂಡಿಸುವುದಲ್ಲದೆ ತಮಗೂ ಪ್ರೇರಣೆಯಾಗಿದೆ ಎಂದು ಪ್ರಶಂಸಿಸಿದರು. ಎಂಆರ್‌ಎಂ ಪ್ರಕಾಶನದ ಪ್ರಕಾಶಕ ಮಂಜು ಮುತ್ತೇಗೆರೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಕರ್ತೃ ಹಾಗೂ ಕನ್ನಿಕ ಶಿಲ್ಪ ನವೋದಯ ಶಾಲೆಯ ಕಾರ್ಯದರ್ಶಿ ಹೆಚ್.ಆರ್.ಕನ್ನಿಕಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್, ಕಾರ್ಯಕ್ರಮ ಸಂಘಟಕರಾದ ದ.ಕೋ.ಹಳ್ಳಿ ಚಂದ್ರಶೇಖರ್, ಕೊತ್ತತ್ತಿ ರಾಜು, ಉಮೇಶ್, ಕೀಲಾರ ಕೃಷ್ಣೇಗೌಡ, ದೊ.ಚಿ.ಗೌಡ, ಎಂ.ಸಿ.ಲಂಕೇಶ್, ಟಿ.ಸತೀಶ್ ಜವರೇಗೌಡ ಸೇರಿ ಮತ್ತಿತರರು ಹಾಜರಿದ್ದರು.