ಹೆಬ್ರಿ: “ಯುಗಾದಿ ಎಂದರೆ ಕೇವಲ ಹೊಸ ವರ್ಷದ ಆರಂಭವಲ್ಲ; ಅದು ಹೊಸ ಚಿಂತನೆ, ಹೊಸ ಸಂಕಲ್ಪಗಳ ಆರಂಭವಾಗಿದೆ. ಬೇವು-ಬೆಲ್ಲದ ರುಚಿ ಜೀವನದ ಸಿಹಿ-ಕಹಿ ಅನುಭವಗಳನ್ನು ಸ್ವೀಕರಿಸುವುದನ್ನು ನಮಗೆ ಕಲಿಸುತ್ತದೆ. ಯುಗಾದಿ ಹಬ್ಬವು ಭಾರತೀಯ ಸಂಸ್ಕೃತಿಯ ವೈಭವವನ್ನು, ಕಾಲಚಕ್ರದ ಮಹತ್ವವನ್ನು ಹಾಗೂ ಪ್ರಕೃತಿಯ ಪುನರುತ್ಥಾನವನ್ನು ಪ್ರತಿಬಿಂಬಿಸುತ್ತದೆ. ಪಂಚಾಂಗ ಶ್ರವಣವು ಯುಗಾದಿಯ ಪ್ರಮುಖ ಅಂಶವಾಗಿದ್ದು, ಅದು ಭವಿಷ್ಯದ ಬಗ್ಗೆ ಜ್ಞಾನ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ. ಇದೇ ಯುಗಾದಿಯ ಮಹತ್ವ” ಎಂದು ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಕಾಂತ ಭಟ್ ಅವರು ಹೇಳಿದರು.ಅವರು ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ “ಯುಗಾದಿ ಉತ್ಸವ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಹಿಂದಿ ಪ್ರಾಧ್ಯಾಪಕರಾದ ಮುರಳಿಕೃಷ್ಣ ಅವರು ಮಾತನಾಡಿ, ಯುಗಾದಿ ಹಬ್ಬವು ಭಾರತೀಯ ಸಂಸ್ಕೃತಿಯ ವೈಭವವನ್ನು, ಕಾಲಚಕ್ರದ ಮಹತ್ವವನ್ನು ಹಾಗೂ ಪ್ರಕೃತಿಯ ಪುನರುತ್ಥಾನವನ್ನು ಪ್ರತಿಬಿಂಬಿಸುತ್ತದೆ. ಇದು ನಮ್ಮ ಬದುಕಿನಲ್ಲಿ ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಂರಕ್ಷಣೆಯ ಅಗತ್ಯವನ್ನು ನೆನಪಿಸುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿದ್ಯಾಧರ ಹೆಗ್ಡೆ ಎಸ್ ಅವರು ಮಾತನಾಡಿ, ಪ್ರತಿ ಯುಗಾದಿಯೂ ನಮ್ಮ ತಪ್ಪುಗಳನ್ನು ಸರಿಪಡಿಸಿ ಉತ್ತಮ ವ್ಯಕ್ತಿಗಳಾಗಲು ಒಂದು ಅವಕಾಶವಾಗಿದೆ. ಪ್ರಕೃತಿಯ ಹೊಸ ಹಸಿರು ಮೊಳಕೆಯಂತೆ, ಯುಗಾದಿ ನಮ್ಮ ಜೀವನದಲ್ಲೂ ಹೊಸ ಆಶಾಭಾವನೆಗಳನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಹೊಸತನ್ನು ಆಶಿಸಿ ಸದಾ ಜೀವನೋಲ್ಲಾಸವನ್ನು ಹೊಂದಿರಬೇಕು ಎಂದು ಕರೆ ನೀಡಿದರು.ಡಾ. ಸುರೇಂದ್ರ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬೈರವಿ ಪಾಂಡ್ಯ ಅವರು ಅತಿಥಿಗಳನ್ನು ಸ್ವಾಗತಿಸಿದರು. ಗಣೇಶ ಎಸ್ ಅವರು ವಂದಿಸಿದರು. ಸಂಜನಾ ಪ್ರಾರ್ಥನೆ ನಡೆಸಿದರು ಹಾಗೂ ರವೀಂದ್ರ ಕಾರ್ಯಕ್ರಮ ನಿರೂಪಿಸಿದರು.ಈ ಕಾರ್ಯಕ್ರಮವನ್ನು ಕಾಲೇಜಿನ ಐಕ್ಯೂಎಸಿ ಘಟಕ, ಸಾಹಿತ್ಯ ಸಂಘ ಮತ್ತು ಕೆ.ಆರ್.ಎಮ್.ಎಸ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಸುಷ್ಮಾ ರಾವ್, ಡಾ. ಪ್ರಜ್ಞಾ, ಪ್ರವೀಣ್ ಶೆಟ್ಟಿ, ನಿವೇದಿತಾ ಮತ್ತು ಜ್ಯೋತಿ ಉಪಸ್ಥಿತರಿದ್ದರು.