ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳಾ ಸಾಧನೆ ಮರೆ: ಡಾ. ಆರ್. ಸುನಂದಮ್ಮ

KannadaprabhaNewsNetwork |  
Published : Apr 12, 2026, 02:45 AM IST
ಹೊಸಪೇಟೆಯ ಹೋಟೆಲ್ ಮಲ್ಲಿಗೆ ಸಭಾಂಗಣದಲ್ಲಿ ಶನಿವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಹಿತಿ ಕೇಂದ್ರದ ನಿವೃತ್ತ ಉಪನಿರ್ದೇಶಕಿ ಡಾ. ಡಿ. ಮೀನಾಕ್ಷಿ ಅವರ ಅಭಿನಂದನ ಗ್ರಂಥ ಏನೂ ಬೇಡದವಳು .ಕೃತಿಯನ್ನು ಕರ್ನಾಟಕ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಡಾ. ಆರ್. ಸುನಂದಮ್ಮ ಲೋಕಾರ್ಪಣೆಗೊಳಿಸಿದರು. | Kannada Prabha

ಸಾರಾಂಶ

. ಮಹಿಳೆಯರ ಉತ್ತಮ ಕೆಲಸಗಳನ್ನು ಸಮಾಜ ಯಾಕೆ ಸರಿಯಾಗಿ ಗುರುಸುತ್ತಿಲ್ಲ. ಅದನ್ನೂ ಗುರುತಿಸುವ ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಡಾ. ಆರ್. ಸುನಂದಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಹೊಸಪೇಟೆ: ಹೆಣ್ಣನ್ನು ಸಮಾಜ ತಾಯ್ತನಕ್ಕೆ ಸೀಮಿತವಾಗಿ ನೋಡುವ ಪರಿಪಾಠ ಈಗಲೂ ಸಮಾಜದಲ್ಲಿ ನಡೆಯುತ್ತಿದೆ. ಮಹಿಳೆ ತನ್ನ ಜವಾಬ್ದಾರಿಗಳನ್ನು ಅರಿತುಕೊಂಡು ಉತ್ತಮ ಸಾಧನೆ, ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿರುತ್ತಾಳೆ. ಮಹಿಳೆಯರ ಉತ್ತಮ ಕೆಲಸಗಳನ್ನು ಯಾಕೆ ಸರಿಯಾಗಿ ಗುರುಸುತ್ತಿಲ್ಲ. ಅದನ್ನೂ ಗುರುತಿಸುವ ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಡಾ. ಆರ್. ಸುನಂದಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಇಲ್ಲಿನ ಹೋಟಲ್ ಮಲ್ಲಿಗೆ ಹೋಟಲ್‌ ಸಭಾಂಗಣದಲ್ಲಿ ಶನಿವಾರ ನಡೆದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಹಿತಿ ಕೇಂದ್ರದ ನಿವೃತ್ತ ಉಪನಿರ್ದೇಶಕಿ ಡಾ. ಡಿ. ಮೀನಾಕ್ಷಿ ಅವರ ಅಭಿನಂದನಾ ಗ್ರಂಥ ‘ಏನೂ ಬೇಡದವಳು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಅನೇಕ ಸಂದರ್ಭಗಳಲ್ಲಿ ಪುರುಷರಿಗಿಂತ ಹೆಣ್ಣು ಮಕ್ಕಳು ಹೆಚ್ಚು ಸಾಧನೆ ಮಾಡಿರುತ್ತಾರೆ. ಆಗಲೂ ಆಕೆಯನ್ನು ಸೀಮಿತ ಚೌಕಟ್ಟಿನಲ್ಲೇ ಗುರುತಿಸಲಾಗುತ್ತದೆ. ಹೆಚ್ಚೆಂದರೆ ಮಾತೃವಾತ್ಸಲ್ಯದವರು ಎಂಬ ಏಕನಾಮ ಪದದೊಂದಿಗೆ ಅವರಿಗೆ ಗೌರವ ಸೂಚಿಸಲಾಗುತ್ತದೆ. ಆಮೂಲಕ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳಾ ಸಾಧನೆಯನ್ನು ಮರೆ ಮಾಚಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಡಾ. ಮೀನಾಕ್ಷಿ ಅವರು ಕನ್ನಡ ವಿಶ್ವವಿದ್ಯಾಲಯದ ವಾರ್ಡನ್ ನಿಂದ ಸೇವೆ ಆರಂಭಿಸಿ ವಿವಿಯಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಸಮಿತಿ ಅಧ್ಯಕ್ಷರಾಗಿ, ಮಾಹಿತಿ ಕೇಂದ್ರದ ಉಪನಿರ್ದೇಶಕರಾಗಿದ್ದರು. ಈ ನಡುವೆ ಅನೇಕ ಜವಾಬ್ದಾರಿಗಳನ್ನು ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಈ ವೇಳೆ ಅವರು ತೋರಿದ ವೃತ್ತಿಪರ ಕೌಶಲ್ಯಗಳು, ಎದುರಿಸಿದ ಸವಾಲುಗಳನ್ನೂ ಪುಸ್ತಕದಲ್ಲಿ ಚಿತ್ರಿಸಬೇಕಿತ್ತು. ಈ ನಿಟ್ಟಿನಲ್ಲಿ ಮತ್ತೊಂದು ಅಭಿನಂದನಾ ಗ್ರಂಥ ಹೊರತರುವ ಪ್ರಯತ್ನವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಬೆಂಗಳೂರಿನ ಹಿರಿಯ ಪತ್ರಕರ್ತ ಡಿ. ಉಮಾಪತಿ ಮಾತನಾಡಿ, ದೇಶದಲ್ಲಿ ಹೊಲ ಮತ್ತು ಮನೆಯಲ್ಲಿ ದುಡಿಯುವ ಮಹಿಳೆಯರು ಶೇ. 64ರಷ್ಟಿದ್ದಾರೆ. ಪುರುಷರು ಹೊಲದಲ್ಲಿ ಮಾತ್ರ ದುಡಿಯುತ್ತಾರೆ. ಆದರೆ, ಮನೆಯಲ್ಲಿ ಕೆಲಸ ಮಾಡುವುದಿಲ್ಲ. ಹೆಣ್ಣನ್ನು ರೈತ ಎಂದು ಗುರುತಿಸುವುದಿಲ್ಲ. ರೈತ ಎಂದರೆ ಪುರುಷ ಮಾತ್ರ ಎನ್ನುವಷ್ಟರ ಮಟ್ಟಿಗೆ ನಾವೆಲ್ಲರೂ ಹೇಳುತ್ತಿರುವುದು ವಿಪರ್ಯಾಸವಾಗಿದೆ ಎಂದರು.

ಹಂಪಿ ವಿಶ್ವವಿದ್ಯಾಲಯದ ಮಾಹಿತಿ ಕೇಂದ್ರದ ನಿವೃತ್ತ ನಿರ್ದೇಶಕ ಕೆ.ಜಿ. ವಾಸುಕಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನವೀಯತೆ ಮರೆಯುತ್ತಿದ್ದೇವೆ. ನಿತ್ಯ ಜೀವನದಲ್ಲಿ ಮಾನವೀಯತೆ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯವಾಗಲಿದೆ ಎಂದ ಅವರು ಡಾ. ಡಿ. ಮೀನಾಕ್ಷಿ ಅವರ ಬಹುಮುಖ ವ್ಯಕ್ತಿತ್ವವನ್ನು ಕೊಂಡಾಡಿದರು. ಕೃತಿ ಸಂಪಾದಿಸಿದ ಅಪೇಕ್ಷಾ ಬಡಿಗೇರ ಅವರಂತಹ ಹೊಸ ತಲೆಮಾರಿನವರಲ್ಲಿ ಉಜ್ವಲ ಭವಿಷ್ಯ ಕಾಣುವಂತಾಗಬೇಕು ಎಂದರು.

ಮುರನಾಳ ಮಳೆರಾಜೇಂದ್ರ ಮಠದ ಜಗನ್ನಾಥ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕೃತಿಯ ಸಂಪಾದಕಿ ಅಪೇಕ್ಷಾ ಬಡಿಗೇರ ಮಾತನಾಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ವೀರೇಶ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಜಗನ್ನಾಥ ಮಹಾಸ್ವಾಮೀಜಿ, ಶಿಷ್ಯರಿಂದ ಸಿತಾರ್ ವಾದನ, ವಿಜಯಕುಮಾರ ಬಡಿಗೇರ ತಂಡದವರಿಂದ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ, ನೃತ್ಯ ವಿಭಾಗದ ವಿದ್ಯಾರ್ಥಿಗಳಿಂದ ಹಿಂದೂಸ್ತಾನಿ ಸಂಗೀತ ಕಛೇರಿ ನಡೆಯಿತು. ನಾಗರಾಜ ಪತ್ತಾರ, ಮೌನೇಶ ಬಡಿಗೇರ ಅವರಿಂದ ಮೌನೇಶ್ವರ ವಚನಗಳ ಗಾಯನ ನಡೆಯಿತು. ಗೋಣಿಬಸಪ್ಪ ಸ್ವಾಗತಿಸಿದರು. ಲಿಂಗರಾಜು ವಂದಿಸಿದರು. ಸುಮಾ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಗಾದಿ ಹೊಸ ಚಿಂತನೆ, ಹೊಸ ಸಂಕಲ್ಪಗಳ ಆರಂಭ: ಡಾ. ಚಂದ್ರಕಾಂತ ಭಟ್
ಸಂಪಾಜೆ ಗ್ರಾಮ ಪಂಚಾಯಿತಿಗೆ 3ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ